ಬೆಂಗಳೂರು: ನವೆಂಬರ್ 1 ರಂದು ಸ್ಯಾಂಡಲ್ವುಡ್ ಯುವರಾಜ, ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಈ ಕುರಿತು ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈವರೆಗೆ 8 ಜನರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗಿದ್ದು, 2009ರ ನಂತರ ಮೊದಲ ಬಾರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಈ ಕುರಿತು ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಹಾಗೂ ಪುನೀತ್ ರಾಜ್ಕುಮಾರ್ ಕುಟುಂಬದವರೊಂದಿಗೆ ಸಭೆ ನಡೆಸಿ ಚರ್ಚಿಸಲಾಯಿತು ಎಂದು ಹೇಳಿದರು.
ಇದನ್ನೂ ಓದಿ: Puneeth Parva: ನಾಳೆ ʻಪುನೀತ ಪರ್ವʼ.. ಗಂಧದ ಗುಡಿಯ ರಾಜಕುಮಾರನಿಗೆ ಸಿನಿತಾರೆಯರ ನಮನ
ಪುನೀತ್ ರಾಜ್ಕುಮಾರ್ ನಿಜವಾದ ಕರ್ನಾಟಕ ರತ್ನ
ಕನ್ನಡ ಚಿತ್ರರಂಗಕ್ಕೆ ಹಾಗೂ ಕನ್ನಡ ಭಾಷೆ ಸಂಸ್ಕೃತಿಗೆ ಪುನೀತ್ ರಾಜ್ಕುಮಾರ್ ಅವರ ಕೊಡುಗೆ ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ . ತಮ್ಮ ಜೀವಮಾನದಲ್ಲಿ ದೊಡ್ಡ ಸಾಧನೆ ಮಾಡಿ ಎಲ್ಲರ ಮನದಾಳದಲ್ಲಿ ಚಿರಸ್ಥಾಯಿಯಾಗಿ ಉಳಿದಿರುವ ಪುನೀತ್ ಅವರು ನಿಜವಾದ ಕರ್ನಾಟಕ ರತ್ನ. ಅವರು ಸದಾಕಾಲ ಯುವಜನರಿಗೆ ಪ್ರೇರಣೆಯಾಗಿರಬೇಕೆಂಬ ಮಹಾದಾಸೆಯಿಂದ ಕರುನಾಡಿನ ಮನೆಮಗ ‘ಅಪ್ಪು’ಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
ಪ್ರಶಸ್ತಿ ಪ್ರದಾನ ಸಮಾರಂಭವನ್ನು ನವೆಂಬರ್ 1ರಂದು ಸಂಜೆ 5 ಗಂಟೆಗೆ ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಮೇಲೆ ಆಯೋಜಿಸಲಾಗುವುದು. ವಿಶೇಷ ಮುಖ್ಯ ಅತಿಥಿಗಳು, ಶ್ರೇಷ್ಠ ಸಾಹಿತಿಗಳು, ಖ್ಯಾತ ಚಲನಚಿತ್ರ ನಟರು, ಶಾಸಕರು, ಹಿರಿಯ ಸಾಧಕರು ಈ ಸಮಾರಂಭದಲ್ಲಿ ಭಾಗವಹಿಸುತ್ತಿದ್ದು, ಅರ್ಥಪೂರ್ಣ ಕಾರ್ಯಕ್ರಮವಾಗಲಿದೆ ಎಂದರು.
ಇದನ್ನೂ ಓದಿ: Puneeth Parva: 'ಪುನೀತ ಪರ್ವ' ಕಾರ್ಯಕ್ರಮಕ್ಕೆ ಡ್ರೆಸ್ ಕೋಡ್.!
ಬೆಂಗಳೂರಿನ ವಿವಿಧ ಕಡೆ ‘ಅಪ್ಪು’ಗೆ ಗೌರವ
ಪುನೀತ್ ರಾಜ್ಕುಮಾರ್ ಅವರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮವನ್ನು ದೊಡ್ಡ ಮಟ್ಟದಲ್ಲಿ ಆಯೋಜಿಸಬೇಕೆಂಬ ಅಭಿಮಾನಿಗಳ ಬೇಡಿಕೆ ಇರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, ನವೆಂಬರ್ 1ರ ನಂತರ ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ ಒಟ್ಟು 3 ಕಾರ್ಯಕ್ರಮಗಳನ್ನು ಸುಮಾರು10 ದಿನಗಳ ಕಾಲ ಆಯೋಜಿಸಲಾಗುವುದು ಎಂದು ತಿಳಿಸಿದರು. 2021ರ ಅಕ್ಟೋಬರ್ 29ರಂದು ಕನ್ನಡ ಚಿತ್ರರಂಗದ ಖ್ಯಾತ ನಟ ಪುನೀತ್ ರಾಜ್ಕುಮಾರ್ ಹೃದಯಾಘಾತದಿಂದ ನಿಧನರಾಗಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