ಉತ್ತರಾಖಂಡ್ ಬಸ್ ಅಪಘಾತದಲ್ಲಿ ಮೃತರ ಸಂಖ್ಯೆ 47ಕ್ಕೆ ಏರಿಕೆ; ಮೃತ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ

ಉತ್ತರಾಖಂಡ್'ನ ಪೌರಿ ಗರ್ವಾಲ್ ಜಿಲ್ಲೆಯ ನಾನಿಧಂಡ ಪ್ರದೇಶದಲ್ಲಿ ಚಲಿಸುತ್ತಿದ್ದ ಬಸ್ಸೊಂದು ಪ್ರಪಾತಕ್ಕೆ ಉರುಳಿಬಿದ್ದ ಭೀಕರ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 47ಕ್ಕೆ ಏರಿದೆ. 

Last Updated : Jul 1, 2018, 03:44 PM IST
ಉತ್ತರಾಖಂಡ್ ಬಸ್ ಅಪಘಾತದಲ್ಲಿ ಮೃತರ ಸಂಖ್ಯೆ 47ಕ್ಕೆ ಏರಿಕೆ; ಮೃತ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ title=
ಫೋಟೊ ಕೃಪೆ : ANI

ನವದೆಹಲಿ: ಭಾನುವಾರ ಬೆಳಿಗ್ಗೆ ಉತ್ತರಾಖಂಡ್'ನ ಪೌರಿ ಗರ್ವಾಲ್ ಜಿಲ್ಲೆಯ ನಾನಿಧಂಡ ಪ್ರದೇಶದಲ್ಲಿ ಚಲಿಸುತ್ತಿದ್ದ ಬಸ್ಸೊಂದು ಪ್ರಪಾತಕ್ಕೆ ಉರುಳಿಬಿದ್ದ ಭೀಕರ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 47ಕ್ಕೆ ಏರಿದೆ. 

ಬೋವಾನ್'ನಿಂದ ರಾಮ್ನಗರ ಮಾರ್ಗವಾಗಿ ಚಲಿಸುತ್ತಿದ್ದ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿದ ಹಿನ್ನೆಲೆಯಲ್ಲಿ 60 ಅಡಿ ಆಳದ ಪ್ರಪಾತಕ್ಕೆ ಬಿದ್ದಿತ್ತು. ಈ ಘಟನೆಯಲ್ಲಿ 20 ಮಂದಿ ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡಿದ್ದ 12 ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ರಾಥಮಿಕ ವರದಿಗಳು ಹೇಳಿದ್ದವು. ಆದರೆ, ಇತ್ತೀಚಿನ ವರದಿಗಳ ಪ್ರಕಾರ ಈ ಘಟನೆಯಲ್ಲಿ 47 ಮಂದಿ ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡಿದ್ದ 11 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಸ್ಥಳದಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಗಳು ಪ್ರಗತಿಯಲ್ಲಿವೆ. 

ಈ ಭೀಕರ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಮತ್ತು ಗಾಯಗೊಂಡವರಿಗೆ ತಲಾ 2 ಲಕ್ಷ ರೂ ಮತ್ತು 50 ಸಾವಿರ ರೂ.ಗಳ ಪರಿಹಾರ ಧನವನ್ನು ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಘೋಷಿಸಿದ್ದಾರೆ. "ಪೌರಿ ಜಿಲ್ಲೆಯ ಧುಮಕೋಟ್ ಸಮೀಪದ ಬಸ್ ಅಪಘಾತದ ಸುದ್ದಿ ಕೇಳಿ ದುಃಖವಾಗಿದೆ. ಈ ಸಂಬಂಧ ಪ್ರುತ ಕುಟುಂಬಗಳಿಗೆ ಮತ್ತು ಗಾಯಗೊಂಡವರಿಗೆ ತಕ್ಷಣ ಪರಿಹಾರ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇನೆ. ಸ್ಥಳೀಯ ಆಡಳಿತ, ಪೊಲೀಸ್ ಮತ್ತು ಎಸ್ಡಿಆರ್ಎಫ್ ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ ಮತ್ತು ಎಲ್ಲಾ ಅಗತ್ಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಗಾಯಗೊಂಡವರಿಗೆ 50,000 ರೂ. ಮತ್ತು ಮೃತಪಟ್ಟವರ ಕುಟುಂಬಗಳಿಗೆ ರೂ. 2 ಲಕ್ಷ ಪರಿಹಾರವನ್ನು ಒದಗಿಸಲು ಸೂಚನೆ ನೀಡಲಾಗಿದೆ. ಅಗತ್ಯವಿದ್ದರೆ, ಗಾಯಗೊಂಡವರನ್ನು ಡೆಹ್ರಾಡೂನ್ಗೆ ಚಿಕಿತ್ಸೆಗಾಗಿ ತರಲು ಹೆಲಿಕಾಪ್ಟರ್ ಅನ್ನು ಬಳಸಲಾಗುವುದು" ಎಂದು ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಟ್ವೀಟ್ ಮಾಡಿದ್ದಾರೆ.

ಬಸ್ಸಿನಲ್ಲಿ 60ಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಎಂದು ಹೇಳಲಾಗಿದೆ. ಎಸ್ಡಿಆರ್ಎಫ್ (ರಾಜ್ಯ ವಿಪತ್ತು ಪರಿಹಾರ ಪಡೆ) ಮತ್ತು ಪೊಲೀಸ್ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. 

Trending News