ಬಿಜೆಪಿಯ ಚೌಕಿದಾರ್ ನಾಟಕ ಬಹಳ ದಿನ ನಡೆಯಲ್ಲ: ಮಾಯಾವತಿ

ಹಣ ಕೊಟ್ಟ ತಕ್ಷಣ ಬಡತನ ದೂರವಾಗುವುದಿಲ್ಲ. ಕರ್ನಾಟಕದಲ್ಲೂ ಕಡು ಬಡವರು, ಅಸಹಾಯಕರು ಇದ್ದಾರೆ. ಅವರಿಗೆ ಒಳಿತು ಮಾಡುವ ಉದ್ದೇಶವನ್ನು ನಾವು ಹೊಂದಿದ್ದೇವೆ. ಹಾಗಾಗಿ ಬಿಎಸ್​ಪಿ ಬಡವರಿಗೆ ಉದ್ಯೋಗ ಕೊಟ್ಟು ಬಡತನ ನಿರ್ಮೂಲನ ಮಾಡುವ ಪಣ ತೊಟ್ಟಿದೆ ಎಂದು ಮಾಯಾವತಿ ಹೇಳಿದರು.

Updated: Apr 10, 2019 , 07:11 PM IST
ಬಿಜೆಪಿಯ ಚೌಕಿದಾರ್ ನಾಟಕ ಬಹಳ ದಿನ ನಡೆಯಲ್ಲ: ಮಾಯಾವತಿ

ಮೈಸೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಬುಧವಾರ ಭಾಗವಹಿಸಿದ ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಸ್ವಾತಂತ್ಯಾ ನಂತರ ಹಲವು ವರ್ಷಗಳ ಕಾಲ ದೇಶದ ಅಧಿಕಾರ ಕಾಂಗ್ರೆಸ್ ಹಾಗೂ ಬಿಜೆಪಿ ಕೈಯಲ್ಲೇ ಇತ್ತು. ಆದರೆ ದೇಶದಲ್ಲಿ ಬಡತನ ನಿರ್ಮೂಲನೆ ಅವರಿಂದ ಸಾಧ್ಯವಾಗಲಿಲ್ಲ. ಈಗ ಬಡವರಿಗೆ ಹಣ ನೀಡುತ್ತಿದ್ದಂತೆ ಬಡತನ ನಿರ್ಮೂಲನೆಯಾಗುವುದೇ ಎಂದು ಪ್ರಶ್ನಿಸಿದ ಮಾಯಾವತಿ, ಕಾಂಗ್ರೆಸ್ ನ ನಾಟಕಗಳು ಹಾಗೂ ಮೋದಿ ಸರ್ಕಾರದ ಚೌಕಿದಾರ ನಾಟಕಗಳು ಬಹಳ ದಿನ ನಡೆಯುವುದಿಲ್ಲ. ಸದ್ಯದಲ್ಲೇ ಅಂತ್ಯ ಕಾಣಲಿವೆ ಎಂದು ಹೇಳಿದರು.

ಜಿಎಸ್​ಟಿ ಮಧ್ಯಮ ವರ್ಗದವರು, ಬಡವರಿಗೆ ಹೊರೆಯಾಗಿ ಮಾರ್ಪಾಡಾಗಿದೆ. ಮೋದಿ ಸರ್ಕಾರದಕ್ಕೆ ಅಧಿಕಾರ ದುರುಪಯೋಗ ಮಾಡಿಕೊಳ್ಳುವುದು ಹೆಚ್ಚಾಗಿದೆ. ಐಟಿ ಅಧಿಕಾರಿಗಳು ಕೇಂದ್ರ ಸರ್ಕಾರಕ್ಕೆ ಪೂರಕವಾಗಿ ಕೆಲಸ ಮಾಡುತ್ತಿವೆ. ವಿಪಕ್ಷಗಳನ್ನು ಬೆದರಿಸುವ ತಂತ್ರವನ್ನು ಬಿಜೆಪಿ ಮಾಡುತ್ತಿದೆ. ಅಧಿಕಾರಕ್ಕೊಸ್ಕರ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಹಾಳು ಮಾಡುತ್ತಿದ್ದಾರೆ ಎಂದು ಮಾಯಾವತಿ ಆಕ್ರೋಶ ವ್ಯಕ್ತಪಡಿಸಿದರು.

ಬಡವರು ಹಣ ನೀಡುವುದಾಗಿ, ಬಡತನ ನಿರ್ಮೂಲನೆ ಮಾಡುವುದಾಗಿ ಹಲವು ಯೋಜನೆಗಳನ್ನು ಹಮ್ಮಿಕೊಳ್ಳುವ ಭರವಸೆಯನ್ನು ಕಾಂಗ್ರೆಸ್, ಬಿಜೆಪಿ ಪಕ್ಷಗಳು ನೀಡಿವೆ. ಆದರೆ ಅವೆಲ್ಲಾ ಭರವಸೆಗಳಾಗಿಯೇ ಉಳಿಯಲಿವೆ. ಚುನಾವಣಾ ಪೂರ್ವ ಪ್ರಣಾಳಿಕೆಗಳು ಕೇವಲ ಪ್ರಣಾಳಿಕೆಗಳಷ್ಟೇ. ಹಣ ಕೊಟ್ಟ ತಕ್ಷಣ ಬಡತನ ದೂರವಾಗುವುದಿಲ್ಲ. ಕರ್ನಾಟಕದಲ್ಲೂ ಕಡು ಬಡವರು, ಅಸಹಾಯಕರು ಇದ್ದಾರೆ. ಅವರಿಗೆ ಒಳಿತು ಮಾಡುವ ಉದ್ದೇಶವನ್ನು ನಾವು ಹೊಂದಿದ್ದೇವೆ. ಹಾಗಾಗಿ ಬಿಎಸ್​ಪಿ ಬಡವರಿಗೆ ಉದ್ಯೋಗ ಕೊಟ್ಟು ಬಡತನ ನಿರ್ಮೂಲನ ಮಾಡುವ ಪಣ ತೊಟ್ಟಿದೆ ಎಂದು ಮಾಯಾವತಿ ಹೇಳಿದರು.

ಮುಂದುವರೆದು ಮಾತನಾಡುತ್ತಾ, ಉತ್ತರಪ್ರದೇಶದಲ್ಲಿ 80 ಲೋಕಸಭಾ ಕ್ಷೇತ್ರಗಳಿದ್ದು, ಅದರಲ್ಲಿ ಒಂದು ಕ್ಷೇತ್ರವನ್ನೂ ಬಿಜೆಪಿಯಿಂದ ಗೆಲ್ಲಲು ಸಾಧ್ಯವಾಗುವುದಿಲ್ಲ. ಮೈಸೂರಿನಿಂದಲೇ ಅಭ್ಯರ್ಥಿಯನ್ನು ಗೆಲ್ಲಿಸಿ. ವಿಧಾನಸಭೆ ಚುನಾವಣೆಯಲ್ಲಿ ಎನ್.ಮಹೇಶ್ ಅವರನ್ನು ಗೆಲ್ಲಿಸಿದ್ದೀರಿ. ಅವರು ಸಚಿವರೂ ಆಗಿದ್ದರು. ಹೀಗೆ ಬಿಎಸ್ಪಿ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿ, ಸಹಕರಿಸಿ ಎಂದು ಮಾಯಾವತಿ ಮನವಿ ಮಾಡಿದರು.