ನವದೆಹಲಿ: ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಶುಕ್ರವಾರ ಜೋಧ್‌ಪುರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯಲಿರುವ ವಿಚಾರಣೆಗೆ ಹಾಜರಾಗುತ್ತಿಲ್ಲ ಎಂದು ಅವರ ವಕೀಲ ಮಹೇಶ್ ಬೋರಾ ಖಚಿತಪಡಿಸಿದ್ದಾರೆ.
ಸಲ್ಮಾನ್ ಅವರನ್ನು ಶುಕ್ರವಾರ ವಿಚಾರಣೆಗೆ ಹಾಜರುಪಡಿಸುವಂತೆ ಈ ಹಿಂದೆ ಜೋಧ್ಪುರ ನ್ಯಾಯಾಲಯ ನಿರ್ದೇಶಿಸಿತ್ತಲ್ಲದೆ, ಅವರ ಹಾಜರಿಯನ್ನು ಖಚಿತಪಡಿಸುವ ಬಗ್ಗೆ ವಕೀಲರಿಗೆ ತಿಳಿಸಲಾಗಿತ್ತು ಎನ್ನಲಾಗಿದೆ.
ಜುಲೈನಲ್ಲಿ ನಡೆದ ಕೊನೆಯ ವಿಚಾರಣೆಯಲ್ಲಿ, ಸೆಪ್ಟೆಂಬರ್ 27 ರಂದು ಸಲ್ಮಾನ್ ವಿಚಾರಣೆಗೆ ಹಾಜರಾಗಲು ವಿಫಲವಾದಲ್ಲಿ ಜಾಮೀನು ರದ್ದುಗೊಳಿಸುವ ಸಾಧ್ಯತೆಯಿದೆ ಎಂದು ಹೇಳಿತ್ತು. ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ತಿಂಗಳುಗಳಿಂದ ಸಲ್ಮಾನ್ ಖಾನ್ ವಿಚಾರಣೆಗೇ ಹಾಜರಾಗಿಲ್ಲ.
ಎರಡು ದಶಕಗಳಷ್ಟು ಹಳೆಯದಾದ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದ್ದರೂ ಪ್ರಸ್ತುತ ಷರತ್ತುಬದ್ಧ ಜಾಮೀನಿನ ಮೇಲೆ ನ್ಯಾಯಾಲಯ ಬಿಡುಗಡೆ ಮಾಡಿತ್ತು.