ಎನ್ಎಂಸಿ ಮಸೂದೆ ವಿರೋಧಿಸಿ ಇಂದು ವೈದ್ಯರ ಮುಷ್ಕರ

ಬೆಂಗಳೂರಿನ ಕಿಮ್ಸ್, ಅಪೋಲೋ, ಫೋರ್ಟಿಸ್, ಎಂ ಎಸ್ ರಾಮಯ್ಯ ಮುಂತಾದ ಆಸ್ಪತ್ರೆಗಳಲ್ಲಿ ಎಂದಿನಂತೆ ಒಪಿಡಿ ತೆರೆಯಲಿದೆ.

Last Updated : Jan 2, 2018, 09:02 AM IST
  • ಕೇಂದ್ರ ಆರೋಗ್ಯ ಸಚಿವರಾದ ಜಗತ್ ಪ್ರಕಾಶ್ ನಡ್ಡ ಜೊತೆಗೆ ನಡೆದ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಇಂದು ದೇಶಾದ್ಯಂತ ಆಸ್ಪತ್ರೆಗಳಲ್ಲಿ ಒಪಿಡಿ ಬಂದ್.
  • ಆದರೆ ತುರ್ತು ಚಿಕಿತ್ಸೆ ಮತ್ತು ಒಳ ರೋಗಿಗಳ ಚಿಕಿತ್ಸೆಯಲ್ಲಿ ಯಾವುದೇ ತೊಂದರೆ ಇಲ್ಲ.
  • ಒಂದು ವೇಳೆ ಈ ಮಸೂದೆ ಜಾರಿಗೆ ಬಂದರೆ ಸಾಮಾನ್ಯ ವರ್ಗದ ಜನತೆ ವೈದ್ಯಕೀಯ ಶಿಕ್ಷಣದಿಂದ ವಂಚಿತರಾಗುತ್ತಾರೆ- ಡಾ. ಎಚ್. ಎಲ್. ರವೀಂದ್ರ
ಎನ್ಎಂಸಿ ಮಸೂದೆ ವಿರೋಧಿಸಿ ಇಂದು ವೈದ್ಯರ ಮುಷ್ಕರ title=

ನವ ದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ ಎನ್ಎಂಸಿ ಮಸೂದೆಯನ್ನು ವಿರೋಧಿಸಿ ಇಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ದೇಶಾದ್ಯಂತ ಖಾಸಗಿ ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ಚಿಕಿತ್ಸೆಯನ್ನು ಬಂದ್ ಮಾಡುವ ಮೂಲಕ ಪ್ರತಿಭಟಿಸಲು ಐಎಂಎ ಮುಂದಾಗಿದೆ. ಐಎಂಎ ವಾದವನ್ನು ಒಪ್ಪಿ ನೈತಿಕ ಬೆಂಬಲ ಕೊಡಲು ಖಾಸಗಿ ಆಸ್ಪತ್ರೆಗಳು ನಿರ್ಧರಿಸಿವೆ. ಆದರೆ ಕೊನೆ ಕ್ಷಣದಲ್ಲಿ ರೋಗಿಗಳಿಗೆ ಅನಾನುಕೂಲ ಮಾಡಲು ಒಪ್ಪದ ಕೆಲವು ಖಾಸಗಿ ಆಸ್ಪತ್ರೆಗಳು ಹೊರ ರೋಗಿ ವಿಭಾಗ ಕಾರ್ಯನಿರ್ವಹಿಸಲಿದೆ ಎಂದು ಹೇಳಿವೆ. ಬೆಂಗಳೂರಿನ ಕಿಮ್ಸ್, ಅಪೋಲೋ, ಫೋರ್ಟಿಸ್, ಎಂ ಎಸ್ ರಾಮಯ್ಯ ಮುಂತಾದ ಆಸ್ಪತ್ರೆಗಳಲ್ಲಿ ಎಂದಿನಂತೆ ಒಪಿಡಿ ತೆರೆಯಲಿದೆ.

