ಲಂಡನ್: 23 ವರ್ಷದ ಭಾರತೀಯ ಮೂಲದ ವೈದ್ಯೆಯೊಬ್ಬಳು ಈಗ ಮಿಸ್ ಇಂಗ್ಲೆಂಡ್ ಕಿರೀಟವನ್ನು ಧರಿಸಿದ್ದಾಳೆ ಎಂದು ಡೈಲಿ ಮೇಲ್ ವರದಿ ಮಾಡಿದೆ. ಎರಡು ವಿಭಿನ್ನ ವೈದ್ಯಕೀಯ ಪದವಿಗಳನ್ನು ಹೊಂದಿರುವ ಡರ್ಬಿಯ ಭಾಷಾ ಮುಖರ್ಜಿ( 23) 146 ರ ಐಕ್ಯೂ ಹೊಂದಿದ್ದಾರೆ ಅಲ್ಲದೆ ಐದು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಾಳೆ ಎಂದು ಮಾಧ್ಯಮ ವರದಿ ಮಾಡಿದೆ.
ಭಾಷಾ ಮುಖರ್ಜಿ ಗುರುವಾರ ಸಂಜೆ ಮಿಸ್ ಇಂಗ್ಲೆಂಡ್ ಫೈನಲ್ ಮುಗಿದ ಕೆಲವೇ ಗಂಟೆಗಳ ನಂತರ ಲಿಂಕನ್ಶೈರ್ ನ ಬೋಸ್ಟನ್ನಲ್ಲಿರುವ ಆಸ್ಪತ್ರೆಯಲ್ಲಿ ಕಿರಿಯ ವೈದ್ಯರಾಗಿ ತನ್ನ ಹೊಸ ಕೆಲಸವನ್ನು ಪ್ರಾರಂಭಿಸಬೇಕಾಗಿತ್ತು.
ಈಗ ಮಿಸ್ ಇಂಗ್ಲೆಂಡ್ ಸ್ಪರ್ಧೆಯ ಕುರಿತಾಗಿ ಮಾತನಾಡಿರುವ ಭಾಷಾ "ನಾನು ವೈದ್ಯಕೀಯ ಶಾಲೆಯಲ್ಲಿ ಅಧ್ಯಯನ ಮಾಡುವಾಗ ನನ್ನ ಸ್ಪರ್ಧೆಯ ವೃತ್ತಿ ಜೀವನ ಪ್ರಾರಂಭವಾಯಿತು. ಆದರೆ ನಂತರ ಸ್ವಲ್ಪ ವಿರಾಮ ನೀಡಿ ಈ ಸ್ಪರ್ಧೆಯಲ್ಲಿ ಭಾಗವಹಿಸಲು ನಿರ್ಧರಿಸಿದೆ' ಎಂದು ಹೇಳಿದರು.
ಭಾಷಾ ಮುಖರ್ಜೀ ಅವರು ಭಾರತದಲ್ಲಿ ಜನಿಸಿದರು, ಆದರೆ ಅವರು ಒಂಬತ್ತು ವರ್ಷದವಳಿದ್ದಾಗ ಅವರ ಕುಟುಂಬ ಯುಕೆಗೆ ಸ್ಥಳಾಂತರಗೊಂಡಿತು. ಅವರು ನಾಟಿಂಗ್ಹ್ಯಾಮ್ ವಿಶ್ವವಿದ್ಯಾಲಯದಿಂದ ವೈದ್ಯಕೀಯ ವಿಜ್ಞಾನ, ಔಷಧ ಮತ್ತು ಶಸ್ತ್ರಚಿಕಿತ್ಸೆಯಲ್ಲಿ ಎರಡು ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದಾರೆ. ಮಿಸ್ ಇಂಗ್ಲೆಂಡ್ ವಿಜೇತರಾಗಿ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಪ್ರವೇಶಿಸಲಿದ್ದಾರೆ ಮತ್ತು ಮಾರಿಷಸ್ ಗೆ ರಜಾ ದಿನಕ್ಕೆ ಹೋಗುವ ಅವಕಾಶವನ್ನು ಅವರು ಪಡೆದಿದ್ದಾರೆ.