ಆಂಧ್ರ ಪ್ರದೇಶದ ಗುಂಟೂರಿನಲ್ಲಿಂದು ಪ್ರಧಾನಿ ಮೋದಿ ರ‍್ಯಾಲಿ; ನಾಯ್ಡು ವಿರೋಧ

ಭಾನುವಾರ ಇಡೀ ರಾಜ್ಯದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಪ್ರತಿಭಟಿಸಲು ಪಕ್ಷದ ಕಾರ್ಯಕರ್ತರಿಗೆ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಕರೆ ನೀಡಿದ್ದಾರೆ.

Last Updated : Feb 10, 2019, 09:41 AM IST
ಆಂಧ್ರ ಪ್ರದೇಶದ ಗುಂಟೂರಿನಲ್ಲಿಂದು ಪ್ರಧಾನಿ ಮೋದಿ ರ‍್ಯಾಲಿ; ನಾಯ್ಡು ವಿರೋಧ title=
File Image

ಗುಂಟೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಆಂಧ್ರಪ್ರದೇಶದ ಪ್ರವಾಸ ಕೈಗೊಳ್ಳಲಿದ್ದು, ಗುಂಟೂರಿನಲ್ಲಿ ನಡೆಯಲಿರುವ ರ‍್ಯಾಲಿಯಲ್ಲಿ ಭಾಗಿಯಾಗಲಿದ್ದಾರೆ. ರಾಜ್ಯದ ಆಡಳಿತಾರೂಢ ಟಿಡಿಪಿಯೊಂದಿಗೆ ಮೈತ್ರಿ ಮುರಿದ ಬಳಿಕ ರಾಜ್ಯಕ್ಕೆ ಪ್ರಧಾನಿ ಮೋದಿಯವರ ಮೊದಲ ಭೇಟಿ ಇದಾಗಿದೆ. 

ಈ ವೇಳೆ ಬಿಜೆಪಿ ಸಭೆಯಲ್ಲಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ. ಇದಲ್ಲದೆ ಪೆಟ್ರೋಲಿಯಂ ಮತ್ತು ಅನಿಲಕ್ಕೆ ಸಂಬಂಧಿಸಿದ 6,825 ಕೋಟಿ ರೂ. ಯೋಜನೆಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಬಿಜೆಪಿ ಸಂಸದ ಜಿ.ವಿ. ಎಲ್. ನರಸಿಂಹ ರಾವ್ ಹೇಳಿದ್ದಾರೆ.

ಪ್ರಧಾನಿ ಮೋದಿ ಭೇಟಿ ವೇಳೆ ಭಾನುವಾರ ಇಡೀ ರಾಜ್ಯದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಪ್ರತಿಭಟಿಸಲು ಪಕ್ಷದ ಕಾರ್ಯಕರ್ತರಿಗೆ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಕರೆ ನೀಡಿದ್ದಾರೆ. 

ಸೋಮವಾರ ದೆಹಲಿಯಲ್ಲಿ ನಾಯ್ಡು ಪ್ರತಿಭಟನೆ:
ಸೋಮವಾರದಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ದೆಹಲಿಯಲ್ಲಿರುವ ಆಂಧ್ರ ಭವನದ ಎದುರುಗಡೆ ಆಂಧ್ರದ ವಿಶೇಷ ಸ್ಥಾನಕ್ಕಾಗಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಿದ್ದಾರೆ.ಇದಕ್ಕೆ ಪ್ರಜಾಪ್ರಭುತ್ವ ಉಳಿಸಿ ಎನ್ನುವ ವೇದಿಕೆಯಡಿ ಸುಮಾರು 22 ಪ್ರತಿಪಕ್ಷದ ಸದಸ್ಯರು ಕೂಡ ಸಾಥ್ ನೀಡಲಿದ್ದಾರೆ ಎನ್ನಲಾಗಿದೆ.

2014 ರಲ್ಲಿ ರಾಜ್ಯವನ್ನು ವಿಭಜಿಸಿದ ಬಳಿಕ ರಾಜ್ಯದ ಪರಿಸ್ಥಿತಿ ಹೇಗಿದೆ ಎಂದು ನೋಡಲು ಮೋದಿ ರಾಜ್ಯಕ್ಕೆ ಬರುತ್ತಿದ್ದಾರೆ ಎಂದು ನಾಯ್ಡು ಆರೋಪಿಸಿದ್ದಾರೆ. ಈ ಮೊದಲು ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿಯ ಬಗ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದ ನಾಯ್ಡು, 'ಜನರು ಇನ್ನೂ ಬದುಕುತ್ತಿದ್ದಾರೋ ಅಥವಾ ಇಲ್ಲವೇ ಎಂದು ನೋಡಲು ಅವರು ಇಲ್ಲಿಗೆ ಬರುತ್ತಿದ್ದಾರೆಯೇ?' ರಾಜ್ಯ ಸರಕಾರವನ್ನು ಅಸ್ಥಿರಗೊಳಿಸಲು ಪಿತೂರಿ ನಡೆಸಲಾಗಿತ್ತು ಎಂದಿದ್ದಾರೆ.

Trending News