ಕೇಂದ್ರ ಆರೋಗ್ಯ ಸಚಿವರಾದ ಜಗತ್ ಪ್ರಕಾಶ್ ನಡ್ಡ ಜೊತೆಗೆ ನಡೆದ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಇಂದು ದೇಶಾದ್ಯಂತ ಒಪಿಡಿ ಬಂದ್ ಮಾಡುವ ಮುಖಾಂತರ ಪ್ರತಿಭಟನೆ ನಡೆಸಲಾಗುವುದು, ಆದರೆ ತುರ್ತು ಚಿಕಿತ್ಸೆ ಮತ್ತು ಒಳ ರೋಗಿಗಳಿಗೆ ಚಿಕಿತ್ಸೆ ನೀಡಲಾಗುವುದು ಎಂದು ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಡಾ. ಎಚ್. ಎಲ್. ರವೀಂದ್ರ ತಿಳಿಸಿದ್ದಾರೆ. ನವದೆಹಲಿಯಲ್ಲಿ ಝೀ ನ್ಯೂಸ್ ನೊಂದಿಗೆ ಮಾತನಾಡಿದ ಅವರು ಭಾರತೀಯ ವೈದ್ಯಕೀಯ ಸಂಘಕ್ಕೆ ಬದಲಾಗಿ ರಾಷ್ಟ್ರೀಯ ವೈದ್ಯಕೀಯ ಆಯೋಗ ಜಾರಿಗೊಳಿಸುವ ಮೂಲಕ ರಾಜ್ಯ ಸರ್ಕಾರದ ಅಸ್ತಿತ್ವವನ್ನು ಕಸಿದು ಕೊಳ್ಳುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಕೇವಲ ವೈದ್ಯರ ದೃಷ್ಟಿಯಿಂದ ಮಾತ್ರವಲ್ಲ ಜನತೆಯ ದೃಷ್ಟಿಯಿಂದಲೂ ನಾವು ಈ ಹೋರಾಟ ನಡೆಸುವ ಅಗತ್ಯವಿದೆ. ಒಂದು ವೇಳೆ ಈ ಮಸೂದೆ ಜಾರಿಗೆ ಬಂದರೆ ಸಾಮಾನ್ಯ ವರ್ಗದ ಜನತೆ ವೈದ್ಯಕೀಯ ಶಿಕ್ಷಣದಿಂದ ವಂಚಿತರಾಗುತ್ತಾರೆ. ಈ ಪ್ರತಿಭಟನೆಯ ಉದ್ದೇಶ ಜನಸಾಮಾನ್ಯರಿಗೆ ಈ ಮಸೂದೆಯಿಂದಾಗುವ ತೊಂದರೆಯ ಬಗ್ಗೆ ಗಮನ ಸೆಳೆಯುವುದು. ನಮ್ಮ ಈ ಹೋರಾಟಕ್ಕೆ ಜನತೆಯೂ ಧ್ವನಿಯಾಗಬೇಕು ಎಂದು ತಿಳಿಸಿದರು.

ವೈದ್ಯರ ಪ್ರತಿಭಟನೆಯ ಸ್ವರೂಪ...
ಕೇಂದ್ರ ಸರ್ಕಾರ ಎಚ್ಚೆತ್ತು ವೈದ್ಯರ ಬೇಡಿಕೆಗಳಿಗೆ ಒಪ್ಪಿಗೆ ನೀಡಿ ಮಸೂದೆಯಲ್ಲಿ ‌ಬದಲಾವಣೆ ತರುವ ಉದ್ದೇಶದಿಂದ ದೇಶದ ಎಲ್ಲ  IMA ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗುವುದು.

ವೈದ್ಯರ ಇಂದಿನ ಮುಷ್ಕರಕ್ಕೆ ಕಾರಣ...
ಜ.1 ಸೋಮವಾರ ನವದೆಹಲಿಯಲ್ಲಿ ಕೇಂದ್ರ ಆರೋಗ್ಯ ಸಚಿವ ಜೆ.ಪಿ‌ ನಡ್ಡಾ ನೇತೃತ್ವದಲ್ಲಿ  ಭಾರತೀಯ ವೈದ್ಯಕೀಯ ಸಂಘ ಸದಸ್ಯರ ಜೊತೆ ಸುಮಾರು ಒಂದೂವರೆ ಗಂಟೆ ನಡೆದ ಸಭೆಯಲ್ಲಿ ಅಂತಿಮ‌ ನಿರ್ಧಾರಕ್ಕೆ ಬರಲು ಸಾಧ್ಯವಾಗದೆ ಸಂಧಾನ ಸಭೆ ವಿಫಲವಾಗಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗ ಮಸೂದೆ ಜಾರಿ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ  ಕಾಯ್ದೆಯಲ್ಲಿ ಬದಲಾವಣೆ ತರುವಂತೆ ಬೇಡಿಕೆ ಇಟ್ಟಿದ್ದ ವೈದ್ಯರ ಮನವಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಈ ಹಿನ್ನೆಲೆಯಲ್ಲಿ ಇಂದು ದೇಶಾದ್ಯಂತ ಒಪಿಡಿ ಬಂದ್ ಮಾಡುವ ಮೂಲಕ ವೈದ್ಯರು ಸಾಂಕೇತಿಕ ಪ್ರತಿಭಟನೆಗೆ ಮುಂದಾಗಿದ್ದಾರೆ.

Trending News