ಭಾರತದ ಹೆಮ್ಮೆಯ ಚಂದ್ರಯಾನ-3 ಯೋಜನೆಯ ಯಶಸ್ಸಿನ ಹಾದಿ, ಕೈಗೊಂಡ ಸಾಧನೆಗಳು

Chandrayaana 3 : ಆಗಸ್ಟ್ 23ರಂದು ಸಂಜೆ 6 ಗಂಟೆಗೆ ಭಾರತದ ಚಂದ್ರಯಾನ-3 ಯೋಜನೆಯ ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ನಡೆಸಿತು. 

Written by - Girish Linganna | Last Updated : Nov 3, 2023, 10:35 PM IST
  • ಭಾರತದ ಹೆಮ್ಮೆಯ ಚಂದ್ರಯಾನ 3
  • ಚಂದ್ರಯಾನ 3 ಯಶಸ್ಸಿನ ಹಾದಿ
  • ಇಸ್ರೋ ಕೈಗೊಂಡ ಸಾಧನೆಗಳು
ಭಾರತದ ಹೆಮ್ಮೆಯ ಚಂದ್ರಯಾನ-3 ಯೋಜನೆಯ ಯಶಸ್ಸಿನ ಹಾದಿ, ಕೈಗೊಂಡ ಸಾಧನೆಗಳು title=

Chandrayaana 3 Success : 19 ನಿಮಿಷಗಳ ಪವರ್ ಡಿಸೆಂಟ್ ಪ್ರಕ್ರಿಯೆಯ ಬಳಿಕ, ಭಾರತ ಚಂದ್ರನ ಕಕ್ಷೆಯಿಂದ ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡಿಂಗ್ ನಡೆಸಿದ ಅಮೆರಿಕಾ, ಹಿಂದಿನ ಸೋವಿಯತ್ ಒಕ್ಕೂಟ, ಹಾಗೂ ಚೀನಾಗಳ ಸಾಲಿಗೆ ಸೇರ್ಪಡೆಗೊಂಡಿತು. ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಸಂಭ್ರಮದಿಂದ "ಭಾರತ ಚಂದ್ರನ ಮೇಲೆ ಕಾಲಿಟ್ಟಿದೆ" ಎಂದು ಘೋಷಿಸಿದರು.

ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಯಲ್ಲಿ ಮಾಂಜಿ಼ನಸ್ ಯು ಕುಳಿಯ ಬಳಿ, 69.37° ದಕ್ಷಿಣ ಅಕ್ಷಾಂಶ ಹಾಗೂ 32.35° ಪೂರ್ವ ರೇಖಾಂಶದಲ್ಲಿ ಇಳಿದಿದೆ. ಆಸ್ಟ್ರೇಲಿಯಾದ ನ್ಯೂ ನಾರ್ಸಿಯಾದಲ್ಲಿರುವ ಯುರೋಪಿಯನ್ ಸ್ಪೇಸ್ ಏಜೆನ್ಸಿಯ (ಇಎಸ್ಎ) ಇಸ್ಟ್ರಾಕ್ ಡೀಪ್ ಸ್ಪೇಸ್ ಟ್ರ್ಯಾಕಿಂಗ್ ಸ್ಟೇಷನ್ ವಿಕ್ರಮ್ ಲ್ಯಾಂಡರ್ ಇಳಿಯುವಿಕೆಗೆ ಸಹಕಾರ ನೀಡುವಲ್ಲಿ ಮಹತ್ವದ ಪಾತ್ರ ವಹಿಸಿತ್ತು. ಈ ಯಶಸ್ವಿ ಲ್ಯಾಂಡಿಂಗ್ ಚಂದ್ರನ ಮೇಲೆ ಅತ್ಯಂತ ಹೆಚ್ಚಿನ ಅಕ್ಷಾಂಶದಲ್ಲಿ ಸಾಫ್ಟ್ ಲ್ಯಾಂಡಿಂಗ್ ನಡೆಸಿದ ಸಾಧನೆ ನಿರ್ಮಿಸಿತು.

