ನಿಮ್ಮ ಬಳಿ‌ ಸರ್ಕಾರಕ್ಕೆ ಗೊತ್ತಿಲ್ಲದ ಚಿನ್ನ ಇದ್ದರೆ ಬೀಳಲಿದೆ ತೆರಿಗೆ ಅಥವಾ ದಂಡ!

ಈ ಹಿಂದೆ 5 ವರ್ಷಗಳಿಂದ ಬಳಕೆಯಾಗದೆ ಮನೆಯಲ್ಲಿ ಮತ್ತು‌ ದೇವಾಲಯಗಳಲ್ಲಿ ಇದ್ದ ಚೀನಾವನ್ನು ಬ್ಯಾಂಕಿನಲ್ಲಿ ಇಟ್ಟು ಬಡ್ಡಿ ನೀಡುವ ಯೋಜನೆ ರೂಪಿಸಿದ್ದ ಕೇಂದ್ರ ಸರ್ಕಾರ ಈಗ 'ಅಕ್ರಮ‌ ಚಿನ್ನವನ್ನು ಸಕ್ರಮಗೊಳಿಸುವ' ಯೋಜನೆ ಜಾರಿಗೆ ತರುವ ಚಿಂತನೆಯಲ್ಲಿದೆ.  

Updated: Aug 1, 2020 , 08:55 AM IST
ನಿಮ್ಮ ಬಳಿ‌ ಸರ್ಕಾರಕ್ಕೆ ಗೊತ್ತಿಲ್ಲದ ಚಿನ್ನ ಇದ್ದರೆ ಬೀಳಲಿದೆ ತೆರಿಗೆ ಅಥವಾ ದಂಡ!

ನವದೆಹಲಿ: ಬರಿದಾಗಿರುವ ಬೊಕ್ಕಸ ತುಂಬಿಕೊಳ್ಳಲು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರ ಜನಸಾಮಾನ್ಯರ ಚಿನ್ನದ ಮೇಲೆ ತೆರಿಗೆ (Tax) ಅಥವಾ ದಂಡ ವಿಧಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಈ ಹಿಂದೆ 5 ವರ್ಷಗಳಿಂದ ಬಳಕೆಯಾಗದೆ ಮನೆಯಲ್ಲಿ ಮತ್ತು‌ ದೇವಾಲಯಗಳಲ್ಲಿ ಇದ್ದ ಚೀನ್ನವನ್ನು ಬ್ಯಾಂಕಿನಲ್ಲಿ ಇಟ್ಟು ಬಡ್ಡಿ ನೀಡುವ ಯೋಜನೆ ರೂಪಿಸಿದ್ದ ಕೇಂದ್ರ ಸರ್ಕಾರ ಈಗ 'ಅಕ್ರಮ‌ ಚಿನ್ನ (Gold) ವನ್ನು ಸಕ್ರಮಗೊಳಿಸುವ' ಯೋಜನೆ ಜಾರಿಗೆ ತರುವ ಚಿಂತನೆಯಲ್ಲಿದೆ ಎನ್ನಲಾಗುತ್ತಿದೆ.

ಏನಿದು ಚಿನ್ನದ ಅಕ್ರಮ ಸಕ್ರಮ?
ಚಿನ್ನ ಕ್ಷಮಾದಾನ ಯೋಜನೆ ಎಂದೂ ಹೇಳಲಾಗುತ್ತಿರುವ ಈ ಯೋಜನೆಯ ಪ್ರಕಾರ, ಜನಸಾಮಾನ್ಯರು ತಮ್ಮ ಬಳಿ ಇರುವ ಚಿನ್ನದ ಬಗ್ಗೆ ತೆರಿಗೆ ಇಲಾಖೆಯ ಅಧಿಕಾರಿಗಳ ಎದುರು ಘೋಷಿಸಿಕೊಳ್ಳಬೇಕು. ದಾಖಲೆ ಇಲ್ಲದಿರುವ ಚಿನ್ನಕ್ಕೆ ತೆರಿಗೆ ಅಥವಾ ದಂಡವನ್ನು ಕಟ್ಟಿ 'ಅಕ್ರಮವಾದ ಚಿನ್ನವನ್ನು ಸಕ್ರಮ ಮಾಡಿಕೊಳ್ಳಬೇಕು.‌

