close

News WrapGet Handpicked Stories from our editors directly to your mailbox

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ತಿರಸ್ಕರಿಸಿದ CWC

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ಸಲ್ಲಿಸಿದ್ದರು. ಆದರೆ ಕಾರ್ಯಕಾರಿ ಸಮಿತಿ ಅದನ್ನು ತಿರಸ್ಕರಿಸಿ, ನಿರ್ಣಯವನ್ನು ಜಾರಿಗೊಳಿಸಿದೆ.

Updated: May 25, 2019 , 05:40 PM IST
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ತಿರಸ್ಕರಿಸಿದ CWC
Pic Courtesy: ANI

ನವದೆಹಲಿ: ಅಖಿಲ ಭಾರತ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ಸಲ್ಲಿಸಿದ್ದ ರಾಜೀನಾಮೆಯನ್ನು ರಾಷ್ಟ್ರೀಯ ಕಾರಕಾರಿ ಸಮಿತಿ ಸಭೆಯಲ್ಲಿ ತಿರಸ್ಕರಿಸಲಾಗಿದೆ. ಲೋಕಸಭಾ ಚುನಾವಣೆ ಫಲಿತಾಂಶವನ್ನು ಪಕ್ಷ ಸ್ವೀಕರಿಸಿದೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಶನಿವಾರ ತಿಳಿಸಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲನುಭವಿಸಿದ ಬೆನ್ನಲ್ಲೇ ಕಾಂಗ್ರೆಸ್ ಸೋಲಿಗೆ ರಾಹುಲ್ ನಾಯಕತ್ವವೇ ಕಾರಣ ಎಂಬ ಮಾತು ಎಲ್ಲೆಡೆ ಕೇಳಿಬಂದಿತ್ತು. ಈ ಬೆನ್ನಲ್ಲೇ ಲೋಕಸಭಾ ಚುನಾವಣೆಯಲ್ಲಿ ಸೋಲಿಗೆ ಕಾರಣಗಳೇನು ಎಂಬುದರ ಪರಾಮರ್ಶೆಗಾಗಿ ಶನಿವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರೀಕ್ಷೆಯಂತೆಯೇ ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆದರೆ, ರಾಜಿನಾಮೆಯನ್ನು ತಿರಸ್ಕರಿಸಿದ ಸಮಿತಿಯು, 2019ರ ಲೋಕಸಭಾ ಚುನಾವಣೆ ಫಲಿತಾಂಶವನ್ನು ಪಕ್ಷವು ಒಮ್ಮತದಿಂದ ಅಂಗೀಕರಿಸಿದ್ದು, ನಾಯಕತ್ವದ ಬದಲಾವಣೆಯ ಅಗತ್ಯವಿಲ್ಲ ಎಂದಿದೆ.

ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ, 2019ರ ಲೋಕಸಭಾ ಚುನಾವಣೆ ಫಲಿತಾಂಶವನ್ನು ಪಕ್ಷವು ಒಮ್ಮತದಿಂದ ಸ್ವೀಕರಿಸಿದೆ. ಕಾಂಗ್ರೆಸ್ ಬೆಂಬಲಿಸಿದ ಎಲ್ಲಾ ಮತದಾರರಿಗೂ ಪಕ್ಷದ ಪರವಾಗಿ ಧನ್ಯವಾದಗಳು. ಕಾಂಗ್ರೆಸ್ ಪಕ್ಷ ಸಕಾರಾತ್ಮಕವಾಗಿ ವಿರೋಧ ಪಕ್ಷದ ಸ್ಥಾನವನ್ನು ನಿಭಾಯಿಸಲಿದ್ದು, ಪಕ್ಷದ ಕಾರ್ಯಕರ್ತರು ಮತ್ತು ಅಭ್ಯರ್ಥಿಗಳಿಗೆ ಧನ್ಯವಾದ ತಿಳಿಸಿದರು. 

ಮುಂದುವರೆದು ಮಾತನಾಡುತ್ತಾ, ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ಸಲ್ಲಿಸಿದ್ದರು. ಆದರೆ ಕಾರ್ಯಕಾರಿ ಸಮಿತಿ ಅದನ್ನು ತಿರಸ್ಕರಿಸಿ, ನಿರ್ಣಯವನ್ನು ಜಾರಿಗೊಳಿಸಿದೆ. ಕಾಂಗ್ರೆಸ್ ಪಕ್ಷಕ್ಕೆ ರಾಹುಲ್ ಗಾಂಧಿ ನೇತೃತ್ವದ ಅವಶ್ಯಕತೆಯಿದೆ. ರಾಹುಲ್ ಗಾಂಧಿ ಅವರ ಮಾರ್ಗದರ್ಶನದ ಅಗತ್ಯತೆ ಪಕ್ಷಕ್ಕಿದೆ. ಅಲ್ಲದೆ, ಪಕ್ಷದಲ್ಲಿ ಆಗಬೇಕಾದ ಬದಲಾವಣೆಗಳನ್ನು ಮಾಡುವ ಸಂಪೂರ್ಣ ಅಧಿಕಾರವನ್ನು ಕಾರ್ಕಕಾರಿ ಸಮಿತಿ ರಾಹುಲ್ ಗಾಂಧಿ ಅವರಿಗೆ ನೀಡಿದ್ದು, ಪಕ್ಷ ಬಲವರ್ಧನೆಗೆ ನಿರ್ಣಯಗಳನ್ನು ಕೈಗೊಳ್ಳುವ ಅಧಿಕಾರವನ್ನೂ ನೀಡಿದೆ" ಎಂದು ಸುರ್ಜೆವಾಲಾ ಹೇಳಿದರು.

"ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಾಭಿಪ್ರಾಯಗಳನ್ನು ಮೂಡಿಸಲು ಪ್ರಯತ್ನಿಸುತ್ತಿರುವ ವಿಭಜನಾ ರಾಜಕೀಯದ ವಿರುದ್ಧ ಹೋರಾಡಲು ಕಾಂಗ್ರೆಸ್ ಸಿದ್ಧವಾಗಿದೆ" ಎಂದು ಸುರ್ಜೆವಾಲಾ ತಿಳಿಸಿದರು.

ಇಂದು ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಸೇರಿದಂತೆ ಹಲವು ಕಾಂಗ್ರೆಸ್​ ಮುಖಂಡರು ಭಾಗಿಯಾಗಿದ್ದರು.