ಚಂದ್ರಯಾನ-3 ಯೋಜನೆಯ ಲ್ಯಾಂಡರ್ ವಿಕ್ರಮ್, ರೋವರ್ ಪ್ರಗ್ಯಾನ್ ಚಂದ್ರನ ಮೇಲೆ ಬಹುತೇಕ 10 ದಿನಗಳ ಕಾಲ ಮಾಹಿತಿಗಳು ಮತ್ತು ಛಾಯಾಚಿತ್ರಗಳನ್ನು ಸಂಗ್ರಹಿಸಿ, ಅವುಗಳನ್ನು ಹೆಚ್ಚಿನ ವಿಶ್ಲೇಷಣೆಗಾಗಿ ಭೂಮಿಗೆ ರವಾನಿಸಿದವು. ಪ್ರಗ್ಯಾನ್ ಅನ್ನು ಸೆಪ್ಟೆಂಬರ್ 2ರಂದು ನಿದ್ರೆಗೆ ಜಾರುವಂತೆ ಮಾಡಿದರೆ, ವಿಕ್ರಮ್ ಲ್ಯಾಂಡರ್ ಅನ್ನು ಸೆಪ್ಟೆಂಬರ್ 4ರಂದು ಸ್ಲೀಪ್ ಮೋಡ್‌ಗೆ ಕಳುಹಿಸಲಾಯಿತು. ಆದರೆ, ರೋವರ್ ತನ್ನ ಎಲ್ಲ ಉದ್ದೇಶಿತ ಗುರಿಗಳನ್ನು ಯಶಸ್ವಿಯಾಗಿ ಪೂರೈಸಿದೆ ಎಂದು ಇಸ್ರೋ ಖಚಿತಪಡಿಸಿದೆ.

ಇದನ್ನೂ ಓದಿ : ರೂ.500ಕ್ಕೆ ಗ್ಯಾಸ್ ಸಿಲಿಂಡರ್, 15 ಲಕ್ಷ ರೂ.ಗಳ ವಿಮೆ... ಕೇಂದ್ರ ಸಚಿವ ಅಮಿತ್ ಷಾ ಮಹತ್ವದ ಘೋಷಣೆ!

ಆ ಸಂದರ್ಭದಲ್ಲೂ, ಇಸ್ರೋ ಎರಡು ವಾರಗಳ ಚಂದ್ರನ ರಾತ್ರಿಯ ಬಳಿಕ, ರೋವರ್ ಹಾಗೂ ಲ್ಯಾಂಡರ್‌ಗಳಿಗೆ ಸೂರ್ಯನ ಬೆಳಕು ಲಭ್ಯವಾದಾಗ ಲ್ಯಾಂಡರನ್ನು ಮರಳಿ ಎಚ್ಚರಿಸಬಹುದು ಎಂಬ ನಂಬಿಕೆ ವ್ಯಕ್ತಪಡಿಸಿತ್ತು. ಚಂದ್ರನ ಮೇಲೆ ಸೆಪ್ಟೆಂಬರ್ 20ರಂದು ಸೂರ್ಯೋದಯವಾಗಿತ್ತು. ವಿಕ್ರಮ್ ಹಾಗೂ ಪ್ರಗ್ಯಾನ್‌ಗೆ ಎಚ್ಚರವಾಗಲು ಸೆಪ್ಟೆಂಬರ್ 22ರ ತನಕ ಅತ್ಯುತ್ತಮ ಕಾಲಾವಕಾಶವಿತ್ತು.

ಆದರೆ ವಿಕ್ರಮ್ ಆಗಲಿ, ಪ್ರಗ್ಯಾನ್ ಆಗಲಿ ಚಂದ್ರನ ಮೇಲ್ಮೈಯಲ್ಲಿ -190 ಡಿಗ್ರಿ ಸೆಲ್ಸಿಯಸ್ ನಷ್ಟು ತಣ್ಣನೆಯ ತಾಪಮಾನದಲ್ಲಿ ಬೆಚ್ಚಗಿರಬಲ್ಲ ವ್ಯವಸ್ಥೆಗಳನ್ನು ಒಳಗೊಂಡಿರಲಿಲ್ಲ. ಅದಾದ ಬಳಿಕ ಸೆಪ್ಟೆಂಬರ್ 30ರಂದು ಚಂದ್ರನ ಮೇಲ್ಮೈಯಲ್ಲಿ ಮತ್ತೆ ಬೆಳಕು ಕಡಿಮೆಯಾಗಲು ಆರಂಭವಾಯಿತು. ಆದರೂ ಮುಂದಿನ ಚಂದ್ರನ ಹಗಲಿನ ವೇಳೆಗೆ ವಿಕ್ರಮ್ ಮತ್ತು ಪ್ರಗ್ಯಾನ್ ಎಚ್ಚರಗೊಳ್ಳಬಹುದು ಎಂದು ಇಸ್ರೋ ವಿಜ್ಞಾನಿಗಳು ನಂಬಿಕೆ ಹೊಂದಿದ್ದರು. ಆದರೆ ಹಲವಾರು ಪ್ರಯತ್ನಗಳ ಹೊರತಾಗಿಯೂ, ವಿಕ್ರಮ್ ಮತ್ತು ಪ್ರಗ್ಯಾನ್ ಎಚ್ಚರಗೊಳ್ಳಲಿಲ್ಲ. ಚಂದ್ರಯಾನ-3ರಿಂದ ಭೂಮಿಗೆ ಯಾವುದೇ ಸಂಕೇತಗಳು ಲಭ್ಯವಾಗಲಿಲ್ಲ.

