Egg freezing: ಸಾಮಾನ್ಯವಾಗಿ ಈ ಹಿಂದೆ ಕ್ಯಾನ್ಸರ್ ನಿಂದ ಬಳಲುತ್ತಿರುವ ಮಹಿಳೆಯರಿಗೆ ಎಗ್ ಫ್ರೀಸಿಂಗ್ ಅಂದರೆ ಮೊಟ್ಟೆಯ ಘನೀಕರಣವನ್ನು ಮಾಡಲಾಗುತ್ತಿತ್ತು. ಕಿಮೋಥೆರಪಿಯಂತಹ ಚಿಕಿತ್ಸೆಗಳು ಮೊಟ್ಟೆಯ ಗುಣಮಟ್ಟವನ್ನು ಹಾನಿಗೊಳಿಸುವುದರಿಂದ ಅವರ ಫಲವತ್ತತೆಯನ್ನು ಕಾಪಾಡಿಕೊಳ್ಳಲು ಮಹಿಳೆಯರು ಬಯಸುತ್ತಿದ್ದರು. ಆದಾಗ್ಯೂ, ಇಂದಿನ ದಿನಗಳಲ್ಲಿ ವೃತ್ತಿ, ಶಿಕ್ಷಣ ಅಥವಾ ಸೂಕ್ತ ಸಂಗಾತಿಯನ್ನು ಕಂಡುಕೊಳ್ಳದೇ ಇರುವಂತಹ ಹಲವು ಕಾರಣಗಳಿಂದ ತಾಯ್ತನವನ್ನು ಮುಂದೂಡಲು ಬಯಸುತ್ತಿರುವ ಮಹಿಳೆಯರು ಮೊಟ್ಟೆಗಳನ್ನು ಘನೀಕರಣಗೊಳಿಸಿಕೊಳ್ಳುವುದು ಸಾಮಾನ್ಯ ಸಂಗತಿಯಾಗಿದೆ. ವೈದ್ಯಕೀಯವಾಗಿ ಹೇಳುವುದಾದರೆ ಬಯಾಲಾಜಿಕಲ್ ಕ್ಲಾಕ್ ಒಂದು ವಾಸ್ತವವಾಗಿದೆ. ಏಕೆಂದರೆ, 35 ವರ್ಷ ಪ್ರಾಯದ ನಂತರ ಮಹಿಳೆಯ ಅಂಡಾಶಯದ ಮೀಸಲು ಕ್ಷೀಣಿಸುತ್ತದೆ ಮತ್ತು ಗರ್ಭಧಾರಣೆಯ ಸಾಧ್ಯತೆಗಳು ಕಡಿಮೆಯಾಗುತ್ತಾ ಹೋಗುತ್ತವೆ.
ಆದಾಗ್ಯೂ, ವಿಜ್ಞಾನದ ಪ್ರಗತಿಯು ಮಾತೃತ್ವ ಅಥವಾ ತಾಯ್ತನವನ್ನು ಮುಂದೂಡಲು ಬಯಸುವ ಮಹಿಳೆಯರಿಗೆ ಕೆಲವು ನಮ್ಯತೆ, ಆಯ್ಕೆ ಮತ್ತು ಸ್ವಾತಂತ್ರ್ಯವನ್ನು ನೀಡಿದೆ. ಮಹಿಳೆಯು ತನ್ನ ವೃತ್ತಿ ಜೀವನದಲ್ಲಿ ಮತ್ತು ತಾಯಿಯಾಗಿರಬಹುದು ಹಾಗೂ ಗರ್ಭಧಾರಣೆಯ ನಿರ್ದಿಷ್ಟ ಸಮಯದ ಬಗ್ಗೆ ಚಿಂತಿಸದೇ ಅದೇ ವೇಳೆಯಲ್ಲಿ ಮೊಟ್ಟೆಯ ಘನೀಕರಣದೊಂದಿಗೆ ತನ್ನ ಬಯಾಲಾಜಿಕಲ್ ಕ್ಲಾಕ್ ಜವಾಬ್ದಾರಿಯನ್ನು ವಹಿಸಿಕೊಳ್ಳಬಹುದಾಗಿದೆ. ಈ ಸಾಮಾಜಿಕ ಅಂಡಾಣು ಅಥವಾ ಮೊಟ್ಟೆ ಘನೀಕರಣದ ಹೊರತಾಗಿ ಆರೋಗ್ಯದ ಕಾರಣಗಳಿಂದ ಗರ್ಭಿಣಿಯಾಗಲು ಸಾಧ್ಯವಾಗದ ಅಥವಾ ಕೆಲವು ಆರೋಗ್ಯ ಸಮಸ್ಯೆಗಳಿಗೆ ಒಳಗಾಗುವ ಮಹಿಳೆಯರು ತಮ್ಮ ತಾಯ್ತನವನ್ನು ಮೊಟ್ಟೆಯ ಘನೀಕರಣದೊಂದಿಗೆ ಯೋಜಿಸಬಹುದಾಗಿದ್ದು, ಇದು ಮಹಿಳೆಯರಿಗೆ ವರದಾನವಾಗಿದೆ. ಮೊಟ್ಟೆಯ ಘನೀಕರಣವನ್ನು ಓಸೈಟ್ ಕ್ರಯೋಪ್ರಿಸರ್ವೇಶನ್ ಎಂದೂ ಕರೆಯಲಾಗುತ್ತಿದ್ದು, ಇದು ಮಹಿಳೆಯ ಮಾತೃತ್ವವನ್ನು ಭದ್ರಪಡಿಸಲು ನೆರವಾಗುವ ಸಂತಾನೋತ್ಪತ್ತಿ ತಂತ್ರಜ್ಞಾನದ (ART) ಎಂಬುದು ಒಂದು ವಿಶ್ವಾಸಾರ್ಹವಾದ ರೂಪವಾಗಿದೆ.
ಇದನ್ನೂ ಓದಿ : Diabetes : ಮಧುಮೇಹಕ್ಕೆ ರಾಮಬಾಣ ಈ ಎಲೆ, ಪ್ರತಿನಿತ್ಯ ಹೀಗೆ ಸೇವಿಸಿ.!
ಮೊಟ್ಟೆ ಘನೀಕರಣದ ಹಿಂದಿನ ಪ್ರಕ್ರಿಯೆ
ಸಂಪೂರ್ಣ ಮೊಟ್ಟೆ ಘನೀಕರಣ ಪ್ರಕ್ರಿಯೆ ಸಾಮಾನ್ಯವಾಗಿ 2 ರಿಂದ 3 ವಾರಗಳವರೆಗೆ ನಡೆಯುತ್ತದೆ. ಆದಾಗ್ಯೂ, ಬಹುತೇಕ ಚಕ್ರಗಳು (cycles) 2 ವಾರಗಳೊಳಗೆ ಪೂರ್ಣಗೊಳ್ಳುತ್ತವೆ. ನಂತರದ ದಿನಗಳಲ್ಲಿ ಮಹಿಳೆಯು ಗರ್ಭ ಧರಿಸಲು ಬಯಸಿದಲ್ಲಿ ಮೊಟ್ಟೆಗಳನ್ನು ಕರಗಿಸಿ ವೀರ್ಯದೊಂದಿಗೆ ಸಂಯೋಜನೆ ಮಾಡಿ ಭ್ರೂಣವನ್ನು ಗರ್ಭಾಶಯಕ್ಕೆ ಅಳವಡಿಸಬಹುದಾಗಿದೆ.
