ನವದೆಹಲಿ: ಭಾರತೀಯ ಸಹೋದರ ಮತ್ತು ಸಹೋದರಿಯರಿಬ್ಬರು ಆಸ್ಟ್ರೇಲಿಯಾದ ವೀಸಾ ಪಡೆದುಕೊಳ್ಳಲು ಪರಸ್ಪರ ಮದುವೆಯಾಗಿರುವ ಘಟನೆ ನಡೆದಿದೆ. ಈಗ ಈ ಇಬ್ಬರು ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ.
SBS.com.au ಪ್ರಕಾರ, ಇಬ್ಬರೂ ಪಂಜಾಬ್ ಮೂಲದವರು ಎಂದು ತಿಳಿದುಬಂದಿದ್ದು, ಅವರ ಸಹೋದರ ಸಂಬಂಧಿ ದೂರುನೀಡಿದ ಅನ್ವಯ ಪೋಲಿಸರು ಈ ವಿಚಾರವಾಗಿ ತನಿಖೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಸೋದರ ಸಂಬಂಧಿ ನೀಡಿರುವ ದೂರಿನಲ್ಲಿ ಅವರ ಹೆಸರುಗಳನ್ನು ಬಳಸಿಕೊಂಡು ಬ್ಯಾಂಕ್ ಖಾತೆ ಪಾಸ್ ಪೋರ್ಟ್ ಹಾಗೂ ಇತರ ಗುರುತಿನ ಚೀಟಿಗಳನ್ನು ನಕಲು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕೃತ್ಯವನ್ನು ಪ್ರಮುಖವಾಗಿ ಆಸ್ಟ್ರೇಲಿಯಾದ ದಂಪತಿ ವೀಸಾವನ್ನು ಪಡೆಯಲು ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಬಟಿಂದಾದಲ್ಲಿ ಈ ವಿಚಾರವಾಗಿ ತನಿಖೆ ನಡೆಸುತ್ತಿರುವ ಇನ್ಸ್ಪೆಕ್ಟರ್ ಪ್ರಕಾರ "ನಮ್ಮ ತನಿಖೆಯ ಪ್ರಕಾರ ಈಗಾಗಲೇ ಸೋದರ ಆಸ್ಟ್ರೇಲಿಯಾದ ಶಾಶ್ವತ ನಿವಾಸಿಯಾಗಿದ್ದಾನೆ.ಅವರ ಸಹೋದರಿಯ ದಾಖಲೆಗಳನ್ನು ತಿರುಚಲಾಗಿದೆ.ಅವರು ಗುರುದ್ವಾರದಿಂದ ಮದುವೆ ಪ್ರಮಾಣ ಪತ್ರವನ್ನು ಪಡೆದು ನಂತರ ಉಪನೋಂದಣಿ ಅಧಿಕಾರಿ ಕಚೇರಿಯಲ್ಲಿ ದಾಖಲಿಸಿದ್ದಾರೆ" ಎಂದು ಅವರು ತಿಳಿಸಿದ್ದಾರೆ. ಈ ಘಟನೆ 2012 ರಲ್ಲಿ ನಡೆದಿದ್ದು ಎಂದು ಹೇಳಲಾಗಿದೆ.ಈಗ ದೂರಿನಲ್ಲಿ ಕೇವಲ ಸಹೋದರ ಸಹೋದರಿ ಅಷ್ಟೇ ಅಲ್ಲದೆ ಅವರ ಪೋಷಕರ ಹೆಸರನ್ನು ಕೂಡ ಉಲ್ಲೇಖ ಮಾಡಲಾಗಿದೆ ಎಂದು ತಿಳಿದುಬಂದಿದೆ.