ಆವಿಷ್ಕಾರಗಳು ಮತ್ತು ಪರಿಣಾಮಗಳು

ಸೆಪ್ಟೆಂಬರ್ 2ರಂದು ರೋವರ್ ಅನ್ನು ಸ್ಥಗಿತಗೊಳಿಸುವ ಮುನ್ನ, ಇಸ್ರೋ ಪ್ರಗ್ಯಾನ್ ರೋವರ್ 100 ಮೀಟರ್‌ಗೂ ಹೆಚ್ಚು ವ್ಯಾಪ್ತಿಯನ್ನು ಕ್ರಮಿಸಿದ್ದು, ಇನ್ನೂ ಚಲನಶೀಲವಾಗಿದೆ ಎಂದಿತ್ತು. ಆರು ಚಕ್ರಗಳ ರೋವರ್ ಆಗಿರುವ ಪ್ರಗ್ಯಾನ್ ಗರಿಷ್ಠ ವೇಗ ಪ್ರತಿ ಸೆಕೆಂಡಿಗೆ ಕೇವಲ ಒಂದು ಸೆಂಟಿಮೀಟರ್ ಅಷ್ಟೇ. ಈ ಕನಿಷ್ಠ ವೇಗವನ್ನು ಹೊಂದಿರುವ ಪ್ರಗ್ಯಾನ್, ನೂರು ಮೀಟರ್‌ಗೂ ಹೆಚ್ಚಿನ ವ್ಯಾಪ್ತಿಯನ್ನು ಕ್ರಮಿಸಿದ್ದು ಗಮನಾರ್ಹ ಸಾಧನೆಯಾಗಿದೆ. ಅದರೊಡನೆ ಪ್ರಗ್ಯಾನ್ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಹರಡಿರುವ ಕುಳಿಗಳಲ್ಲಿ ಇಳಿಯದಂತೆ ಚಲಿಸಬೇಕಾಗಿತ್ತು. ಅದರ ಪ್ರತಿಯೊಂದು ಚಕ್ರವೂ ಸ್ವತಂತ್ರವಾಗಿ ಚಲಿಸಬಲ್ಲವಾಗಿದ್ದು, ವಿವಿಧ ರೀತಿಯ ಮೇಲ್ಮೈಯಲ್ಲಿ ಚಲಿಸಲು ಅನುಕೂಲ ಕಲ್ಪಿಸುತ್ತಿತ್ತು.

ತೀವ್ರ ತಾಪಮಾನ ಬದಲಾವಣೆ

ಚಂದ್ರನ ಮೇಲ್ಮೈಯ ಮಣ್ಣನ್ನು ವಿಕ್ರಮ್ ಲ್ಯಾಂಡರ್ ಹೊಂದಿದ್ದ ಉಪಕರಣಗಳು 10 ಸೆಂಟಿಮೀಟರ್ ಆಳದ ತನಕ ಕೊರೆದಿದ್ದು, ಆ ಮೂಲಕ ಪಡೆದ ಮಾಹಿತಿ ಚಂದ್ರನ ಮೇಲ್ಮೈಯಲ್ಲಿ ಮತ್ತು ನೆಲದ ಆಳದಲ್ಲಿರುವ ಅಪಾರ ತಾಪಮಾನ ಬದಲಾವಣೆಯನ್ನು ತೋರಿಸಿದೆ. ಚಂದ್ರನ ಮೇಲ್ಮೈ ತಾಪಮಾನ ಬಹುತೇಕ 60 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕೇವಲ 80 ಮಿಲಿಮೀಟರ್ ಆಳದಲ್ಲಿ ತಾಪಮಾನ -10 ಡಿಗ್ರಿ ಸೆಲ್ಸಿಯಸ್‌ಗೆ ಕುಸಿಯುತ್ತದೆ.