ಮೊಟ್ಟೆ ಘನೀಕರಣ ಆರಂಭಕ್ಕೆ ಮುನ್ನ ಸಂಬಂಧಿಸಿದ ವೈದ್ಯರು ಋತುಚಕ್ರ ಮತ್ತು ಹಾರ್ಮೋನ್ ಮಟ್ಟಗಳಂತಹ ಫಲವತ್ತತೆಯನ್ನು ಪಡೆಯಲು ಅಗತ್ಯವಾದ ಅಂಶಗಳನ್ನು ನಿರ್ಣಯಿಸುವ ಸಂಬಂಧ ಸಮಗ್ರ ವೈದ್ಯಕೀಯ ಇತಿಹಾಸವನ್ನು ಪರಿಶೀಲಿಸುತ್ತಾರೆ. ವೈದ್ಯರ ಪರಿಶೀಲನೆ ನಂತರ ಅಂಡಾಶಯದ ಮೀಸಲು ಅಥವಾ ನಿಮ್ಮ ಅಂಡಾಶಯದಲ್ಲಿ ಉಳಿದಿರುವ ಮೊಟ್ಟೆಗಳ ಸಂಖ್ಯೆಯನ್ನು ನಿರ್ಣಯಿಸುವ ವಿಧಾನವಾದ ಆಂಟ್ರಲ್ ಫಾಲಿಕಲ್ ಕೌಂಟ್ (AFC) ಅನ್ನು ಪರಿಶೀಲಿಸಲು ಟ್ರಾನ್ಸ್ ವಾಜಿನಲ್ ಅಲ್ಟ್ರಾಸೌಂಡ್ ಅನ್ನು ನಡೆಸಲಾಗುತ್ತದೆ.
ಮಹಿಳೆಯರು ಸಾಮಾನ್ಯವಾಗಿ ತಮ್ಮ ಅಂಡಾಶಯದಿಂದ ತಿಂಗಳಿಗೆ ಒಂದು ಮೊಟ್ಟೆಯನ್ನು ಬಿಡುಗಡೆ ಮಾಡುತ್ತಾರೆ. ಆದರೆ, ವಯಸ್ಸಿನೊಂದಿಗೆ ಮೊಟ್ಟೆಗಳ ಗುಣಮಟ್ಟ ಮತ್ತು ಅದರ ಪ್ರಮಾಣವು ಕಡಿಮೆಯಾಗುತ್ತದೆ. ಘನೀಕರಿಸುವ ಪ್ರಕ್ರಿಯೆಗೆ ಕಡಿಮೆ ಮೊಟ್ಟೆಗಳು ಲಭ್ಯವಿದ್ದಾಗ ಯಶಸ್ವಿ ಗರ್ಭಧಾರಣೆಯನ್ನು ಸಾಧಿಸುವ ಸಾಧ್ಯತೆಗಳು ತುಲನಾತ್ಮಕವಾಗಿ ಕಡಿಮೆ ಇರುತ್ತವೆ.
ಇದನ್ನೂ ಓದಿ : ಭಾರತದಲ್ಲಿ ಕೃತಕ ಬುದ್ಧಿಮತ್ತೆ (AI) ಬಳಸಿಕೊಂಡು ಸುಧಾರಿತ ಸ್ಟ್ರೋಕ್ ನಿರ್ವಹಣೆ
ಮೊಟ್ಟೆ ಸಂಖ್ಯೆಯನ್ನು ಹೆಚ್ಚು ಮಾಡಲು ಮಹಿಳೆಯು ಹಾರ್ಮೋನ್ ಚಿಕಿತ್ಸೆಗೆ ಒಳಗಾಗಬೇಕು. ಇದರಿಂದ ಮೊಟ್ಟೆಗಳ ಉತ್ಪಾದನೆ ಹೆಚ್ಚಳ ಮತ್ತು ಮೊಟ್ಟೆಗಳ ಪಕ್ವತೆಯಾಗಲು ನೆರವಾಗುತ್ತದೆ. ಈ ಅವಧಿಯಲ್ಲಿ ವೈದ್ಯರು ಹಾರ್ಮೋನ್ ಚಿಕಿತ್ಸೆಗಳ ಪರಿಣಾಮಗಳು ಹಾಗೂ ಮೊಟ್ಟೆಯ ಬೆಳವಣಿಗೆಯನ್ನು ಗಮನಿಸಲು ನಿಯಮಿತವಾಗಿ ರಕ್ತದ ಪರೀಕ್ಷೆಗಳನ್ನು ಕೈಗೊಳ್ಳುತ್ತಾರೆ.
