ನವದೆಹಲಿ: ಫೋನಿ ಚಂಡಮಾರುತದಿಂದ ಆಗಿರುವ ಹಾನಿ ಬಗ್ಗೆ ನಿರ್ಣಯಿಸಲು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಪರಿಶೀಲನಾ ಸಭೆ ನಡೆಸಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿರಾಕರಿಸಿದ್ದಾರೆ.
ಒಡಿಶಾದಲ್ಲಿ 'ಫೋನಿ' ಚಂಡಮಾರುತದಿಂದ ಉಂಟಾದ ಹಾನಿಯನ್ನು ನಿರ್ಣಯಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ವೈಮಾನಿಕ ಸಮೀಕ್ಷೆ ನಡೆದಿದರು. ಬಳಿಕ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮತ್ತು ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಇದಕ್ಕೂ ಮುನ್ನ, ಪಶ್ಚಿಮ ಬಂಗಾಳದಲ್ಲಿಯೂ ಪರಿಶೀಲನಾ ಸಭೆ ನಡೆಸಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಭಾನುವಾರ ಎರಡು ಬಾರಿ ಕರೆ ಮಾಡಿದರೂ ಸ್ವೀಕರಿಸದೆ, ಪ್ರಧಾನಿ ಕರೆಯನ್ನು ಕಡೆಗಣಿಸಿದ್ದಾರೆ ಎನ್ನಲಾಗಿದೆ. ಕಡೆಗೆ ಮೋದಿ ಅವರು ಪಶ್ಚಿಮ ಬಂಗಾಳ ರಾಜ್ಯಪಾಲ ಕೇಸರಿ ನಾಥ್ ತ್ರಿಪಾಠಿ ಅವರಿಗೆ ಕರೆ ಮಾಡಿ ಚಂಡಮಾರುತದಿಂದಾದ ಹಾನಿ ಕುರಿತು ಮಾಹಿತಿ ಪಡೆದಿದ್ದಾರೆ ಎಂದು ಉನ್ನತಾಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನಮಂತ್ರಿ ಕಾರ್ಯಾಲಯದ ಮಾಹಿತಿಯ ಪ್ರಕಾರ, ಕೇಂದ್ರ ಸರ್ಕಾರದ ಪರವಾಗಿ ಪ್ರಧಾನಿ ಮೋದಿ ಅವರು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಹಾಗೂ ರಾಜ್ಯದ ಉನ್ನ ಅಧಿಕಾರಿಗಳೊಂದಿಗೆ ಸಭೆ ನಡೆಸಬೇಕಿತ್ತು. ಇದಕ್ಕಾಗಿ ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಪತ್ರ ಬರೆದಿತ್ತಾದರೂ, ಅಧಿಕಾರಿಗಳೆಲ್ಲ ಚುನಾವಣಾ ಕರ್ತವ್ಯದಲ್ಲಿ ತೊಡಗಿರುವುದರಿಂದ ಸಭೆ ನಡೆಸಲು ಪಶ್ಚಿಮ ಬಂಗಾಳ ಸರ್ಕಾರ ನಿರಾಕರಿಸಿದೆ ಎನ್ನಲಾಗಿದೆ.