ನವದೆಹಲಿ : ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಎನ್ಡಿಎ ಸರ್ಕಾರದ ಆಡಳಿತವನ್ನು 'ಅಪಾಯಕಾರಿ ಆಡಳಿತ' ಎಂದರು.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಂಸತ್ತಿನ ಅನೆಕ್ಸ್ ಸಭಾಂಗಣದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಸ್ತುತ ಸರ್ಕಾರವು ಭಾರತದ ಪ್ರಜಾಪ್ರಭುತ್ವವನ್ನು ರಾಜಿಮಾಡಿಕೊಳ್ಳುತ್ತಿದ್ದು, ಈ ಅಪಾಯಕಾರಿ ಆಡಳಿತದಿಂದ ನಮ್ಮ ಜನರನ್ನು ರಕ್ಷಿಸಬೇಕಾಗಿದೆ ಎಂದರು.
ಮುಂದುವರೆದು ಮಾತನಾಡಿದ ಅವರು, ಮೋದಿ ಅವರ ಮಾತುಗಳ ಅವರ ಹತಾಶೆಯನ್ನು ತೋರಿಸುತ್ತದೆ. ಇದರಿಂದ ಮೋದಿ ಸರ್ಕಾರದ ಹಿನ್ನಡೆಗೆ ಕ್ಷಣಗಣನೆ ಆರಂಭವಾದಂತಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಭಾರತದ ಸಾಮಾಜಿಕ ಸಾಮರಸ್ಯ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಪುನಃಸ್ಥಾಪಿಸಲು ಈ ಸಮಯದ ಅವಶ್ಯಕತೆ ಇದೆ. ರಾಹುಲ್ ಗಾಂಧಿಯವರ ಪ್ರಯತ್ನಕ್ಕೆ ಪಕ್ಷ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಹೇಳಿದರು.
ಕಳೆದ ವಾರ ರಾಹುಲ್ ಗಾಂಧಿಯವರು 23 ಸದಸ್ಯರು, 19 ಶಾಶ್ವತ ಆಹ್ವಾನಿತರು ಮತ್ತು ಒಂಬತ್ತು ವಿಶೇಷ ಆಹ್ವಾನಿತರನ್ನು ಒಳಗೊಂಡ ನೂತನ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯನ್ನು ರಚಿಸಿದ್ದು, ಕಾಂಗ್ರೆಸ್ ಅಧ್ಯಕ್ಷ ಎ.ಕೆ.ಆಂಟನಿ, ಅಹ್ಮದ್ ಪಟೇಲ್, ಅಂಬಿಕಾ ಸೋನಿ, ಮೋತಿಲಾಲ್ ವೊರಾ, ಗುಲಾಮ್ ನಬಿ ಆಜಾದ್, ಮಲ್ಲಿಕಾರ್ಜುನ್ ಖರ್ಗೆ, ಆನಂದ್ ಶರ್ಮಾ ಮತ್ತು ಕುಮಾರಿ ಸೆಲ್ಜಾ ಮುಂತಾದ ಪರಿಣತರನ್ನು ಪಕ್ಷದ ಅತ್ಯುನ್ನತ ನಿರ್ಧಾರ ಕೈಗೊಳ್ಳುವ ಸಮಿತಿಯಲ್ಲಿ ಉಳಿಸಿಕೊಂಡಿದ್ದಾರೆ.
ರಾಹುಲ್ ಗಾಂಧಿ ಹೊರತುಪಡಿಸಿ, ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ಮುಖ್ಯಮಂತ್ರಿಗಳಾದ ಅಶೋಕ್ ಗೆಹ್ಲೋಟ್, ಓಮನ್ ಚಾಂಡಿ, ತರುಣ್ ಗೊಗೋಯಿ, ಸಿದ್ಧರಾಮಯ್ಯ ಮತ್ತು ಹರೀಶ್ ರಾವತ್ ಕೂಡ ಈ ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ.