ಭುವನೇಶ್ವರ: ಶುಕ್ರವಾರ ಬೆಳಿಗ್ಗೆ ಒಡಿಶಾಗೆ ಅಪ್ಪಳಿಸಿದ ಭೀಕರ ಫೋನಿ ಚಂಡಮಾರುತಕ್ಕೆ 8 ಮಂದಿ ಬಲಿಯಾಗಿದ್ದಾರೆ. ರಾಜ್ಯದ ಕರಾವಳಿ ಭಾಗದಲ್ಲಿ ಜನಜೀವನ ತೀವ್ರ ಅಸ್ತವ್ಯಸ್ತಗೊಂಡಿದ್ದು, ಹಲವೆಡೆ ಮನೆಗಳು ನೆಲಕ್ಕುರುಳಿದ್ದು, ಗುಡಿಸಲುಗಳು ನೀರಿನಲ್ಲಿ ಕೊಚ್ಚಿಹೋಗಿವೆ.
ಪುರಿ ಜಿಲ್ಲೆಯಲ್ಲಿ ಮೂವರು, ಭುವನೇಶ್ವರ್ ಪ್ರದೇಶದಲ್ಲಿ ಮೂವರು, ಕೇಂದ್ರಪಾರ ಪ್ರದೇಶದ ಪುನರ್ವಸತಿ ಕೇಂದ್ರದಲ್ಲಿ ಓರ್ವ ಹಿರಿಯ ಮಹಿಳೆ ಹಾರ್ಟ್ ಅಟ್ಯಾಕ್ ನಿಂದ ಸಾವನ್ನಪ್ಪಿದ್ದಾರೆ. ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಪುರಿಯಲ್ಲಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದು, ಇಂಧನ ಮೂಲಸೌಕರ್ಯ ಸಂಪೂರ್ಣವಾಗಿ ನಾಶವಾಗಿದೆ.
ರಾಜ್ಯದಲ್ಲಿ ಕೆಲವೇ ಗಂಟೆಗಳವರೆಗೆ ಫೋನಿ ಆರ್ಭಟ ನಡೆಸಿದರೂ ಸಹ ರಾಜ್ಯದಲ್ಲಿ ಆದ ಹಾನಿ ಮಾತ್ರ ಅಪಾರ. ಪುರಿಯ ಸುಮಾರು 8 ಕಡೆಗಳಲ್ಲಿ ಫೋನಿ ಚಂಡಮಾರುತದಿಂದಾಗಿ ಭೂಕುಸಿತ ಸಂಭವಿಸಿದೆ. ಸುಮಾರು 175 ಕಿ.ಮೀ. ವೇಗದಲ್ಲಿ ಗಾಳಿ ಬೀಸಿದ್ದರಿಂದ ಮನೆಯ ಮೇಲ್ಛಾವಣಿಗಳು, ಗುಡಿಸಲುಗಳು, ಮರಗಳು ನೆಲಕ್ಕುರುಳಿವೆ. ಅಷ್ಟೇ ಅಲ್ಲದೆ ವಿದ್ಯುತ್ ಸಂಪರ್ಕ ಸಂಪೂರ್ಣ ನಾಶಗೊಂಡಿದ್ದು, ದುರಸ್ತಿ ಕಾರ್ಯ ಕಷ್ಟಸಾಧ್ಯ. ವಿದ್ಯುತ್ ಮರುಸ್ಥಾಪನೆ ನಿಜಕ್ಕೂ ಒಂದು ಸವಾಲಿನ ಕಾರ್ಯ ಎಂದು ಸಿಎಂ ನವೀನ್ ಪಟ್ನಾಯಕ್ ಹೇಳಿದ್ದಾರೆ.
ವಿದ್ಯುತ್ ಸರಬರಾಜು ಪುನಃಸ್ಥಾಪಿಸಲು ನೂರಾರು ಎಂಜಿನಿಯರ್ಗಳು ಮತ್ತು ತಂತ್ರಜ್ಞರು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ರಸ್ತೆ ಸಂಪರ್ಕ ಪುನಃಸ್ಥಾಪಿಸಲು ಕೆಲಸ ಮಾಡಲಾಗುತ್ತಿದೆ, ಸಾವಿರಾರು ಸ್ಥಳಗಳಲ್ಲಿ ಬಿದ್ದಿರುವ ಮರಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ ಎಂದು ಸಿಎಂ ಹೇಳಿದ್ದಾರೆ.
ಚಂಡಮಾರುತದ ಮುನ್ಸೂಚನೆ ಹಿನ್ನೆಲೆಯಲ್ಲಿ 10,000 ಗ್ರಾಮಗಳು ಮತ್ತು 52 ನಗರ ಪ್ರದೇಶಗಳ ಸುಮಾರು 12 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಸುಮಾರು 4,000 ಆಶ್ರಯ ಕೇಂದ್ರಗಳನ್ನು ನಿರ್ಮಿಸಲಾಗಿದ್ದು, ಜನರಿಗೆ ಉಚಿತ ಆಹಾರ, ಬಟ್ಟೆಗಳನ್ನು ಒದಗಿಸಲಾಗಿದೆ ಎಂದರು.
ಸದ್ಯ ಒಡಿಶಾದಲ್ಲಿ ಫೋನಿ ತೀವ್ರತೆ ತಗ್ಗಿದ್ದು, ಪಶ್ಚಿಮ ಬಂಗಾಳದ ಕರಾವಳಿ ಭಾಗಗಳಿಗೆ ಶನಿವಾರ ಬೆಳಿಗ್ಗೆ ಅಪ್ಪಳಿಸಲಿದೆ. ಈ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಸರಕಾರ ಈಗಾಗಲೇ ನಾಡಿಯಾ, ಮಿಡ್ನಾಪುರ, ಉತ್ತರ 24 ಪರಗಣಗಳು, ದಕ್ಷಿಣ 24 ಪರಗಾಣ ಮತ್ತು ಹೌರಾ ಜಿಲ್ಲೆಗಳ 45,000 ಜನರನ್ನು ಆಶ್ರಯ ಶಿಬಿರಗಳಿಗೆ ಸ್ಥಳಾಂತರಿಸಿದೆ.