ನವದೆಹಲಿ: ನಿಮಗೂ ಬ್ಯಾಂಕ್ ನಲ್ಲಿ ಏನಾದರೂ ಕೆಲಸ ಇದ್ದರೆ ಇಂದೇ ಆ ಕೆಲಸ ಮುಗಿಸಿಕೊಳ್ಳಿ. ವಾಸ್ತವವಾಗಿ, ಡಿಸೆಂಬರ್ ಕೊನೆಯ 10 ದಿನಗಳಲ್ಲಿ 5 ದಿನ ಬ್ಯಾಂಕ್ ಗಳು ಕಾರ್ಯನಿರ್ವಹಿಸುವುದಿಲ್ಲ. ಬ್ಯಾಂಕ್ ನೌಕರರ ಸಂಘಟನೆಯ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್ಬಿಯು) ಡಿಸೆಂಬರ್ 21 ಮತ್ತು 26 ರ ಮುಷ್ಕರವನ್ನು ಪ್ರಕಟಿಸಿದೆ. 11 ನೇ ದ್ವಿಪಕ್ಷೀಯ ವೇತನ ತಿದ್ದುಪಡಿಗಾಗಿ ಬೇಷರತ್ತಾದ ಆದೇಶವನ್ನು ನೀಡುವಂತೆ ಒತ್ತಾಯಿಸಿ ಈ ಮುಷ್ಕರ ಘೋಷಣೆ ಮಾಡಲಾಗಿದೆ ಎಂಬ ಮಾಹಿತಿಯನ್ನು ಬುಧವಾರ ಅಧಿಕಾರಿಗಳ ಪರವಾಗಿ ನೀಡಲಾಗಿದೆ.
ಆರು ದಿನಗಳಲ್ಲಿ ಒಂದೇ ಒಂದು ದಿನ ತೆರೆಯಲಿದೆ ಬ್ಯಾಂಕ್:
ಇದಲ್ಲದೆ, ಬಹುತೇಕ ಬ್ಯಾಂಕುಗಳು ಡಿಸೆಂಬರ್ 21 ರಿಂದ 26 ರ ನಡುವೆ ಒಂದೇ ಒಂದು ದಿನ ಬ್ಯಾಂಕ್ ಕಾರ್ಯ ನಿರ್ವಹಿಸಲಿದೆ. ಡಿ.21 ರಂದು ಬ್ಯಾಂಕ್ ಮುಷ್ಕರವಿದೆ. ಡಿ. 22 ತಿಂಗಳ ನಾಲ್ಕನೇ ಶನಿವಾರವಾದ ಕಾರಣ ಬ್ಯಾಂಕ್ ರಜೆ, ಡಿಸೆಂಬರ್ 23 ಭಾನುವಾರ. 25 ಕ್ರಿಸ್ಮಸ್ ಮತ್ತು ಡಿಸೆಂಬರ್ 26 ರಂದು ಬ್ಯಾಂಕ್ ಕೆಲಸಗಾರರು ಮತ್ತೆ ಮುಷ್ಕರ ನಡೆಸಲಿದ್ದಾರೆ. ಈ ಆರು ದಿನಗಳಲ್ಲಿ ಒಂದೇ ಒಂದು ದಿನ ಅಂದರೆ ಡಿ. 24 ಸೋಮವಾರ ಮಾತ್ರ ಬ್ಯಾಂಕ್ ಕಾರ್ಯನಿರ್ವಹಿಸಲಿದೆ. ಈ ಸಂದರ್ಭದಲ್ಲಿ ಅಂದು ಬ್ಯಾಂಕಿನಲ್ಲಿ ಜನಸಂದಣಿ ಹೆಚ್ಚಿರುವ ನಿರೀಕ್ಷೆ ಇದೆ.
19 ತಿಂಗಳಾದರೂ ಯಾವುದೇ ಪ್ರಗತಿ ಇಲ್ಲ:
ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ ಸಹಾಯಕ ಪ್ರಧಾನ ಕಾರ್ಯದರ್ಶಿ (ಎಐಬಿಒಸಿ) ಸಜಯ್ ದಾಸ್ ಅವರು, "ಮೇ 2017 ರಲ್ಲಿ ನೀಡಲಾದ ಬೇಡಿಕೆ ಪತ್ರದ ಆಧಾರದ ಮೇಲೆ 11 ನೇ ದ್ವಿಪಕ್ಷೀಯ ವೇತನ ತಿದ್ದುಪಡಿಗಾಗಿ ನಾವು ಸಂಪೂರ್ಣ ಮತ್ತು ಬೇಷರತ್ತಾದ ಆದೇಶವನ್ನು ನೀಡಬೇಕೆಂದು ಒತ್ತಾಯಿಸಿದ್ದೇವೆ. ವೇತನ ಪರಿಷ್ಕರಣೆಗೆ ಪರಿಷ್ಕರಿಸುವ ಬಗ್ಗೆ ಚರ್ಚೆ ನಡೆದು 19 ತಿಂಗಳಾದರೂ ಯಾವುದೇ ಪ್ರಗತಿ ಇಲ್ಲ. ಈ ಹಿನ್ನೆಲೆಯಲ್ಲಿ ನಾವು ಡಿಸೆಂಬರ್ 21 ರಂದು ಮುಷ್ಕರಕ್ಕೆ ಕರೆ ನೀಡಿದ್ದೇವೆ" ಎಂದು ತಿಳಿಸಿದ್ದಾರೆ.
ಬ್ಯಾಂಕ್ ಆಫ್ ಬರೋಡಾ, ವಿಜಯಾ ಬ್ಯಾಂಕ್ ಮತ್ತು ದೇನಾ ಬ್ಯಾಂಕ್ ಈ ಮೂರು ಬ್ಯಾಂಕ್ಗಳ ಯೂನಿಯನ್ ನಿಂದ ಮುಷ್ಕರ ನಡೆಯುತ್ತಿದೆ ಎಂದು ಪಶ್ಚಿಮ ಬಂಗಾಳ ಘಟಕದ ಯೂನಿಯನ್ ಅಧ್ಯಕ್ಷ ಶುಭಜೋತಿ ಬಂಡೋಪಾಧ್ಯಾಯ ಹೇಳಿದರು.