ನವದೆಹಲಿ: ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣಗಳ ಮಧ್ಯೆ ಭಾರತೀಯ ರೈಲ್ವೆ ಜೂನ್ 1 ರಿಂದ ಸಾಮಾನ್ಯ ರೈಲು ಸೇವೆಯನ್ನು ಪ್ರಾರಂಭಿಸಲು ಸಿದ್ಧತೆ ನಡೆಸಿದೆ. ಏತನ್ಮಧ್ಯೆ, ದೇಶದಲ್ಲಿ ದೇಶೀಯ ವಿಮಾನ ಹಾರಾಟದ ಬಗ್ಗೆಯೂ ಕೂಡ ಸುದ್ದಿ ಬರುತ್ತಿದೆ. ಈ ಕುರಿತು ಸಂಕೇತಗಳನ್ನು ನೀಡಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ, ದೇಶೀಯ ವಿಮಾನಯಾನ ಸೇವೆ ಆರಂಭಿಸುವ ನಿರ್ಧಾರ ಕೇವಲ ಕೇಂದ್ರ ಸರ್ಕಾರ ಮಾತ್ರ ತೆಗೆದುಕೊಳುವುದಿಲ್ಲ, ಏಕೆಂದರೆ ನಾಗರಿಕ ವಿಮಾನಯಾನ ಸೇವೆಗೆ ಅನುಮತಿ ನೀಡಲು ರಾಜ್ಯ ಸರ್ಕಾರಗಳೂ ಕೂಡ ಸಿದ್ಧರಾಗಿರಬೇಕು ಎಂದು ಹೇಳಿದ್ದಾರೆ.
ದೇಶಾದ್ಯಂತ ಲಾಕ್ ಡೌನ್ ಅವಧಿಯನ್ನು ಮೇ 31ರವರೆಗೆ ವಿಸ್ತರಿಸಲಾಗಿದೆ ಹಾಗೂ ಎಲ್ಲ ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಯಾನ ಸೇವೆಗಳನ್ನು ಮೇ 31ರವರೆಗೆ ಸ್ಥಗಿತಗೊಲಿಸಲಾಗಿದ್ದು, ಈ ನಡುವೆ ಪುರಿ ನೀಡಿರುವ ಈ ಹೇಳಿಕೆ ಭಾರಿ ಮಹತ್ವ ಪಡೆದುಕೊಂಡಿದೆ.
ದೇಸೀಯ ವಿಮಾನಯಾನ ಸೇವೆ ಆರಂಭದ ಕುರಿತು ಟ್ವೀಟ್ ಮಾಡಿರುವ ಹರ್ದೀಪ್ ಸಿಂಗ್ ಪುರಿ, ದೇಶೀಯ ನಾಗರಿಕ ವಿಮಾನಯಾನ ಸೇವೆ ಆರಂಭಿಸುವ ನಿರ್ಣಯ ಕೇವಲ ಕೇಂದ್ರ ಸರ್ಕಾರ ಮಾತ್ರ ಕೈಗೊಳ್ಳುವುದಿಲ್ಲ ಏಕೆಂದರೆ ಇದಕ್ಕಾಗಿ ರಾಜ್ಯ ಸರ್ಕಾರಗಳ ಸಹಮತಿ ಕೂಡ ಅಗತ್ಯವಿದೆ. ವಿಮಾನ ಟೆಕ್ ಆಫ್ ಆಗುವ ರಾಜ್ಯ ಹಾಗೂ ಲ್ಯಾಂಡ್ ಆಗುವ ರಾಜ್ಯ ಎರಡರ ಅನುಮತಿ ದೊರೆತ ಬಳಿಕ ಮಾತ್ರ ಇದು ಸಾಧ್ಯ ಎಂದು ಅವರು ಹೇಳಿದ್ದಾರೆ.
ಲಾಕ್‌ಡೌನ್ ಅವಧಿಯಲ್ಲಿ ಹೆಚ್ಚಳ ಕುರಿತು ಭಾನುವಾರ ಕೇಂದ್ರ ಗೃಹ ಸಚಿವಾಲಯ ನಿರ್ಧಾರ ತೆಗೆದುಕೊಂಡ ಬಳಿಕ, ವಿಮಾನಯಾನ ಸೇವೆ ಪ್ರಾರಂಭಿಸುವ ಬಗ್ಗೆ ವಿಮಾನಯಾನ ಸಂಸ್ಥೆಗಳಿಗೆ ಶೀಘ್ರದಲ್ಲೇ ಮಾಹಿತಿ ನೀಡಲಾಗುವುದು ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ಈಗಾಗಲೇ ಮಾಹಿತಿ ನೀಡಿರುವುದು ಇಲ್ಲಿ ಗಮನಾರ್ಹ.