ಶ್ರೀನಗರ : ಈ ಕಾಶ್ಮೀರ ದೇಶದ ಆಸ್ತಿ ನಾವು ಇದನ್ನು ಕಾಪಾಡಿಕೊಳ್ಳಬೇಕು. ಈ ಹವಾಮಾನ ಪರಿಸ್ಥಿತಿಯಲ್ಲಿ ನಮ್ಮ ಯೋಧರು ಹೇಗೆ ಗಡಿ ಕಾಯುತ್ತಾರೆ. ಅವರಿಗೆ ಧನ್ಯವಾದಗಳು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.
ವಾಸ್ತವವಾಗಿ, ಇಂದು ಕಾಶ್ಮೀರದಲ್ಲಿ ಭಾರತ ಜೋಡೋ ಯಾತ್ರೆ ಸಮಾರೋಪ ಸಮಾರಂಭ ನಡೆಯುತ್ತಿದ್ದು, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಪ್ರಮುಖ ನಾಯಕರು ಕಣಿವೆ ರಾಜ್ಯಕ್ಕೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಕಾಶ್ಮೀರದ ಹಿಮಪಾತ ಹಾಗೂ ಪ್ರಕೃತಿ ಸೌಂದರ್ಯಕ್ಕೆ ಮನಸೋತಿರುವ ಡಿ.ಕೆ. ಶಿವಕುಮಾರ್ ಅವರು ವಿಡಿಯೋ ಮೂಲಕ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಕಾಶ್ಮೀರದ ಶ್ರೀನಗರದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಸಮಾರೋಪ ಸಮಾರಂಭದಲ್ಲಿ ಮಾತಾನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಒಡೆದ ಮನಸ್ಸುಗಳನ್ನು ಒಂದುಗೂಡಿಸಲು ಹಾಗೂ ದೇಶದ ಜ್ವಲಂತ ಸಮಸ್ಯೆಗಳ ಕುರಿತು ಜನಪರ ಧ್ವನಿ ಎತ್ತಲು ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾದ ಐತಿಹಾಸಿಕ ಭಾರತ ಜೋಡೋ ಯಾತ್ರೆ ಸೋಮವಾರ ಸಂಪೂರ್ಣವಾಗುತ್ತಿದೆ. ಕಳೆದ ಐದು ತಿಂಗಳಿಂದ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸುದೀರ್ಘ 3570 ಕಿ.ಮೀ. ಸಾಗಿದ ಈ ಯಾತ್ರೆ ದೇಶದ ಇತಿಹಾಸದ ಪುಟ ಸೇರಿದೆ. ಹೊಸ ಮೈಲುಗಲ್ಲು ಸೃಷ್ಟಿಸಿದೆ ಎಂದರು.
ಇದನ್ನೂ ಓದಿ- ವಿವಾದಾತ್ಮಕ ಘೋಷಣೆ ಆರೋಪ ಅಜ್ಮೀರ್ ಷರೀಫ್ ದರ್ಗಾದಲ್ಲಿ ಘರ್ಷಣೆ !
ವಿಭಿನ್ನ ಹವಾಮಾನಗಳ ವೈಪರಿತ್ಯ ಸವಾಲು, ರಾಜಕೀಯ ಎದುರಾಳಿಗಳ ಟೀಕೆ, ಷಡ್ಯಂತ್ರ, ಅಪಪ್ರಚಾರ ಸೇರಿದಂತೆ ಎಲ್ಲ ಅಡೆತಡೆಗಳನ್ನು ಮೀರಿ ನಮ್ಮ ಭಾರತ್ ಜೋಡೋ ಯಾತ್ರೆ ತನ್ನ ಗುರಿ ತಲುಪಿದೆ. ಇದು ಕಾಂಗ್ರೆಸ್ ಹಾಗೂ ಪಕ್ಷದ ನಾಯಕರಿಗೆ ದೇಶದ ಬಗ್ಗೆ ಇರುವ ಕಾಳಜಿ, ಬದ್ಧತೆಗೆ ಸಾಕ್ಷಿಯಾಗಿದೆ ಎಂದವರು ತಿಳಿಸಿದರು.
