ಈರುಳ್ಳಿ ಬೆಲೆ ಪರಿಶೀಲನೆ, ಶೀಘ್ರದಲ್ಲೇ ದರ ಇಳಿಕೆ!

ವಿಡಿಯೋ ಕಾನ್ಫೆರೆನ್ಸ್ ಮೂಲಕ ಈರುಳ್ಳಿ ಉತ್ಪಾದಿಸುವ 11 ಪ್ರಮುಖ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ನಡೆದ ಸಭೆಯಲ್ಲಿ ಏರುತ್ತಿರುವ ಈರುಳ್ಳಿ ಬೆಲೆಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲೂ ರಾಜ್ಯಗಳು ಕೈಗೊಳ್ಳುತ್ತಿರುವ ವಿವಿಧ ಕ್ರಮಗಳ ಬಗ್ಗೆ ಕ್ಯಾಬಿನೆಟ್ ಕಾರ್ಯದರ್ಶಿ ವಿವರಣೆ ಪಡೆದರು.

Yashaswini V Yashaswini V | Updated: Dec 3, 2019 , 12:03 PM IST
ಈರುಳ್ಳಿ ಬೆಲೆ ಪರಿಶೀಲನೆ, ಶೀಘ್ರದಲ್ಲೇ ದರ ಇಳಿಕೆ!

ನವದೆಹಲಿ: ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾ ಸೋಮವಾರ ಕಾರ್ಯದರ್ಶಿಗಳ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ದೇಶಾದ್ಯಂತ ಗಗನಕ್ಕೇರುತ್ತಿರುವ ಈರುಳ್ಳಿ(Onion)ಯ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿದರು.

ವಿಡಿಯೋ ಕಾನ್ಫೆರೆನ್ಸ್ ಮೂಲಕ ಈರುಳ್ಳಿ ಉತ್ಪಾದಿಸುವ 11 ಪ್ರಮುಖ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ನಡೆದ ಸಭೆಯಲ್ಲಿ ಏರುತ್ತಿರುವ ಈರುಳ್ಳಿ ಬೆಲೆಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲೂ ರಾಜ್ಯಗಳು ಕೈಗೊಳ್ಳುತ್ತಿರುವ ವಿವಿಧ ಕ್ರಮಗಳ ಬಗ್ಗೆ ಕ್ಯಾಬಿನೆಟ್ ಕಾರ್ಯದರ್ಶಿ ವಿವರಣೆ ಪಡೆದರು.

ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಗಡ್, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಹರಿಯಾಣದ ಮುಖ್ಯ ಕಾರ್ಯದರ್ಶಿಗಳು ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾ ಅವರೊಂದಿಗಿನ ವಿಡಿಯೋ ಕಾನ್ಫೆರೆನ್ಸ್ ಮೂಲಕ ನಡೆದ ಸಭೆಯಲ್ಲಿ ಭಾಗವಹಿಸಿದ್ದರು.

ದೇಶಾದ್ಯಂತ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಈರುಳ್ಳಿ ಬೆಲೆಗಳನ್ನು ತಗ್ಗಿಸಲು ಪ್ರಮುಖವಾಗಿ ತಾತ್ಕಾಲಿಕ ಕೊರತೆಯನ್ನು ಪರಿಗಣಿಸಿ ಈರುಳ್ಳಿಯ ಒಟ್ಟಾರೆ ಲಭ್ಯತೆಯನ್ನು ಹೆಚ್ಚಿಸಬೇಕು ಎಂದು ಕ್ಯಾಬಿನೆಟ್ ಕಾರ್ಯದರ್ಶಿ ರಾಜ್ಯಗಳಿಗೆ ನಿರ್ದೇಶನ ನೀಡಿದರು. 

ಭಾರತದಲ್ಲಿ ಏರುತ್ತಿರುವ ಈರುಳ್ಳಿ ಬೆಲೆ ತಗ್ಗಿಸಲು ಸಹಾಯ ಮಾಡಲಿವೆ ಈ 4 ದೇಶಗಳು!

