ಪಾಟ್ನಾ: ವೃದ್ಧ ಪೋಷಕರನ್ನು ಆರೈಕೆ ಮಾಡುವಲ್ಲಿ, ಸರಿಯಾಗಿ ನೋಡುವಲ್ಲಿ ವಿಫಲರಾದ ಮಕ್ಕಳ ವಿರುದ್ಧ ಕಠಿಣ ಕರ್ಮ ಕೈಗೊಳ್ಳಲು ಸಿಎಂ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರ ನಿರ್ಧರಿಸಿದೆ. ಈ ಮೂಲಕ ಹಿರಿಯ ನಾಗರಿಕರ ಬಹುತೇಕ ಸಮಸ್ಯೆಗಳು ನಿವಾರಣೆಯಾಗುವುದು ನಿಸ್ಸಂದೇಹವಾಗಿದೆ.
ಮಂಗಳವಾರ ಬಿಹಾರ ಕ್ಯಾಬಿನೆಟ್ ಒಟ್ಟು 17 ಪ್ರಸ್ತಾಪಗಳಿಗೆ ಗ್ರೀನ್ ಸಿಗ್ನಲ್ ನೀಡಿದ್ದು, ಅವುಗಳಲ್ಲಿ ಪ್ರಮುಖವಾಗಿ ವೃದ್ಧ ತಂದೆ-ತಾಯಿಯರನ್ನು ಬಿಟ್ಟು ಬಿಡುವುದು ಅಥವಾ ಅವರ ಕಾಳಜಿ ವಹಿಸದ ಮಕ್ಕಳನ್ನು ತಪ್ಪಿತಸ್ಥರೆಂದು ಪರಿಗಣಿಸಲು ನಿರ್ಧರಿಸಲಾಗಿದೆ. ಹಾಗಾಗಿ ಮಕ್ಕಳು ವೃದ್ಧ ಪೋಷಕರ ಆರೋಗ್ಯ, ಸಂತೋಷ ಮತ್ತು ಕಾಳಜಿ ವಹಿಸುವುದು ಕಡ್ಡಾಯವಾಗಿದೆ. ಅಂತೆಯೇ, ಮಕ್ಕಳು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಹೆತ್ತವರು ದೂರು ಸಲ್ಲಿಸಿದಲ್ಲಿ ಅವರ ಆರೋಪ ಸಾಬೀತಾದರೆ ತಪ್ಪಿತಸ್ಥ ಮಕ್ಕಳಿಗೆ ಜೈಲು ಶಿಕ್ಷೆಯಾಗುವ ಸಾಧ್ಯತೆಯೂ ಇದೆ ಎಂದು ಕ್ಯಾಬಿನೆಟ್ ತಿಳಿಸಿದೆ.
ಈ ಬಗ್ಗೆ ಈಗಾಗಲೇ ರಾಜ್ಯ ಕ್ಯಾಬಿನೆಟ್'ನಲ್ಲಿ ಪ್ರಸ್ತಾಪ ಅಂಗೀಕರಿಸಲಾಗಿದ್ದರೂ, ಅಂತಿಮವಾಗಿ ವಿಧಾನಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು.
ಮಕ್ಕಳ ವಿದ್ಯಾಭ್ಯಾಸ, ಅಭಿವೃದ್ಧಿಗಾಗಿ ತಮ್ಮ ಎಲ್ಲಾ ಸಂತೋಷವನ್ನೂ ತ್ಯಾಗ ಮಾಡುವ ಪೋಷಕರನ್ನು ಇಳಿವಯಸ್ಸಿನಲ್ಲಿ ಅವರ ಮಕ್ಕಳು ಸಂತೋಷವಾಗಿ ನೋಡಿಕೊಳ್ಳುವುದು ಅವರ ಆದ್ಯ ಕರ್ತವ್ಯ. ಆದರೆ, ಪೋಷಕರಿಗೆ ವಯಸ್ಸಾಗುತ್ತಿದ್ದಂತೆ ಮಕ್ಕಳು ಅವರನ್ನು ಬಿಟ್ಟುಬಿಡುತ್ತಾರೆ. ಈ ನಿಟ್ಟಿನಲ್ಲಿ ಇದಕ್ಕಾಗಿಯೇ ಸೂಕ್ತ ಕಾನೂನು ರಚಿಸಲು ನಿರ್ಧರಿಸಲಾಗಿದೆ ಎಂದು ಸಿಎಂ ನಿತೀಶ್ ಕುಮಾರ್ ಹೇಳಿದ್ದಾರೆ.
ಮೂಲಗಳ ಪ್ರಕಾರ, ಭಾರತದ ಜನಸಂಖ್ಯೆಯಲ್ಲಿ 60 ವರ್ಷ ವಯಸ್ಸಿನ ಸುಮಾರು 100 ಮಿಲಿಯನ್ ಜನರಿದ್ದಾರೆ ಎನ್ನಲಾಗಿದೆ.