'ಭಾರತ ಜೋಡೋ ಯಾತ್ರೆ ಅಂತಿಮ ದಿನ ನಾವೆಲ್ಲ ಕಾಶ್ಮೀರದ ಶ್ರೀನಗರಕ್ಕೆ ಆಗಮಿಸಿದ್ದೇವೆ. ದೇಶವನ್ನು ಒಗ್ಗೂಡಿಸಿ, ದೇಶದ ಐಕ್ಯತೆಗೆ ರಾಹುಲ್ ಗಾಂಧಿ ಅವರು ಈ ಯಾತ್ರೆ ಆರಂಭಿಸಿದ್ದು, ಇಂದು ಯಾತ್ರೆಯ ಅಂತಿಮ ದಿನವಾಗಿದೆ. ಈ ಸಮಾರೋಪ ಕಾರ್ಯಕ್ರಮಕ್ಕೆ ಸುಮಾರು 100 ಸಂಸದರು, ಪಕ್ಷದ ಕಾರ್ಯಕಾರಿ ಸಮಿತಿಯ ಸದಸ್ಯರು, ಪ್ರಮುಖ ನಾಯಕರು ಸೇರಿದಂತೆ ಸಾವಿರಾರು ಮಂದಿ ಆಗಮಿಸಿದ್ದೇವೆ.
ಇದನ್ನೂ ಓದಿ- ಗಾಂಧೀಜಿ ಸ್ಮರಣೆ: 75 ವರ್ಷಗಳ ಬಳಿಕವೂ ಪ್ರಸ್ತುತವಾಗಿರುವ ಗಾಂಧೀಜಿಯವರ ಶಾಂತಿ ಮತ್ತು ನ್ಯಾಯದ ಬೋಧನೆಗಳು
ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾದ ಭಾರತ್ ಜೋಡೋ ಯಾತ್ರೆ ರುವಾರಿ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಜತೆ ಊಟ ಮುಗಿಸಿ ನಮ್ಮ ಕೊಣೆಗೆ ಬಂದು ಮಲಗುವಷ್ಟರಲ್ಲಿ ರಾತ್ರಿ 1 ಗಂಟೆ ಆಗಿತ್ತು. ರಾತ್ರಿ ಇಲ್ಲಿನ ಹವಾಮಾನ 9° ಸೆಲ್ಸಿಯಸ್ ಇತ್ತು. ಬೆಳಗಿನ ಜಾವ 2 ಗಂಟೆ ನಂತರ ಹಿಮ ಸುರಿಯಲು ಆರಂಭವಾಗಿದ್ದು, ಇಡೀ ಪ್ರದೇಶ ಹಿಮದಿಂದ ತುಂಬಿದೆ. ಇಂದು ಬೆಳಗ್ಗೆ ಕೊಠಡಿಯ ಹೊರಗೆ ಬಂದು ನೋಡಿದಾಗ ನನ್ನ ಜೀವನದಲ್ಲಿ ಎಂದೂ ನೋಡಿರದ ಹಿಮಪಾತ ಹಾಗೂ ಅದರ ಸೌಂದರ್ಯ ಮನಸೂರೆಗೊಂಡಿದೆ. ಧಾರಾಕಾರ ಮಳೆಯಂತೆ ಹಿಮ ಸುರಿಯುತ್ತಿದೆ. ಹಿಂದೆಂದೂ ನಾನು ಈ ರೀತಿಯ ಅದ್ಭುತ ದೃಶ್ಯ ಕಂಡಿರಲಿಲ್ಲ. ನಾನು ಈ ಹಿಂದೆ ಸ್ವಿಜರ್ಲೆಂಡ್ ಮತ್ತಿತರ ದೇಶಗಳಿಗೆ ಭೇಟಿ ನೀಡಿದ್ದೇನೆ. ಆದರೆ ಇಂದು ನನಗೆ ಆಗಿರುವ ಪ್ರಕೃತಿ ಸೌಂದರ್ಯದ ಅನುಭವ ಹಿಂದೆಂದೂ ಆಗಿರಲಿಲ್ಲ. ಇದನ್ನು ಎಂದು ಮರೆಯಲು ಸಾಧ್ಯವಿಲ್ಲ ಎಂದು ಡಿ.ಕೆ. ಶಿವಕುಮಾರ್ ಕಾಶ್ಮೀರದಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.