ಸಿಲಿಗುರಿ: ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಕನಿಷ್ಟ 10 ರೂ. ಕಡಿತಗೊಳಿಸಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸೆಸ್ ಕಡಿಮೆ ಮಾಡುವುದರೊಂದಿಗೆ, ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಕನಿಷ್ಟ 10 ರೂ. ಕಡಿತಗೊಳಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.
ಮುಂದುವರೆದು, ಕೇಂದ್ರ ಸರಕಾರಕ್ಕೆ ದೇಶದ ಜನತೆ ಬಗ್ಗೆ ಕಾಳಜಿ ಇಲ್ಲ. ಪ್ರಧಾನಿ ಮೋದಿ ಅವರಿಗೆ ದೇಶದ ಜನರ ಹಿತಕ್ಕಿಂತ ಪಕ್ಷದ ಉದ್ಧಾರವೇ ಹೆಚ್ಚಾಗಿದೆ. ಪೆಟ್ರೋಲ್ ದರ ಏರಿಕೆಯಾಗುತ್ತಿರುವ ಬೆನ್ನಲ್ಲೇ ಅಗತ್ಯ ವಸ್ತುಗಳ ಬೆಲೆಯೂ ಗಗನಕ್ಕೇರುತ್ತಿದೆ ಎಂದು ವಾಗ್ದಾಳಿ ನಡೆಸಿದರಲ್ಲದೆ ಜನರ ಈಗ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು 2.50 ರೂ. ಕಡಿತ ಗೊಳಿಸಿದೆ. ಆದರೆ ಈ ಕೆಲಸವನ್ನು ಪಶ್ಚಿಮ ಬಂಗಾಳ ಸರ್ಕಾರ ರಾಜ್ಯದಲ್ಲಿ ಒಂದು ತಿಂಗಳ ಹಿಂದೆಯೇ ಮಾಡಿದೆ ಎಂದು ಟೀಕಿಸಿದರು.
ಇಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ರೂ. 2.50 ಕಡಿಮೆ ಮಾಡಿರುವುದಾಗಿ ಘೋಷಣೆ ಮಾಡಿದ್ದರು. ಅಲ್ಲದೆ, ರಾಜ್ಯ ಸರ್ಕಾರಗಳೂ ಇಂಧನ ಸುಂಕವನ್ನು ಕಡಿಮೆ ಮಾಡುವಂತೆ ಮನವಿ ಮಾಡಿದ್ದರು. ಈ ಬೆನ್ನಲೇ ಮಮತಾ ಬ್ಯಾನರ್ಜಿ ಪೆಟ್ರೋಲಿಯಂ ಉತ್ಪನ್ನಗಳ ದರ ಮತ್ತಷ್ಟು ಕಡಿಮೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.