ನವದೆಹಲಿ: ದೇಶದ ಪ್ರಸಿದ್ಧ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋಗೆ ಸೆಡ್ಡು ಹೊಡೆಯಲು ಮುಂದಾಗಿರುವ ಬಿಎಸ್ಎನ್ಎಲ್ ನೂತನ ಗ್ರಾಹಕರಿಗೆ ಮೆಗಾ ಆಫರ್ ಘೋಷಿಸಿದೆ.
ಈ ಯೋಜನೆಯ ಪ್ರಕಾರ STV 399 ಪ್ಲಾನ್'ನಲ್ಲಿರುವ ಸೌಲಭ್ಯಗಳನ್ನು ಹೊಸ ಬಳಕೆದಾರರಿಗೆ ಕೇವಲ 100 ರೂ.ಗಳಿಗೆ ನೀಡಲು ಬಿಎಸ್ಎನ್ಎಲ್ ನಿರ್ಧರಿಸಿದೆ. ಈ ಕೊಡುಗೆ ಉತ್ತರ ಪ್ರದೇಶ, ಉತ್ತರಾಂಚಲ, ಹಿಮಾಚಲ ಪ್ರದೇಶ, ಹರಿಯಾಣ, ರಾಜಸ್ಥಾನ, ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯಗಳಲ್ಲಿ ಮಾತ್ರ ಲಭ್ಯವಿದ್ದು, ಇತರ ನೆಟ್ವರ್ಕ್ ನಿಂದ ಬಿಎಸ್ಎನ್ಎಲ್ ಗೆ ಪೋರ್ಟಬಲ್ ಮಾಡಿಕೊಂಡ ಗ್ರಾಹಕರು ಈ ಕೊಡುಗೆಯ ಸೌಲಭ್ಯ ಪಡೆಯಬಹುದು.
ಈ ರಾಜ್ಯಗಳಲ್ಲಿ ಗ್ರಾಹಕರು ಈ ಸೌಲಭ್ಯ ಪಡೆಯಲು ಇಂಡಿಯನ್ ಆಯಿಲ್/ಹೆಚ್ಪಿಸಿಎಲ್ ಗೃಹಬಳಕೆ ಎಲ್ಪಿಜಿ ಬಿಲ್ಗಳಲ್ಲಿ ಬಿಎಸ್ಎನ್ಎಲ್ ಕೂಪನ್ಗಳನ್ನು ಮುದ್ರಿಸಬೇಕಾಗುತ್ತದೆ. ಈ ರಾಜ್ಯಗಳಲ್ಲಿನ ಎಲ್ಪಿಜಿ ವಿತರಕರ ಬಳಿ ಬಿಎಸ್ಎನ್ಎಲ್ ಕೂಪನ್ ಗಳು ಲಭ್ಯವಾಗಲಿವೆ. ಈ ಎರಡು ಕಂಪನಿಗಳಿಂದ ತಮ್ಮ ಎಲ್ಪಿಜಿ ಸಂಪರ್ಕವನ್ನು ತೆಗೆದುಕೊಳ್ಳುವವರಿಗೆ ಈ ಕೊಡುಗೆ ಸೀಮಿತವಾಗಿವೆ. ಈ ಎಲ್ಪಿಜಿ ಬಿಲ್ಗಳಲ್ಲಿ ಬಿಎಸ್ಎನ್ಎಲ್ ಕೂಪನ್ ಅನ್ನು ಮುದ್ರಿಸುವವರು ಹೊಸ ಸಿಮ್ ಕಾರ್ಡನ್ನು ಪಡೆಯಬಹುದು. ನಂತರ 399 ರೂ. ರೀಚಾರ್ಚ್ ಸೌಲಭ್ಯವನ್ನು ಕೇವಲ 100 ರೂ.ಗಳಿಗೆ ಪಡೆಯಬಹುದು. ಈ ಸಿಮ್ ಕಾರ್ಡ್ ಅನ್ನು ಯಾವುದೇ ಬಿಎಸ್ಎನ್ಎಲ್ ಔಟ್ಲೆಟ್ ನಿಂದ ತೆಗೆದುಕೊಳ್ಳಬಹುದು.
ಈ ಪ್ಲಾನ್ ಅಡಿಯಲ್ಲಿ, ಗ್ರಾಹಕರು ಅನಿಯಮಿತ ಕರೆ, ಎಸ್ಎಂಎಸ್ ಮತ್ತು ಡಾಟಾ ಸೌಲಭ್ಯಗಳನ್ನು ಪಡೆಯಬಹುದು. ಗ್ರಾಹಕರಿಗೆ ಸಿಮ್ ಕಾರ್ಡ್ ಉಚಿತವಾಗಿ ದೊರೆಯಲಿದೆ. ಅಲ್ಲದೆ, ಈ ಪ್ಲಾನ್ ನಲ್ಲಿ ಪ್ರತಿನಿತ್ಯ 1 ಜಿಬಿ ಡಾಟಾ ಮತ್ತು ಇತರ ಸೌಲಭ್ಯ 74 ದಿನಗಳವರೆಗೆ ಪಡೆಯಬಹುದು. ಅಷ್ಟೇ ಅಲ್ಲದೆ, ದೆಹಲಿ ಮತ್ತು ಮುಂಬೈ ವ್ಯಾಪ್ತಿಯಲ್ಲಿ ರಾಷ್ಟ್ರೀಯ ರೋಮಿಂಗ್ ಉಚಿತವಾಗಿದೆ.
ಈ ಎಲ್ಲಾ ಸೌಲಭ್ಯ ಕೇವಲ ಇತರ ನೆಟ್ ವರ್ಕ್ನಿಂದ ಬಿಎಸ್ಎನ್ಎಲ್ ಗೆ ಪೋರ್ಟ್ ಆದ ಗ್ರಾಹಕರಿಗೆ ಮಾತ್ರ ದೊರೆಯಲಿದೆ.