close

News WrapGet Handpicked Stories from our editors directly to your mailbox

ಕರ್ 'ನಾಟಕ' ಕೊನೆಗೊಳ್ಳಬೇಕು: ಸಿಎಂ ಕುಮಾರಸ್ವಾಮಿ ಮೇಲೆ ಶಿವಸೇನೆ ವಾಗ್ದಾಳಿ

ಈಗಾಗಲೇ ಬಹುಮತ ಕಳೆದುಕೊಂಡಿರುವ ಹೆಚ್.ಡಿ. ಕುಮಾರಸ್ವಾಮಿ ಸರ್ಕಾರ ವಿಧಾನಸಭೆಯಲ್ಲಿ ಕಾಲಹರಣ ಮಾಡುತ್ತಿದೆ ಎಂದು ರಾಜ್ಯ ಮೈತ್ರಿ ಸರ್ಕಾರದ ವಿರುದ್ದ ಶಿವಸೇನೆ ವಾಗ್ಧಾಳಿ ನಡೆಸಿದೆ.

Updated: Jul 22, 2019 , 09:43 AM IST
ಕರ್ 'ನಾಟಕ' ಕೊನೆಗೊಳ್ಳಬೇಕು: ಸಿಎಂ ಕುಮಾರಸ್ವಾಮಿ ಮೇಲೆ ಶಿವಸೇನೆ ವಾಗ್ದಾಳಿ

ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಅಂಟಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿರುವ ಶಿವಸೇನೆ, ಕರ್ 'ನಾಟಕ' ಕೊನೆಗೊಳ್ಳಬೇಕು ಎಂದು ಒತ್ತಾಯಿಸಿದೆ.

ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗಿದ್ದು, ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ನಾಟಕ ಸೋಮವಾರ ಕೊನೆಗೊಳ್ಳಲಿದೆ ಎಂದು ಹೇಳುವುದು ಕಷ್ಟ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಶಿವಸೇನೆ, ಕರ್ನಾಟಕ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಅಂಟಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದೆ.

ಈಗಾಗಲೇ ಬಹುಮತವನ್ನು ಕಳೆದುಕೊಂಡಿರುವ ಕುಮಾರಸ್ವಾಮಿ ಸರ್ಕಾರ ಸದನದಲ್ಲಿ ವಿನಾಕಾರಣ ಚರ್ಚೆ ನಡೆಸಿ ಸಮಯ ವ್ಯರ್ಥ ಮಾಡುತ್ತಿದೆ. ವಿಧಾನಸಭೆಯೊಳಗೆ ಆದಷ್ಟು ಬೇಗ ಬಹುಮತ ಸಾಬೀತು ಪಡಿಸುವಂತೆ ಶಿವಸೇನೆ ಆಗ್ರಹಿಸಿದ್ದು, ಅಸೆಂಬ್ಲಿ ಸ್ಪೀಕರ್ ಕೆ.ಆರ್.ರಮೇಶ್ ಅವರು ಆದಷ್ಟು ಬೇಗ ಸಿಎಂ ಕುಮಾರಸ್ವಾಮಿ ಅವರಿಗೆ ವಿಶ್ವಾಸ ಮತ ಚಲಾಯಿಸುವಂತೆ ಒತ್ತಾಯಿಸುಬೇಕು ಎಂದು ಸಲಹೆ ನೀಡಿದೆ.

ಕರ್ನಾಟಕ ರಾಜ್ಯಪಾಲ ವಾಜುಭಾಯ್ ವಾಲಾ, ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ಮತ್ತು ಕುಮಾರಸ್ವಾಮಿ ತಮ್ಮದೇ ಆದ ಆಟ ಆಡುತ್ತಿದ್ದಾರೆ ಎಂದು ಸಾಮ್ನಾದ ಸಂಪಾದಕೀಯದಲ್ಲಿ ತಿಳಿಸಲಾಗಿದೆ. ಶಿವಸೇನೆ ಪ್ರಕಾರ, ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಚದುರಂಗದಾಟದಲ್ಲಿ ಬಂಡಾಯ ಶಾಸಕರೇ ನಿಜವಾದ ವಿಜೇತರು ಎನ್ನಲಾಗಿದೆ. ಏಕೆಂದರೆ ವಿಶ್ವಾಸಮತ ಯಾಚನೆ ವೇಳೆ ಸದನದಲ್ಲಿ ಹಾಜರಿರುವ ಅಥವಾ ಗೈರಾಗುವ ಬಗ್ಗೆ ನಿರ್ಧರಿಸಲು ಸುಪ್ರೀಂಕೋರ್ಟ್ ಅತೃಪ್ತ ಶಾಸಕರಿಗೆ ಅವಕಾಶ ಮಾಡಿಕೊಟ್ಟಿದೆ. ಇದರಿಂದ ಅತೃಪ್ತ ಶಾಸಕರು ಪಕ್ಷಾಂತರ ವಿರೋಧಿ ಕಾನೂನಿನಡಿಯಲ್ಲಿ ಕೈಗೊಳ್ಳಬಹುದಾದ ಕ್ರಮದಿಂದ ತಪ್ಪಿಸಿಕೊಂಡಂತಾಗಿದೆ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ತಿಳಿಸಿದೆ.

