ಭೋಪಾಲ್: ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಉಜ್ಜೈನಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಮೋಹನ್ ಯಾದವ್ ಬುಧವಾರ(ಡಿ.13) ಪ್ರಮಾಣ ವಚನ ಸ್ವೀಕರಿಸಿದರು. ