ಆಗ್ರಾ: ನವಜಾತ ಶಿಶುಗಳೊಂದಿಗೆ ಬರುವ ತಾಯಂದಿರಿಗೆ ತಾಜ್ ಮಹಲ್ ನೋಡಲು ಸಂತೋಷವೇನೋ ಆಗುತ್ತಿತ್ತು. ಆದರೆ ಮಕ್ಕಳಿಗೆ ಹಾಲು ಕುಡಿಸಲು ಪ್ರತ್ಯೇಕ ಕೊಠಡಿ ಇರದ ಕಾರಣ ತೊಂದರೆ ಎದುರಿಸುತ್ತಿದ್ದರು. ಈ ಬಗ್ಗೆ ಗಮನ ಹರಿಸಿದ್ದ ಭಾರತೀಯ ಪುರಾತತ್ವ ಸಮೀಕ್ಷೆ (ಎಎಸ್‌ಐ) ತಾಜ್ ಮಹಲ್ ಆವರಣದಲ್ಲಿ ಸ್ತನ್ಯಪಾನ ಕೋಣೆ(Baby feeding room)ಯನ್ನು ತಾಜ್ ಮಹಲ್ ಕ್ಯಾಂಪಸ್‌ನಲ್ಲಿ ಇಂದಿನಿಂದ ತೆರೆದಿದೆ.
ತಾಜ್ ಮಹಲ್‌ಗೆ ಪ್ರತಿದಿನ ಸರಾಸರಿ 22,000 ಪ್ರವಾಸಿಗರು ಭೇಟಿ ನೀಡುತ್ತಾರೆ. ಇದು ಭಾರತೀಯ ಮತ್ತು ವಿದೇಶಿ ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಯಾಗಿದೆ. ತಾಜ್ ಮಹಲ್ ಭೇಟಿಗಾಗಿ ಮಕ್ಕಳೊಂದಿಗೆ(ಶಿಶು) ಬರುವ ತಾಯಂದಿರಿಗೆ ಅನುಕೂಲವಾಗುವಂತೆ ಗುರುವಾರ (ಆಗಸ್ಟ್ 29) ರಿಂದ ಹವಾನಿಯಂತ್ರಿತ ಬೇಬಿ ಫೀಡಿಂಗ್ ರೂಂ ತೆರೆಯಲಾಗುವುದು ಎಂದು ತಾಜ್ ಮಹಲ್ ಆಡಳಿತ ವರ್ಗ ತಿಳಿಸಿದೆ. ಈ ವರ್ಷದ ಆರಂಭದಲ್ಲಿ, ಭಾರತೀಯ ಪುರಾತತ್ವ ಸಮೀಕ್ಷೆ (ಎಎಸ್‌ಐ) ಇಲ್ಲಿ ಸ್ತನ್ಯಪಾನ ಕೋಣೆಯನ್ನು ತೆರೆಯುವುದಾಗಿ ಘೋಷಿಸಿದ್ದು, ಇದು ಮಹಿಳಾ ಪ್ರವಾಸಿಗರಿಗೆ ನೆಮ್ಮದಿ ನೀಡುತ್ತದೆ.
ತಾಜ್ ಮಹಲ್ ಸಂಕೀರ್ಣದಲ್ಲಿರುವ ನರ್ಸಿಂಗ್ ರೂಮ್ ಅನ್ನು ಕೇಂದ್ರ ಸಂಸ್ಕೃತಿ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಗುರುವಾರ ಉದ್ಘಾಟಿಸಲಿದ್ದಾರೆ. ಎಎಸ್‌ಐನಲ್ಲಿನ ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ ವಸಂತ್ ಕುಮಾರ್ ಸ್ವರ್ಣಕರ್, "ಭಾರತೀಯ ಸ್ಮಾರಕವೊಂದರಲ್ಲಿ ತೆರೆಯಲಾದ ಮೊದಲ ಶಿಶು ಆಹಾರ ಕೊಠಡಿ ಇದು" ಎಂದು ಹೇಳಿದರು.
ತಾಜ್‌ಮಹಲ್ ಸಂಕೀರ್ಣದಲ್ಲಿ ನಿರ್ಮಿಸಲಾಗಿರುವ 12*12 ಅಡಿ ಕೋಣೆ ಇದಾಗಿದೆ ಎಂದು ಹೇಳಿದರು. ಈ ಕೋಣೆಯಲ್ಲಿ ಮಕ್ಕಳ ಡಯಾಪರ್ ಬದಲಾಯಿಸುವ ಟೇಬಲ್ ಮತ್ತು ರಬ್ಬರ್ ನೆಲಹಾಸನ್ನು ಹೊಂದಿದೆ. ಸೋಫಾ ಸೆಟ್ ಅನ್ನು ಮಗುವಿಗೆ ಫೀಡ್ ಮಾಡಲು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಅವರು ತಿಳಿಸಿದರು.
ತಾಯಂದಿರಿಗೆ ಸಹಾಯ ಮಾಡಲು ಈ ಬೇಬಿ ಫೀಡಿಂಗ್ ರೂಂನಲ್ಲಿ ಮಹಿಳಾ ಉದ್ಯೋಗಿ ಇರುತ್ತಾರೆ. ಸ್ತನ್ಯಪಾನ ಮಾಡುವ ತಾಯಂದಿರಿಗೆ ಈ ಕೊಠಡಿಯಿಂದ ಖಾಸಗಿ ಸ್ಥಳ ಸಿಗುತ್ತದೆ, ಇದು ತಾಯಂದಿರಿಗೆ ಬಹಳ ಮುಖ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.