ಎಸ್‌ಪಿ ಜೊತೆ ಮೈತ್ರಿಗೆ ಮಾಯಾವತಿ ಗುಡ್ ಬೈ! ಎಲ್ಲಾ ಎಲೆಕ್ಷನ್​​ನಲ್ಲಿ ಏಕಾಂಗಿ ಸ್ಪರ್ಧೆಗೆ ಬಿಎಸ್‌ಪಿ ನಿರ್ಧಾರ

ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದೊಂದಿಗೆ ಮುಂದಿನ ಯಾವುದೇ ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ ಎಂದು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಸೋಮವಾರ ಪ್ರಕಟಿಸಿದ್ದಾರೆ. 

Updated: Jun 24, 2019 , 01:59 PM IST
ಎಸ್‌ಪಿ ಜೊತೆ ಮೈತ್ರಿಗೆ ಮಾಯಾವತಿ ಗುಡ್ ಬೈ! ಎಲ್ಲಾ ಎಲೆಕ್ಷನ್​​ನಲ್ಲಿ ಏಕಾಂಗಿ ಸ್ಪರ್ಧೆಗೆ ಬಿಎಸ್‌ಪಿ ನಿರ್ಧಾರ

ನವದೆಹಲಿ: ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದೊಂದಿಗೆ ಮುಂದಿನ ಯಾವುದೇ ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ ಎಂದು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಸೋಮವಾರ ಪ್ರಕಟಿಸಿದ್ದಾರೆ. ಭಾನುವಾರ ನಡೆದ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಈ ತಿರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಬಗ್ಗೆ ಹಿಂದಿಯಲ್ಲಿ ಸರಣಿ ಟ್ವೀಟ್ ಮಾಡಿರುವ ಅವರು, "ಈ ಹಿಂದೆ ಎರಡೂ ಪಕ್ಷಗಳು ಹೊಂದಿದ್ದ ಭಿನ್ನಾಭಿಪ್ರಾಯಗಳನ್ನು ಮೀರಿ ಎಸ್‌ಪಿ ಬಿಎಸ್ಪಿ ಜೊತೆ ಮೈತ್ರಿ ಮಾಡಿಕೊಂಡು 'ಸಮ್ಮಿಶ್ರ ಧರ್ಮ'ವನ್ನು ಸಂಪೂರ್ಣವಾಗಿ ಪಾಲಿಸಿದೆ. ಅಲ್ಲದೆ 2012-17ರ ಅವಧಿಯಲ್ಲಿ ಎಸ್‌ಪಿ ಸರ್ಕಾರ ತೆಗೆದುಕೊಂಡ ದಲಿತ ವಿರೋಧಿ ನಿರ್ಧಾರಗಳನ್ನು ಮತ್ತು ಹದಗೆಟ್ಟ ಕಾನೂನು ಸುವ್ಯವಸ್ಥೆ ಸ್ಥಿತಿಯನ್ನೂ ಮೀರಿ ಸಮ್ಮಿಶ್ರ ಧರ್ಮವನ್ನು ಪಾಲಿಸಿದೆ. ಆದರೆ, ಲೋಕಸಭಾ ಚುನಾವಣೆ ಬಳಿಕ ಸಮಾಜವಾದಿ ಪಕ್ಷದ ವರ್ತನೆಯಿಂದ ಬಿಎಸ್ಪಿಗೆ ಬೇಸರವಾಗಿದ್ದು, ನಮಗೆ ಹೀಗೆ ಮಾಡಿದರೆ ಬಿಜೆಪಿಯನ್ನು ಸೋಲಿಸಲು ಸಾಧ್ಯವೇ ಎಂದು ಯೋಚಿಸುವಂತೆ ಮಾಡಿದೆ. ಪಕ್ಷದ ಹಿತದೃಷ್ಟಿಯಿಂದ ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಏಕಾಂಗಿ ಹೋರಾಟ ನಡೆಸುತ್ತೇವೆ" ಎಂದು ಬರೆದಿದ್ದಾರೆ.

ಭಾನುವಾರ ಪಕ್ಷದ ಭವಿಷ್ಯದ ಕ್ರಮಗಳ ಬಗ್ಗೆ ಚರ್ಚಿಸಲು ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯ ನಾಯಕರೊಂದಿಗೆ ಸುದೀರ್ಘ ಸಭೆ ನಡೆಸಿರುವುದಾಗಿ ಹೇಳಿರುವ ಮಾಯಾವತಿ ಅವರು, ಅಖಿಲೇಶ್ ಯಾದವ್ ಅವರ ಪಕ್ಷವು ಉತ್ತರಪ್ರದೇಶದಲ್ಲಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ದಲಿತರ ವಿರುದ್ಧ ದೌರ್ಜನ್ಯ ಎಸಗಿರುವ ಆರೋಪಗಳು ಕೇಳಿಬಂದಿದ್ದವು. ಇದೂ ಸಹ ಲೋಕಸಭಾ ಚುನಾವಣೆ 2019ರಲ್ಲಿ ಎಸ್ಪಿ-ಬಿಎಸ್ಪಿ-ರಾಷ್ಟ್ರೀಯ ಲೋಕ ದಳದ ಮೈತ್ರಿಕೂಟದ ಭವಿಷ್ಯಕ್ಕೆ ತೊಡಕಾಯಿತು ಮಾಯಾವತಿ ಹೇಳಿದ್ದಾರೆ. 

ಅಷ್ಟೇ ಅಲ್ಲದೆ, ಲೋಕಸಭೆ ಚುನಾವಣೆಯಲ್ಲಿ ಮುಸ್ಲಿಂ ಮತ್ತು ಸಮಾಜವಾದಿ ಪಕ್ಷದ ನಾಯಕರಿಗೆ ಹೆಚ್ಚಿನ ಟಿಕೆಟ್ ನೀಡಲೂ ಸಹ ಅಖಿಲೇಶ್ ಯಾದವ್ ನಿರಾಕರಿಸಿದರು ಎಂದು ಮಾಯಾವತಿ ಆರೋಪಿಸಿದ್ದಾರೆ.