ನವದೆಹಲಿ: ದೇಶಕಂಡ ಅತ್ಯುತ್ತಮ ನಾಯಕ, ಅಜಾತ ಶತ್ರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಗುರುವಾರ ಸಂಜೆ 5.05ಕ್ಕೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಹೃದಯ, ಕಿಡ್ನಿ ಮತ್ತು ಮೂತ್ರನಾಳದ ಸೋಂಕಿನಿಂದ ಬಳಲುತ್ತಿದ್ದ ವಾಜಪೇಯಿ ಅವರನ್ನು ಜೂ.11ರಂದು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಕಳೆದ 36 ಗಂಟೆಗಳಿಂದ ವಾಜಪೇಯಿ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದ್ದು, ವಾಜಪೇಯಿ ಅವರಿಗೆ ಕೃತಕ ಉಸಿರಾಟ ವ್ಯವಸ್ಥೆಯಲ್ಲಿಡಲಾಗಿತ್ತು. ಆದರೀಗ ಚಿಕಿತ್ಸೆ ಫಲಕಾರಿಯಾಗದೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಮೃತಪಟ್ಟಿದ್ದಾರೆ ಎಂದು ಏಮ್ಸ್ ಪ್ರಕಟಣೆ ದೃಢಪಡಿಸಿದೆ.
Former Prime Minister & Bharat Ratna #AtalBihariVaajpayee passes away in AIIMS. He was 93. pic.twitter.com/r12aIPF5G0
— ANI (@ANI) August 16, 2018
93 ವರ್ಷದ ವಾಜಪೇಯಿ 2009ರಲ್ಲಿ ಪಾರ್ಶ್ವವಾಯುಗೆ ತುತ್ತಾದ ಬಳಿಕ ಅವರ ಒಂದೇ ಕಿಡ್ನಿ ಕಾರ್ಯನಿರ್ವಹಿಸುತ್ತಿತ್ತು. ವಾಜಪೇಯಿ ಅವರ ಆರೋಗ್ಯ ಸ್ಥಿತಿ ಗಂಭೀರಗೊಂಡಿದ್ದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಮಂತ್ರಿ ರಾಜನಾಥ್ ಸಿಂಗ್, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಸಚಿವರಾದ ಪಿಯೂಷ್ ಗೋಯಲ್, ಸ್ಮೃತಿ ಇರಾನಿ, ಮೀನಾಕ್ಷಿ ಲೇಖಿ ಸೇರಿದಂತೆ ಅನೇಕ ನಾಯಕರು ಗುರುವಾರ ಬೆಳಿಗ್ಗೆ ಆಸ್ಪತ್ರೆಗೆ ಭೇಟಿ ನೀಡಿ ವಾಜಪೇಯಿ ಅವರ ಆರೋಗ್ಯ ವಿಚಾರಿಸಿದ್ದರು.