ಚಂದ್ರನಲ್ಲಿ ಅಪಾರವಾದ ತಾಪಮಾನ ಬದಲಾವಣೆಗಳಾಗುತ್ತವೆ. ಹಗಲಿನ ವೇಳೆಯಲ್ಲಿ, ಚಂದ್ರನ ಸಮಭಾಜಕ ಪ್ರದೇಶದಲ್ಲಿ ತಾಪಮಾನ ಗರಿಷ್ಠ 120 ಡಿಗ್ರಿ ಸೆಲ್ಸಿಯಸ್ ತಲುಪಿದರೆ, ರಾತ್ರಿಯ ವೇಳೆ ಕೊರೆಯುವ -130 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುತ್ತದೆ. ಇನ್ನು ಚಂದ್ರನ ಮೇಲ್ಮೈಯಲ್ಲಿರುವ ಶಾಶ್ವತ ನೆರಳಿನ ಕುಳಿಗಳಿಗೆ ಸೂರ್ಯನ ಬೆಳಕು ಯಾವತ್ತೂ ಪ್ರವೇಶಿಸುವುದೇ ಇಲ್ಲ. ಅಲ್ಲಿನ ತಾಪಮಾನ ಕನಿಷ್ಠ -250 ಡಿಗ್ರಿ ಸೆಲ್ಸಿಯಸ್ ತನಕ ಇಳಿಯುತ್ತದೆ. ಇಷ್ಟೊಂದು ತಾಪಮಾನ ಬದಲಾವಣೆಯನ್ನು ಗಮನಿಸಿದರೆ, ಚಂದ್ರನ ಮಣ್ಣು (ಲೂನಾರ್ ರಿಗೋಲಿತ್) ಅತ್ಯಂತ ಪರಿಣಾಮಕಾರಿ ಅವಾಹಕವಾಗಿ ಕಾರ್ಯಾಚರಿಸಿ, ವಿಕಿರಣಗಳು ಮತ್ತು ತಾಪಮಾನದಿಂದ ಬಚಾವಾಗಿ ಆವಾಸ ಸ್ಥಾನಗಳನ್ನು ರಚಿಸಲು ನೆರವಾಗಬಲ್ಲದು. ಚಂದ್ರನ ಮೇಲೆ ವಾಸಸ್ಥಾನ ನಿರ್ಮಿಸಬೇಕಾದರೆ, ಚಂದ್ರನ ನೆಲದಾಳವೇ ಅದಕ್ಕೆ ಸೂಕ್ತ ಆಯ್ಕೆಯಾಗಿದೆ.

ಚಂದ್ರನ ವಿಕಾಸದ ಕುರಿತು ಮಾಹಿತಿ

ಪ್ರಗ್ಯಾನ್ ಹೊಂದಿದ್ದ ಲೇಸರ್ ಡಿಟೆಕ್ಟರ್ ಉಪಕರಣ ಚಂದ್ರನ ಮೇಲ್ಮೈಯಲ್ಲಿರುವ ರಾಸಾಯನಿಕಗಳನ್ನು ಅಳತೆ ಮಾಡಿ, ಅಲ್ಯುಮಿನಿಯಮ್, ಕ್ಯಾಲ್ಸಿಯಂ, ಕಬ್ಬಿಣ, ಕ್ರೋಮಿಯಂ, ಟೈಟಾನಿಯಂ, ಮ್ಯಾಂಗನೀಸ್, ಸಿಲಿಕಾನ್ ಮತ್ತು ಆಮ್ಲಜನಕದಂತಹ ವಿವಿಧ ಅಂಶಗಳನ್ನು ಪತ್ತೆಹಚ್ಚಿದೆ. ಆದರೆ ಇದರಲ್ಲಿ ಅತ್ಯಂತ ಮಹತ್ತರ ಸಂಶೋಧನೆಯೆಂದರೆ ಗಂಧಕ. ಸಾಮಾನ್ಯವಾಗಿ ಗಂಧಕ ಜ್ವಾಲಾಮುಖಿಗಳಿಂದ ಉತ್ಪತ್ತಿಯಾಗುತ್ತದೆ. ಆದ್ದರಿಂದ, ಚಂದ್ರ ಹೇಗೆ ಉಂಟಾಗಿರಬಹುದು, ಹೇಗೆ ವಿಕಾಸ ಹೊಂದಿರಬಹುದು ಎಂಬ ಕುರಿತು ನಮಗೆ ಹೆಚ್ಚಿನ ಮಾಹಿತಿ ಪಡೆಯಲು ಅನುಕೂಲವಾಗುತ್ತದೆ. ಗಂಧಕ ಒಂದು ಪ್ರಮುಖ ರಸಗೊಬ್ಬರವೂ ಆಗಿರುವುದರಿಂದ, ಭವಿಷ್ಯದಲ್ಲಿ ಯಾವತ್ತಾದರೂ ಮಾನವ ನೆಲೆಯಾದರೆ, ಆಗ ಸಸ್ಯಗಳನ್ನು ಬೆಳೆಸಲೂ ಗಂಧಕದ ಲಭ್ಯತೆ ಧನಾತ್ಮಕ ಸುದ್ದಿಯಾಗಿದೆ.

ಚಂದ್ರನಲ್ಲಿ ನಿಜಕ್ಕೂ ಕಂಪನಗಳಿವೆಯೇ?

ವಿಕ್ರಮ್ ಲ್ಯಾಂಡರ್ ತನ್ನೊಡನೆ ಇನ್ಸ್ಟ್ರುಮೆಂಟ್ ಫಾರ್ ಲೂನಾರ್ ಸೀಸ್ಮಿಕ್ ಆ್ಯಕ್ಟಿವಿಟಿ (ಐಎಲ್ಎಸ್ಎ) ಎಂಬ ಉಪಕರಣವನ್ನು ಹೊಂದಿತ್ತು. ಐಎಲ್ಎಸ್ಎ ಕೇವಲ ತನ್ನ ಶೋಧನೆಗಳಿಂದ ಉಂಟಾಗುವ ಕಂಪನಗಳನ್ನು ಮಾತ್ರ ಗುರುತಿಸುವುದಲ್ಲದೆ, ರೋವರ್ ಮತ್ತದರ ಕಾರ್ಯಾಚರಣೆಗಳಿಂದ ಉಂಟಾಗುವ ಕಂಪನಗಳನ್ನೂ ಗ್ರಹಿಸುತ್ತಿತ್ತು. ಐಎಲ್ಎಸ್ಎ ಚಂದ್ರನ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುವಾಗ, ಅದು ನೈಸರ್ಗಿಕವಾಗಿ ಉಂಟಾಗುವ ಕಂಪನಗಳನ್ನು ಗಮನಿಸಿ, ಅದರ ಮೂಲವನ್ನು ಶೋಧಿಸುತ್ತಿತ್ತು. ಅದು ಬಾಹ್ಯಾಕಾಶ ತ್ಯಾಜ್ಯಗಳಿಂದ ಉಂಟಾಗಿರಬಹುದು, ಉಲ್ಕೆ ಅಥವಾ ಕ್ಷುದ್ರಗ್ರಹ ಚಂದ್ರನ ಮೇಲ್ಮೈಗೆ ಅಪ್ಪಳಿಸಿದ್ದರಿಂದಲೂ ಉಂಟಾಗಿರಬಹುದು. ಅಥವಾ ಇದು ಕಂಪನ ಪ್ರಕ್ರಿಯೆಯಿಂದಲೇ ಆಗಿದ್ದು, 1970ರ ಬಳಿಕ ಗ್ರಹಿಸಲಾದ ಮೊದಲ ಚಂದ್ರ ಕಂಪನವೂ ಆಗಿರಬಹುದು.

