ನವದೆಹಲಿ:ನೌಕರರ ಭವಿಷ್ಯ ನಿಧಿ ಸಂಸ್ಥೆಯ ಪಿಂಚಣಿ ಯೋಜನೆಯಾಗಿರುವ 'ಇಪಿಎಸ್' ಅಡಿಯಲ್ಲಿ ಬರುವ ನೌಕರರಿಗೆ ಈ ಬಜೆಟ್‌ನಲ್ಲಿ ಒಂದು ಒಳ್ಳೆಯ ಸುದ್ದಿ ಬರುವ ಸಾಧ್ಯತೆ ಇದೆ. ಯೋಜನೆಯಡಿ, ಕನಿಷ್ಠ ಪಿಂಚಣಿ ಮೊತ್ತದಲ್ಲಿ ಹೆಚ್ಚಳವನ್ನು ನಿರೀಕ್ಷಿಸಬಹುದಾಗಿದೆ. ಈ ಕುರಿತು ಮಾಹಿತಿ ನೀಡಿರುವ ಹಣಕಾಸು ತಜ್ಞರು ಇದರೊಂದಿಗೆ, ಅಟಲ್ ಪಿಂಚಣಿ ಯೋಜನೆ (ಎಪಿವೈ) ವ್ಯಾಪ್ತಿಯಲ್ಲಿಯೂ ಸಹ ವಿಸ್ತರೆಯಾಗುವ ಸಾಧ್ಯತೆ ಇದ್ದು, ಸರ್ಕಾರ ಎನ್‌ಪಿಎಸ್ ಅಡಿ ಹೆಚ್ಚುವರಿ ತೆರಿಗೆ ವಿನಾಯಿತಿ ಸಹ ಘೋಷಿಸಬಹುದು ಎಂದಿದ್ದಾರೆ. ಫೆಬ್ರವರಿ 1 ರಂದು 2020-21ರ ಆರ್ಥಿಕ ವರ್ಷದ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದಾರೆ.
ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ನೌಕರರು ಮತ್ತು ವ್ಯಾಪಾರಿಳಿಗೆ ಸರ್ಕಾರವು 3,000 ರೂ.ಗಳ ಪಿಂಚಣಿ ನೀಡುತ್ತಿದ್ದು, ಸಂಘಟಿತ ವಲಯದಲ್ಲಿ ಕೆಲಸ ಮಾಡುವ ನೌಕರರಿಗೆ ಕಡಿಮೆ ಪಿಂಚಣಿ ನೀಡುವಲ್ಲಿ ಯಾವುದೇ ಅರ್ಥವಿಲ್ಲ ಎಂದು ಕಾರ್ಮಿಕ ಸಂಘಟನೆಗಳು ಹೇಳಿವೆ.
ಈ ಕುರಿತು 'ಭಾಷಾ' ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡಿರುವ ಕಾರ್ಮಿಕ ಸಂಘಟನೆಯಾಗಿರುವ ಭಾರತೀಯ ಮಜ್ದೂರ್ ಸಂಘದ ಪ್ರಧಾನ ಕಾರ್ಯದರ್ಶಿ ಬ್ರೆಜೇಶ್ ಉಪಾಧ್ಯಾಯ್, 'ಇಪಿಎಸ್' ಅಡಿಯಲ್ಲಿ ಕನಿಷ್ಠ ಪಿಂಚಣಿ ಮೊತ್ತವನ್ನು 1000 ರೂ.ಗಳಿಂದ 5,000 ರೂ.ಗಳಿಗೆ ಹೆಚ್ಚಿಸುವಂತೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಹೇಳಿದ್ದಾರೆ. ಹೀಗಾಗಿ ಈ ಬಾರಿಯ ಬಜೆಟ್ ನಲ್ಲಿ ಸರ್ಕಾರ ಈ ಕುರಿತು ಘೋಷಣೆ ಮಾಡುವ ಸಾಧ್ಯತೆ ಇದೆ.
