ನವದೆಹಲಿ: ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರನ್ನು 14 ದಿನಗಳ ಕಾಲ ಕಸ್ಟಡಿಯಲ್ಲಿಡಬೇಕಾಗಿದೆ ಎಂದು ಜಾರಿ ನಿರ್ದೇಶನಾಲಯ ದೆಹಲಿ ಕೋರ್ಟ್ಗೆ ತಿಳಿಸಿದೆ.ಆದರೆ ಕೋರ್ಟ್ 14 ದಿನಗಳ ಬದಲು 10 ದಿನಗಳ ಕಸ್ಟಡಿ ವಿಚಾರಣೆಗೆ ಅವಕಾಶ ನೀಡಿದೆ. ಆ ಮೂಲಕ ಈಗ ಶಿವಕುಮಾರ್ ಅವರು ಸೆಪ್ಟೆಂಬರ್ 13 ರವರೆಗೆ ಇಡಿ ಕಸ್ಟಡಿಯಲ್ಲಿ ಇರಲಿದ್ದಾರೆ.
ಮನಿ ಲಾಂಡರಿಂಗ್ ಪ್ರಕರಣದಲ್ಲಿ ಡಿಕೆಶಿ ಸಹಕರಿಸುತ್ತಿಲ್ಲ ಎಂದು ಆರೋಪಿಸಿ ನಿನ್ನೆ ಸಂಜೆ ಅವರನ್ನು ಬಂಧಿಸಲಾಗಿತ್ತು. ಅವರು ತಪ್ಪನ್ನು ಒಪ್ಪಿಕೊಳ್ಳದೆ ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದು ತನಿಖಾ ಸಂಸ್ಥೆ ವಾದಿಸಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಡಿಕೆಶಿ ಪರವಾಗಿ ವಾದಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಗ್ವಿ 'ಅವರು ತಪ್ಪನ್ನು ಒಪ್ಪಿಕೊಂಡಿಲ್ಲ ಎಂದ ಮಾತ್ರಕ್ಕೆ ಅದನ್ನು ಅಸಹಕಾರ ಎಂದು ಕರೆಯಬಹುದೇ? ಇಲ್ಲಿ ವೈಯಕ್ತಿಕ ಸ್ವಾತಂತ್ರ ಎಲ್ಲಿದೆ ಎಂದು ಪ್ರಶ್ನಿಸಿದರು.
The arrest of DK Shivakumar is another example of the vendetta politics unleashed by the Govt, using agencies like the ED/CBI & a pliant media to selectively target individuals.
— Rahul Gandhi (@RahulGandhi) September 4, 2019
"ಅವರ ಹೇಳಿಕೆಯನ್ನು ಕಳೆದ ನಾಲ್ಕು ದಿನಗಳಿಂದ ದಾಖಲಿಸಲಾಗಿದೆ.ಅವರು ತನಿಖೆಗೆ ಸಹಕರಿಸಿದ್ದಾರೆ ಆದರೆ ಇಡಿ ಅವರು ಸಹಕರಿಸುತ್ತಿಲ್ಲ ಎಂದು ಹೇಳುತ್ತಾರೆ...ಇಡಿ ಅವರು ಸತ್ಯವನ್ನು ಬಹಿರಂಗಪಡಿಸಲಿಲ್ಲ ಎಂದು ಹೇಳುತ್ತಾರೆ...ಇಲ್ಲಿ ಸತ್ಯ ಏನು? ಆರೋಪಿಗಳ ಪ್ರಕಾರ ಸತ್ಯ ಅಥವಾ ಏಜೆನ್ಸಿಗೆ ಬೇಕಾದ ಸತ್ಯವನ್ನು ಗಣನೆಗೆ ತೆಗೆದುಕೊಂಡರೆ, ಎಲ್ಲರೂ ಇಲ್ಲಿ ಬಂಧಿಸಲ್ಪಡುತ್ತಾರೆ "ಎಂದು ಸಿಂಗ್ವಿ ನ್ಯಾಯಾಲಯಕ್ಕೆ ತಿಳಿಸಿದರು.
ಡಿಕೆ ಶಿವಕುಮಾರ್ ಬಂಧನವನ್ನು ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆ ಕೈಗೊಂಡಿದ್ದು, ಬಿಜೆಪಿ ಸರ್ಕಾರ ದುರುದ್ದೇಶದ ರಾಜಕೀಯವನ್ನು ಮಾಡುತ್ತಿದೆ ಎಂದು ಆರೋಪಿಸಿದೆ. ಕೇಂದ್ರ ಸರ್ಕಾರದ ವಿಫಲ ನೀತಿಗಳಿಂದ ಹಾಗೂ ಆರ್ಥಿಕ ಕುಸಿತದಂತಹ ಸಂಗತಿಗಳಿಂದ ದೂರವಿಡುವ ಸಲುವಾಗಿ ಇಂತಹ ಕಾರ್ಯಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ದೂರಿದೆ.
ಇನ್ನೊಂದೆಡೆ ರಾಹುಲ್ ಗಾಂಧಿ ಟ್ವೀಟ್ ಮಾಡಿ ಡಿಕೆ ಶಿವಕುಮಾರ್ ಅವರ ಬಂಧನವು ಸರ್ಕಾರದ ದ್ವೇಷ ಪೂರಿತ ರಾಜಕಾರಣದ ಮತ್ತೊಂದು ಉದಾಹರಣೆಯಾಗಿದೆ, ಇಡಿ / ಸಿಬಿಐನಂತಹ ಏಜೆನ್ಸಿಗಳನ್ನು ಮತ್ತು ವ್ಯಕ್ತಿಗಳನ್ನು ಗುರಿಯಾಗಿಸಲು ಮಾಧ್ಯಮವಾಗಿ ಬಳಸಿಕೊಳ್ಳುತ್ತಿದೆ ಎಂದು ರಾಹುಲ್ ಟೀಕಿಸಿದ್ದಾರೆ.