ಇನ್ನು ಅತೃಪ್ತ ಶಾಸಕರ ಪರವಾಗಿ ನೀಡಿರುವ ಆದೇಶವನ್ನು ವಿವರವಾಗಿ ವಿವರಿಸುವಂತೆ ಸಿಎಂ ಕುಮಾರಸ್ವಾಮಿ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದಾರೆ. ಸುಪ್ರೀಂಕೋರ್ಟ್ ಸೋಮವಾರ ಈ ಬಗ್ಗೆ ವಿಚಾರಣೆ ನಡೆಸಲಿದ್ದು, ಸಿಎಂ ಕುಮಾರಸ್ವಾಮಿಗೆ ಇದರಿಂದ ಪರಿಹಾರ ದೊರೆಯುವ ಸಾಧ್ಯತೆ ಇದೆ ಎನ್ನಲಾಗಿದೆ. 

ಹೆಚ್‌ಡಿಕೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿ:
ಶಾಸಕರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡುವ ಸಾಂವಿಧಾನಿಕ ಹಕ್ಕನ್ನು ಪಡೆದಿದ್ದಾರೆ ಮತ್ತು ಯಾವುದೇ ಶಾಸಕರು ಒತ್ತಡಕ್ಕೆ ರಾಜೀನಾಮೆ ನೀಡಿದ್ದರೆ ವಿಧಾನಸಭಾ ಸ್ಪೀಕರ್ ಅವರ ರಾಜೀನಾಮೆಯನ್ನು ತಿರಸ್ಕರಿಸುವ ಅಧಿಕಾರವನ್ನು ಹೊಂದಿದ್ದಾರೆ ಎಂದು ಶಿವಸೇನೆ ತನ್ನ ಲೇಖನದಲ್ಲಿ ಉಲ್ಲೇಖಿಸಿದೆ. ಶಾಸಕರು ಸ್ವಯಂಪ್ರೇರಣೆಯಿಂದ ರಾಜೀನಾಮೆ ನೀಡಿದ್ದಾರೆಯೇ ಅಥವಾ ಯಾವುದೇ ಒತ್ತಡದಲ್ಲಿದ್ದಾರೆಯೇ ಎಂದು ತನಿಖೆ ನಡೆಸಬೇಕು ಆದರೆ ಇದು ಮತ್ತೆ ಸಮಯ ತೆಗೆದುಕೊಳ್ಳಲಿದೆ ಎಂದು ತಿಳಿಸಿರುವ ಶಿವಸೇನೆ, ಪ್ರಜಾಪ್ರಭುತ್ವದ ನಿಯಮಗಳನ್ನು ಪಾಲಿಸಿ, ಹೆಚ್.ಡಿ. ಕುಮಾರಸ್ವಾಮಿಯವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದೆ. 

ವಿಶ್ವಾಸ ಮತಯಾಚನೆಯನ್ನು ವಿಳಂಬ ಮಾಡುವ ದೃಷ್ಟಿಯಿಂದ ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ 'ವಿಪ್' ಅನ್ನು ದಾಳವಾಗಿ ದುರುಪಯೋಗಪಡಿಸುತ್ತಿದೆ ಎಂದಿರುವ ಶಿವಸೇನೆ, ಎಲ್ಲಾ ರಾಜಕೀಯ ಪಕ್ಷಗಳು ಕರ್ನಾಟಕದಲ್ಲಿ ಪ್ರಜಾಪ್ರಭುತ್ವವನ್ನು ಅಪಹಾಸ್ಯ ಮಾಡುತ್ತಿವೆ ಮತ್ತು ಕೇಂದ್ರವು ಇಡೀ ನಾಟಕವನ್ನು ಮೌನವಾಗಿ ವೀಕ್ಷಿಸುತ್ತಿರುವುದು ಆಶ್ಚರ್ಯಕರವಾಗಿದೆ ಎಂದು ತನ್ನ ಸಂಪಾದಕೀಯದಲ್ಲಿ ತಿಳಿಸಿದೆ. ಕೇಂದ್ರವು ಕರ್ನಾಟಕದಲ್ಲಿ ರಾಷ್ಟ್ರಪತಿಗಳ ಆಡಳಿತವನ್ನು ಹೇರಬೇಕು ಮತ್ತು ನಂತರ ರಾಜ್ಯದ ಜನರಿಗೆ ಮುಂದಿನ ಸರ್ಕಾರದ ಭವಿಷ್ಯವನ್ನು ನಿರ್ಧರಿಸಲು ಅವಕಾಶ ನೀಡಬೇಕು ಎಂದು ಇದೇ ಸಂದರ್ಭದಲ್ಲಿ ಶಿವಸೇನೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.