ಪ್ರಸಕ್ತ ಋತುವಿನಲ್ಲಿ ಈರುಳ್ಳಿ ರಫ್ತಿಗೆ ಅವಕಾಶ ನೀಡದಿರುವ ಬಗ್ಗೆ ಕೇಂದ್ರವು ಈಗಾಗಲೇ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿಸಿದ ರಾಜೀವ್ ಗೌಬಾ, ಗಣನೀಯ ಪ್ರಮಾಣದ ಬಫರ್ ಸ್ಟಾಕ್‌ಗಳನ್ನು ನಿರ್ವಹಿಸಲು, ವ್ಯಾಪಾರಿಗಳ ಮೇಲೆ ಸ್ಟಾಕ್ ಮಿತಿಗಳನ್ನು ಹೇರಲು ಮತ್ತು ಹೋರ್ಡಿಂಗ್(ದಾಸ್ತಾನು ಸಂಗ್ರಹಣೆ) ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯಗಳಿಗೆ ನಿರ್ದೇಶಿಸಿದರು.

ಪರಿಸ್ಥಿತಿಯನ್ನು ತಹಬದಿಗೆ ತರಲು ನವೆಂಬರ್ 29 ರಿಂದ 11000 ಮೆಟ್ರಿಕ್ ಟನ್ ಈರುಳ್ಳಿ ಆಮದು ಮಾಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ರಾಜೀವ್ ಗೌಬಾಸೈದ್ ಹೇಳಿದ್ದಾರೆ. 2019 ರ ಡಿಸೆಂಬರ್ ಕೊನೆಯ ವಾರದಿಂದ ಈರುಳ್ಳಿ ದರ ಇಳಿಕೆಯಾಗುವುದೆಂದು ನಿರೀಕ್ಷಿಸಲಾಗಿದೆ.

ಅಗ್ಗದ ಈರುಳ್ಳಿಗಾಗಿ ಕೆಲಸ ಬಿಟ್ಟು ಲೈನ್‌ನಲ್ಲಿ ನಿಂತ ಜನ!

ಇದು ನವೆಂಬರ್ 22 ರಂದು ಈಜಿಪ್ಟ್‌ನಿಂದ 6090 ಮೆಟ್ರಿಕ್ ಟನ್ ಈರುಳ್ಳಿಯನ್ನು ಆಮದು ಮಾಡಿಕೊಳ್ಳುವ ಸರ್ಕಾರದ ನಿರ್ಧಾರಕ್ಕೆ ಹೆಚ್ಚುವರಿಯಾಗಿರುತ್ತದೆ. ಡಿಸೆಂಬರ್ 2 ನೇ ವಾರದಿಂದ ವಿತರಣೆಯನ್ನು ನಿರೀಕ್ಷಿಸಲಾಗಿದೆ ಎಂದು ರಾಜೀವ್ ಗೌಬಾ ರಾಜ್ಯಗಳಿಗೆ ಮಾಹಿತಿ ನೀಡಿದ್ದಾರೆ.

ಕ್ಯಾಬಿನೆಟ್ ಕಾರ್ಯದರ್ಶಿ ತಮ್ಮ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗಳನ್ನು ಈರುಳ್ಳಿಯನ್ನು ಸಮಂಜಸವಾದ ಬೆಲೆಗೆ ಸಂಗ್ರಹಿಸಲು ಮತ್ತು ವಿತರಿಸಲು ಬಳಸಿಕೊಳ್ಳುವಂತೆ ನಿರ್ದೇಶಿಸಿದರು. ಗ್ರಾಹಕ ವ್ಯವಹಾರಗಳ ಸಚಿವಾಲಯ, ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ, ಆಹಾರ ಮತ್ತು ಸಾರ್ವಜನಿಕ ವಿತರಣಾ ಕಾರ್ಯದರ್ಶಿ ಮತ್ತು ಭಾರತ ಸರ್ಕಾರದ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.