ನವೆದೆಹಲಿ: ಕಿರುತೆರೆ ನಟಿ ಹಾಗೂ ಸೆಲಿಬ್ರಿಟಿ ಜಗಿ ಜಾನ್ ಅವರು ತಮ್ಮ ಮನೆಯಲ್ಲಿಯೇ ಮೃತವಾಗಿ ಪತ್ತೆಯಾಗಿದ್ದಾರೆ. ಕೇರಳದ ಕುರುವನ್ಕೋರ್ ನಲ್ಲಿರುವ ಒಂದು ಫ್ಲಾಟ್ ನಲ್ಲಿ ಅವರು ತಮ್ಮ ತಾಯಿಯ ಜೊತೆಗೆ ವಾಸವಾಗಿದ್ದರು. ಫ್ಲಾಟ್ ನ ಕಿಚನ್ ನಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಸದ್ಯ ಪೊಲೀಸರು ಸಾವಿನ ಕಾರಣಗಳ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.
ANI ಸುದ್ದಿ ಸಂಸ್ಥೆ ನೀಡಿರುವ ಮಾಹಿತಿ ಪ್ರಕಾರ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು ಮಂಗಳವಾರ ಸಂಬಂಧಿತರ ವಿಚಾರಣೆ ನಡೆಸಿ ಪೋಸ್ಟ್ ಮಾರ್ಟಂ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲ ಆ ಬಳಿಕ ಮಾತ್ರವೇ ಅವರ ಸಾವಿನ ಕುರಿತು ಹೆಚ್ಚಿನ ಮಾಹಿತಿ ನೀಡಲು ಸಾಧ್ಯ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಜಗಿ ಅವರ ದೇಹದ ಮೇಲೆ ಯಾವುದೇ ರೀತಿಯ ಗಾಯದ ನಿಶಾನೆ ಇಲ್ಲ ಎನ್ನಲಾಗಿದೆ. ಮಗಳ ಸಾವಿನ ಸುದ್ದಿ ತಿಳಿದ ಅವರ ತಾಯಿ ಶಾಕ್ ಗೆ ಒಳಗಾಗಿದ್ದಾರೆ. ಪೊಲೀಸರು ಕೇಳುವ ಯಾವುದೇ ಪ್ರಶ್ನೆಗೆ ಅವರು ಉತ್ತರಿಸುತ್ತಿಲ್ಲ. ಮಗಳ ಸಾವು ಸಂಭವಿಸಿದ್ದ ವೇಳೆ ಅವರ ತಾಯಿ ಮನೆಯಲ್ಲಿಯೇ ಇದ್ದರು ಎನ್ನಲಾಗಿದೆ. ತಮ್ಮ ಮಗಳು ಕಿಚನ್ ನಲ್ಲಿ ಆಹಾರ ಬೇಯಿಸುತ್ತಿದ್ದಳು ಎಂದು ಹೇಳಿರುವ ಅವರ ತಾಯಿ ಬಳಿಕ ಪ್ರಜ್ಞೆ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.
ಮಾಧ್ಯಮಗಳ ವರದಿಗಳ ಪ್ರಕಾರ ಜಗಿ ಅವರ ನೆರೆಯಲ್ಲಿ ಇರುವ ವ್ಯಕ್ತಿಯೊಬ್ಬರು ಜಗಿ ಅವರ ಮೃತದೇಹವನ್ನು ನೋಡಿದ್ದಾರೆ ಎನ್ನಲಾಗಿದೆ. ಜಗಿ ಅವರ ಮಿತ್ರರೊಬ್ಬರು ಜಗಿ ತಮ್ಮ ಫೋನ್ ಕರೆಗೆ ರಿಸ್ಪಾನ್ಸ್ ಮಾಡುತ್ತಿಲ್ಲ ಸ್ವಲ್ಪ ನೋಡಿ ಎಂದು ಅವರ ನೆರೆಯಲ್ಲಿ ವಾಸವಾಗಿರುವ ವ್ಯಕ್ತಿಗೆ ಕರೆ ಮಾಡಿ ಸೂಚಿಸಿದ್ದರು ಎನ್ನಲಾಗಿದೆ. 45 ವರ್ಷ ವಯಸ್ಸಿನ ಜಗಿ ಜಾನ್ ಟೆಲಿವಿಷನ್ ನಲ್ಲಿ ಕುಕರಿ ಷೋ ನಡೆಸಿಕೊಡುತ್ತಿದ್ದರು. ಜಾಗಿ ಓರ್ವ ಉತ್ತಮ ಕಾರ್ಯಕ್ರಮ ನಿರೂಪಕಿ, ಹಾಡುಗಾರ್ತಿ, ಮಾಡೆಲ್ ಹಾಗೂ ಮೋಟಿವೇಷನಲ್ ಸ್ಪೀಕರ್ ಆಗಿದ್ದರು.