ದಾಖಲೆಯ ಮಟ್ಟ ತಲುಪಿದ ಚಿನ್ನ 

ಈ ಅಕ್ರಮ ಸಕ್ರಮ ಯೋಜನೆ ಅಥವಾ ಚಿನ್ನ ಕ್ಷಮಾದಾನ ಯೋಜನೆಯು ಪ್ರಾಥಮಿಕ ಹಂತದಲ್ಲಿದೆ. ಕೇಂದ್ರ ಹಣಕಾಸು ಇಲಾಖೆಯಿಂದ‌ ಪ್ರಧಾನ ಮಂತ್ರಿಗಳ ಕಾರ್ಯಾಲಯಕ್ಕೆ ಇಂಥದೊಂದು ಪ್ರಸ್ತಾಪ ಹೋಗಿದೆ. ಮತ್ತೊಮ್ಮೆ ಹಣಕಾಸು ಇಲಾಖೆ ಮತ್ತು ಪ್ರಧಾನ ಮಂತ್ರಿಗಳ ಕಾರ್ಯಾಲಯದ ಹಿರಿಯ ಅಧಿಕಾರು ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ಪ್ರಧಾನಿ ಮೋದಿ ಮುಂದೆ ಮಂಡಿಸುತ್ತಾರೆ. ಮೋದಿ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎನ್ನಲಾಗಿದೆ.

ನರೇಂದ್ರ ಮೋದಿ 2015ರಲ್ಲೂ ಇದೇ ರೀತಿ ಚಿನ್ನದ ಪ್ರಮಾಣ ಘೋಷಿಸಿಕೊಳ್ಳುವ ಮತ್ತು ದಾಖಲೆ ಇಲ್ಲದ ಚಿನ್ನಕ್ಕೆ ತೆರಿಗೆ ಮತ್ತು ದಂಡ ವಿಧಿಸಲು ಮುಂದಾಗಿದ್ದರು. ಆದರೆ ಆಗ ಜನಸಾಮಾನ್ಯರಿಂದ ವಿರೋಧ ವ್ಯಕ್ತವಾಗಿತ್ತು. ಜೊತೆಗೆ ಆಗಷ್ಟೇ (2014ರಲ್ಲಿ) ಅಧಿಕಾರ ವಹಿಸಿಕೊಂಡಿದ್ದ ಅವರ ಎದುರು ಆರ್ಥಿಕ ಸಮಸ್ಯೆಗಳಿರಲಿಲ್ಲ.‌ ಆದರೀಗ ದೇಶದ ಆರ್ಥಿಕತೆ ಸಂಪೂರ್ಣ ಕುಸಿದಿದೆ. ರೂಪಾಯಿ ಮೌಲ್ಯ ಕುಸಿಯುತ್ತಿದೆ. ನೋಟ್ ಬ್ಯಾನ್ ಮಾಡಿದ ಬಳಿಕ ಆರ್ಥಿಕ ವಹಿವಾಟು ಸಮರ್ಪಕವಾಗಿ ನಡೆಯುತ್ತಿಲ್ಲ. ಸರಕು ಮತ್ತು ಸೇವಾ (ಜಿಎಸ್ ಟಿ) ಪದ್ಧತಿ ಸರಿಯಾಗಿ ಜಾರಿಗೊಳಿಸದ ಹಿನ್ನೆಲೆಯಲ್ಲಿ ಆರ್ಥಿಕ ವ್ಯವಹಾರಗಳಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈಗಂತೂ ಲಾಕ್ಡೌನ್ ಹಿನ್ನೆಲೆಯಲ್ಲಿ ಜಿಎಸ್ ಟಿ ಸಂಗ್ರಹವೂ ಆಗುತ್ತಿಲ್ಲ.‌ ನಿಯಮಗಳ ಪ್ರಕಾರ ರಾಜ್ಯಗಳಿಗೆ ಕೊಡಲೇಬೇಕಾದ ಜಿಎಸ್ ಟಿ ಪರಿಹಾರದ ಹಣವನ್ನೂ ಕೊಡಲು ಸಾಧ್ಯವಾಗುತ್ತಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲದ ಬೆಲೆ ಕಡಿಮೆ ಇದ್ದರೂ ದೇಶದಲ್ಲಿ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಲಾಗುತ್ತಿದೆ. ಆದರೂ ಹಣ ಹೊಂದಿಸಲು ಸಾಧ್ಯವಾಗುತ್ತಿಲ್ಲ.‌ 

ಇದೇ ಹಿನ್ನಲೆಯಲ್ಲಿ ಹೇಗಾದರೂ ಮಾಡಿ ಬರಿದಾಗಿರುವ ಬೊಕ್ಕಸ ತುಂಬಿಕೊಳ್ಳಬೇಕೆಂದು ಜನಸಾಮಾನ್ಯರ ಚಿನ್ನಕ್ಕೆ ತೆರಿಗೆ ಅಥವಾ ದಂಡ ವಿಧಿಸಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.‌ ಸದ್ಯ ಪ್ರಸ್ತಾವನೆ ರೂಪದಲ್ಲಿರುವ ಯೋಜನೆ ಯಾವಾಗ ಜಾರಿಯಾಗುತ್ತದೆ ಎಂಬುದನ್ನು ಕಾದುನೋಡಬೇಕು.