ಮುಂಬೈ:ಕಳೆದ ನವೆಂಬರ್ 23ರಂದು NCP ಮುಖಂಡ ಅಜೀತ್ ಪವಾರ್ ಅವರ ಜೊತೆಗೆ ಪ್ರಮಾಣವಚನ ಸ್ವೀಕರಿಸಿದ ಮಹಾರಾಷ್ಟ್ರದ ಪ್ರತಿಪಕ್ಷ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಾಡ್ನವಿಸ್ ಕೊನೆಗೂ ತಮ್ಮ ಮೌನ ಮುರಿದಿದ್ದಾರೆ. ಈ ಉಭಯ ನಾಯಕರು ಮೂರು ದಿನಗಳ ಬಳಿಕ ತಮ್ಮ-ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಕುರಿತು ಮಾತನಾಡಿರುವ ದೇವೇಂದ್ರ ಫಡ್ನವಿಸ್, ಅಜೀತ್ ಪವಾರ್ ಅವರು ತಮಗೆ NCP ಎಲ್ಲ 54 ಶಾಸಕರ ಬೆಂಬಲ ಕೊಡಿಸುವುದಾಗಿ ಭರವಸೆ ನೀಡಿದ್ದರು. ಅಷ್ಟೇ ಅಲ್ಲ ಸ್ವತಃ ಅಜೀತ್ ಪವಾರ್ ಅವರೇ ತಮ್ಮ ಬಳಿ ಸರ್ಕಾರ ರಚಿಸುವ ಪ್ರಸ್ತಾವನೆಯನ್ನು ತಂದಿದ್ದರು ಎಂದಿದ್ದಾರೆ.
ಮಹಾರಾಷ್ಟ್ರ ರಾಜಕೀಯದಲ್ಲಿ ದೀರ್ಘ ಕಾಲದಿಂದ ಮುಚ್ಚಿಹೋಗಿದ್ದ ರಹಸ್ಯವನ್ನು ಬಹಿರಂಗಪಡಿಸಿರುವ ಫಡ್ನವಿಸ್, ಬಿಜೆಪಿಯ ಕೆಲ ಶಾಸಕರ ಜೊತೆ ಚರ್ಚೆ ನಡೆಸಿದ್ದ ಅಜೀತ್ ಪವಾರ್, BJP ಜೊತೆ ಸರ್ಕಾರ ರಚಿಸಿ ಮುಂದುವರೆಯಲು ಬಯಸಿದ್ದರು ಎಂದಿದ್ದಾರೆ. ಜೊತೆಗೆ ಈ ಕುರಿತು ತಾವು ಶರದ್ ಪವಾರ್ ಅವರ ಜತೆ ಕೂಡ ಚರ್ಚೆ ನಡೆಸಿರುವುದಾಗಿ ಹೇಳಿದ್ದರು.
ನಂತರ ತಮ್ಮನ್ನು ಸಂಪರ್ಕಿಸಿದ್ದ ಅಜೀತ್ ಪವಾರ್ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಜೊತೆಗೆ ಮುಂದುವರೆಯಲು ಬಯಸುತ್ತಿಲ್ಲ ಮತ್ತು ಮೂರು ಪಕ್ಷಗಳ ಸರ್ಕಾರ ನಡೆಸುವುದು ಕೂಡ ಅಸಾಧ್ಯ. ಹೀಗಾಗಿ ನಾವು ಸ್ಥಿರ ಸರ್ಕಾರ ರಚಿಸಲು BJP ಜೊತೆ ಮೈತ್ರಿಗೆ ಸಿದ್ದರಿದ್ದೇವೆ ಎಂದು ಹೇಳಿದ್ದರು. ಅವರ ಈ ಪ್ರಸ್ತಾಪವನ್ನು BJP ಸ್ವೀಕರಿಸಿದ್ದು, ಬಳಿಕ ಅದು ಪಕ್ಷಕ್ಕೆ ಮಾರಕವಾಗಿ ಪರಿಣಮಿಸಿತು ಎಂಬುದನ್ನು ಫಡ್ನವಿಸ್ ಒಪ್ಪಿಕೊಂಡಿದ್ದಾರೆ. ಆದರೆ, ಕೆಲವೇ ದಿನಗಳ ಬಳಿಕ ತೆರೆ ಹಿಂದಿನ ಸಂಪೂರ್ಣ ಕಥೆ ಬಹಿರಂಗಗೊಳ್ಳಲಿದೆ ಎಂದು ಇದೇ ವೇಳೆ ಅವರು ಹೇಳಿದ್ದಾರೆ.
ಏತನ್ಮಧ್ಯೆ ಶನಿವಾರ ಈ ಕುರಿತು ಮಾತನಾಡಿರುವ ಕಾಂಗ್ರೆಸ್ ಹಿರಿಯ ಮುಖಂಡಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ರಾಜ್ಯದ ಸಮ್ಮಿಶ್ರ ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳುವಾಗ ತಮ್ಮ ಪಕ್ಷದ ಮಾತನ್ನೂ ಸಹ ಆಲಿಸುವ ಅಗತ್ಯವಿದೆ ಎಂದಿದ್ದಾರೆ. ಉದ್ಧವ್ ಠಾಕ್ರೆ ನೇತೃತ್ವದ ಸಮ್ಮಿಶ್ರ ಸರ್ಕಾರ ರಚಿಸಿರುವ ಮೂರು ಪಕ್ಷಗಳು ಸಮತೋಲನ ಕಾಯ್ದುಕೊಳ್ಳುವ ಅವಶ್ಯಕತೆ ಇದ್ದು, ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಅಡಿ ಮೂರು ಪಕ್ಷಗಳು ಮೈತ್ರಿಮಾಡಿಕೊಂಡಿದ್ದು, ಸಂವಿಧಾನಕ್ಕೆ ಬದ್ಧವಾಗಿವೆ ಮತ್ತು ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ಅವರು ಸ್ಪಷ್ಟಪಡಿಸಿದ್ದಾರೆ.