ಚಂದ್ರನ ಪ್ಲಾಸ್ಮಾವನ್ನು ಅರ್ಥೈಸುವಿಕೆ

ಇಸ್ರೋ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ (ಈ ಮೊದಲು ಟ್ವಿಟರ್) ಮಾಹಿತಿ ಹಂಚಿಕೊಂಡಿದ್ದು, ವಿಕ್ರಮ್ ಹೊಂದಿದ್ದ ಉಪಕರಣ ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಬಳಿ "ಚಂದ್ರನ ಮೇಲ್ಮೈಯ ಸನಿಹದಲ್ಲಿರುವ ಪ್ಲಾಸ್ಮಾ ವಾತಾವರಣವನ್ನು ಇದೇ ಮೊದಲ ಬಾರಿಗೆ ಅಳೆದಿದೆ" ಎಂದಿದ್ದು, ಈ ಪ್ಲಾಸ್ಮಾ ವಿರಳವಾಗಿದೆ ಎಂದಿತ್ತು. ಪ್ಲಾಸ್ಮಾದ ಉಪಸ್ಥಿತಿ ಚಂದ್ರನ ವಾತಾವರಣದಲ್ಲಿ ಚಾರ್ಜ್ ಹೊಂದಿರುವ ಕಣಗಳಿವೆ ಎಂಬುದನ್ನು ಸೂಚಿಸುತ್ತದೆ. ಇವುಗಳು ಚಂದ್ರಯಾನ-3 ಬಳಸಿದ ರೇಡಿಯೋ ತರಂಗಗಳೊಡನೆ ಹಸ್ತಕ್ಷೇಪ ನಡೆಸಬಲ್ಲವು. ಚಂದ್ರನ ಪ್ಲಾಸ್ಮಾ ಅತ್ಯಂತ ತೆಳುವಾಗಿದ್ದು, ಇದು ರೇಡಿಯೋ ಸಂವಹನಕ್ಕೆ ಅತ್ಯಂತ ಕಡಿಮೆ ತೊಂದರೆ ಉಂಟುಮಾಡಬಲ್ಲದು.

ಲ್ಯಾಂಡರ್‌ನ ಜಿಗಿಯುವ ಪ್ರಕ್ರಿಯೆ

ವಿಕ್ರಮ್ ಸ್ಥಗಿತಗೊಳ್ಳುವ ಮೊದಲು ಕೈಗೊಂಡ ಅಂತಿಮ ಪ್ರಕ್ರಿಯೆಯನ್ನು 'ಹಾಪ್ ಎಕ್ಸ್‌ಪರಿಮೆಂಟ್' ಅಥವಾ ನೆಗೆತ ಪ್ರಯೋಗ ಎನ್ನಲಾಗಿದೆ. ಈ ಸಂದರ್ಭದಲ್ಲಿ, ಲ್ಯಾಂಡರ್‌ಗೆ ತನ್ನ ಇಂಜಿನ್‌ಗಳನ್ನು ಚಾಲನೆಗೊಳಿಸಿ, 40 ಸೆಂಟಿಮೀಟರ್‌ಗಳಷ್ಟು ಮೇಲಕ್ಕೆ ಚಿಮ್ಮಿ, 30-40 ಸೆಂಟಿಮೀಟರ್ ದೂರದಲ್ಲಿ ಇಳಿಯಲು ಸೂಚಿಸಲಾಯಿತು. ಈ ಯಶಸ್ವಿ ಪರೀಕ್ಷೆ ಚಂದ್ರನ ಮೇಲೆ ಇಳಿದ ಬಳಿಕ ಇಂಜಿನ್‌ಗಳು ಮರಳಿ ಚಾಲ್ತಿಗೊಳ್ಳುತ್ತವೆಯೇ ಎಂಬುದನ್ನು ಪರೀಕ್ಷಿಸಲು ನೆರವಾಗಿದೆ. ಆ ಮೂಲಕ ಭವಿಷ್ಯದಲ್ಲಿ ಚಂದ್ರನ ಮೇಲಿಂದ ಮಾದರಿಗಳನ್ನು ಭೂಮಿಗೆ ತರಲು ಅಥವಾ ಮಾನವ ಸಹಿತ ಚಂದ್ರ ಅನ್ವೇಷಣಾ ಯೋಜನೆಗಳನ್ನು ಕೈಗೊಳ್ಳಲು ಈ ತಂತ್ರಜ್ಞಾನವನ್ನು ಬಾಹ್ಯಾಕಾಶ ನೌಕೆಗಳಲ್ಲಿ ಬಳಸಬಹುದು.

ಇದನ್ನೂ ಓದಿ : Daily GK Quiz: ಯಾವ ನಗರವನ್ನು ಭಾರತದ ‘ಗೋಲ್ಡನ್ ಸಿಟಿ’ ಎಂದು ಕರೆಯುತ್ತಾರೆ..?

ಲೇಖಕರು - ಗಿರೀಶ್ ಲಿಂಗಣ್ಣ (ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News