ಭುವನೇಶ್ವರ: ಒಡಿಶಾ ಕರಾವಳಿಗೆ ಮೇ 3 ರಂದು ತೀವ್ರ ಸ್ವರೂಪದ ಫಾನಿ ಚಂಡಮಾರುತ ಅಪ್ಪಲಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಪಟ್ಕುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯನ್ನು ಮುಂದೂಡುವಂತೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮುಖ್ಯ ಚುನಾವಣಾ ಆಯುಕ್ತರಿಗೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಸುದ್ದಿಗಾರೊಂದಿಗೆ ಮಾತನಾಡಿದ ನವೀನ್ ಪಟ್ನಾಯಕ್, "ಮೇ 3ರಂದು ಒಡಿಶಾ ಕರಾವಳಿ ಭಾಗಕ್ಕೆ ಫಾನಿ ಚಂಡಮಾರುತ ಅಪ್ಪಳಿಸಲಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಉಪಚುನಾವಣೆ ಮುಂದೂಡುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡುತ್ತೇನೆ" ಎಂದು ಹೇಳಿದರು.
ಏಪ್ರಿಲ್ 20 ರಂದು ಬಿಜೆಡಿ ಅಭ್ಯರ್ಥಿ ಬೇಡ್ ಪ್ರಕಾಶ್ ಅಗರ್ವಾಲ್ ಅವರ ನಿಧನದ ಬಳಿಕ ತೆರವಾದ ಕೇಂದ್ರಾಪಾರ ಲೋಕಸಭಾ ಕ್ಷೇತ್ರದ ಪಟ್ಕುರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯನ್ನು ಮೇ 19 ರಂದು ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ.
ಮೂಲ ವೇಳಾಪಟ್ಟಿ ಪ್ರಕಾರ, ಪಟ್ಕುರಾದಲ್ಲಿ ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನದ ದಿನವಾದ ಏಪ್ರಿಲ್ 29ರಂದೇ ನಡೆಯಬೇಕಿತ್ತು. ಆದರೆ ಕೇಂದ್ರಾಪರಾ ಲೋಕಸಭಾ ಕ್ಷೇತ್ರಕ್ಕೆ ಪಟ್ಕುರಾ ಮತದಾರರೂ ತಮ್ಮ ಮತ ಚಲಾಯಿಸಬೇಕಿದ್ದರಿಂದ, ವಿಧಾನಸಭೆ ಉಪಚುನಾವಣೆ ಮತದಾನವನ್ನು ಮೇ 19ಕ್ಕೆ ಮುಂದೂಡಲಾಗಿದೆ.