ನೌಕರರ ಪಿಂಚಣಿ ಹೆಚ್ಚಿಸುವ ಸಂಬಂಧ ಹೋರಾಟ ನಡೆಸುತ್ತಿರುವ EPSನ 95 ರಾಷ್ಟ್ರೀಯ ಸಂಘರ್ಷ ಸಮಿತಿ ಅಧ್ಯಕ್ಷ ಕಮಾಂಡರ್ ಅಶೋಕ್ ರಾವುತ್, ಇದಕ್ಕೆ ಸಂಬಂಧಿಸಿದಂತೆ ತಾವು ಕಾರ್ಮಿಕ ಸಚಿವರನ್ನು ಭೇಟಿಯಾಗಿ EPS ಅಡಿಯಲ್ಲಿ ಬರುವ ನೌಕರರ ಕನಿಷ್ಠ ಪಿಂಚಣಿಯನ್ನು ತುಟ್ಟಿಭತ್ಯೆ ಒಳಗೊಂಡಂತೆ ಮಾಸಿಕ 7,000ಕ್ಕೆ ಹೆಚ್ಚಿಸುಂತೆ ಮನವಿ ಮಾಡಿರುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ ಈ ಹೆಚ್ಚಳದಿಂದ ಸರ್ಕಾರದ ಮೇಲೆ ಯಾವುದೇ ಹೆಚ್ಚೂವರಿ ಹೊರೆ ಬೀಳುವುದಿಲ್ಲ ಎಂದು ಹೇಳಿದ್ದಾರೆ. ಈ ಕುರಿತು ಅವರು ಕಾರ್ಮಿಕ ಸಚಿವರಿಗೆ ಸಂಪೂರ್ಣ ವರದಿ ಸಲ್ಲಿಸಿದ್ದಾರೆ.
ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಪಿಎಂ ಶ್ರಮ ಯೋಗಿ ಗೌರವಧನ ಯೋಜನೆ ಹಾಗೂ ಪ್ರಧಾನ್ ಮಂತ್ರಿ ಸಣ್ಣ ವ್ಯಾಪಾರಿ ಗೌರವಧನ ಯೋಜನೆ ಸಣ್ಣ ವ್ಯಾಪಾರಿಗಳಿಗೆ ಆರಂಭಿಸಲಾಗಿದೆ. ಈ ಎರಡೂ ಯೋಜನೆಗಳು 60 ವರ್ಷದ ನಂತರ ಫಲಾನುಭವಿಗಳಿಗೆ ಮಾಸಿಕ 3,000 ಪಿಂಚಣಿ ನೀಡುವ ವ್ಯವಸ್ಥೆ ಮಾಡಲಾಗಿದೆ.
ಇನ್ನೊಂದೆಡೆ, ಪಿಂಚಣಿ ನಿಧಿ ನಿಯಂತ್ರಕ ಪಿಎಫ್‌ಆರ್‌ಡಿಎ, ಮುಂಬರುವ ಬಜೆಟ್‌ನಲ್ಲಿ ಹೊಸ ಪಿಂಚಣಿ ವ್ಯವಸ್ಥೆಯಲ್ಲಿ (ಎನ್‌ಪಿಎಸ್) ಒಂದು ಲಕ್ಷ ರೂಪಾಯಿಗಳ ಹೂಡಿಕೆಗೆ ತೆರಿಗೆ ವಿನಾಯಿತಿ ನೀಡಲು ಶಿಫಾರಸು ಮಾಡಿದೆ. ಪ್ರಸ್ತುತ, ವೈಯಕ್ತಿಕ ತೆರಿಗೆದಾರರು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿಸಿಡಿ (1 ಬಿ) ಅಡಿಯಲ್ಲಿ ಎನ್‌ಪಿಎಸ್‌ನಲ್ಲಿ 50,000 ರೂ.ವರೆಗಿನ ಹೂಡಿಕೆಗಳ ಮೇಲೆ ಹೆಚ್ಚುವರಿ ತೆರಿಗೆ ಪ್ರಯೋಜನವನ್ನು ಪಡೆಯುತ್ತಿದ್ದಾರೆ.