ಅಂಡಾಶಯದಿಂದ ಮೊಟ್ಟೆಯನ್ನು ಹಿಂಪಡೆಯಲಾಗುತ್ತದೆ ಮತ್ತು ಭವಿಷ್ಯದ ಬಳಕೆಗಾಗಿ ಮೊಟ್ಟೆಗಳನ್ನು ಸಂರಕ್ಷಿಸಲು ಕ್ರಯೋಪ್ರೊಟೆಕ್ಟರ್ ಅಥವಾ ಘನೀಕರಿಸುವ ದ್ರಾವಣವನ್ನು ಸೇರಿಸಲಾಗುತ್ತದೆ. ನಂತರ ಮೊಟ್ಟೆಗಳನ್ನು ವಿಟ್ರಿಫಿಕೇಶನ್ ಅಥವಾ ವೇಗವಾಗಿ ಘನೀಕರಿಸುವ ಮೂಲಕ ಘನೀಕರಿಸಲಾಗುತ್ತದೆ. ಅದೇ ರೀತಿ ಮೊಟ್ಟೆಗಳ ಮೇಲೆ ಐಸ್ ಸ್ಫಟಿಕಗಳು ರೂಪುಗೊಳ್ಳುವ ಅಪಾಯವನ್ನು ಕಡಿಮೆ ಮಾಡಲು ದ್ರವರೂಪದ ಸಾರಜನಕದ ಟ್ಯಾಂಕ್ ಗಳಲ್ಲಿ ಸಂಗ್ರಹಿಸಲಾಗುತ್ತದೆ.
ಅಂತಿಮವಾಗಿ, ಮಹಿಳೆಯರು ತಮ್ಮ ಫಲವತ್ತತೆಯನ್ನು ರಕ್ಷಣೆ ಮಾಡಿಕೊಳ್ಳಲು ಆಯ್ಕೆ ಮಾಡಿಕೊಳ್ಳುವ ಈ ಮೊಟ್ಟೆ ಘನೀಕರಣ ಪ್ರಕ್ರಿಯೆಯು ಪರಿಣಾಮಕಾರಿಯಾಗಿರುತ್ತದೆ. ಇದೇ ವೇಳೆ, ಯಾವ ವಯಸ್ಸಿನಲ್ಲಿ ಮಹಿಳೆಯು ತನ್ನ ಮೊಟ್ಟೆಗಳನ್ನು ಘನೀಕರಿಸುವುದನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಅಂಶ ನಿರ್ಣಾಯಕವಾಗಿರುತ್ತದೆ. ನಿಮ್ಮ 20 ಮತ್ತು 30 ನೇ ವರ್ಷದ ಆರಂಭದಲ್ಲಿ ಮೊಟ್ಟೆಗಳನ್ನ್ಉ ಮುಕ್ತಗೊಳಿಸಲು ಸಲಹೆ ನೀಡಲಾಗುತ್ತದೆ. ಏಕೆಂದರೆ, ಇದು ಯಶಸ್ಸಿನ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ ಮತ್ತು ಮೊಟ್ಟೆಯ ಗುಣಮಟ್ಟವೂ ಸಹ ಕಡಿಮೆಯಾಗುವುದಿಲ್ಲ. ನೀವು ಬಯಾಲಾಜಿಕಲ್ ಕ್ಲಾಕ್ ಅನ್ನು ಮಣಿಸಲು ಬಯಸಿದರೆ ಇದು ಖಂಡಿತವಾಗಿಯೂ ಒಂದು ಉತ್ತಮ ಪರಿಹಾರವಾಗಿದೆ.
ಲೇಖಕರು: ಡಾ.ಅಪೂರ್ವ ಸತೀಶ್ ಅಮರನಾಥ್, ಫರ್ಟಿಲಿಟಿ ಕನ್ಸಲ್ಟೆಂಟ್, ನೋವಾ ಐವಿಎಫ್ ಫರ್ಟಿಲಿಟಿ, ಕಮ್ಮನಹಳ್ಳಿ, ಬೆಂಗಳೂರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.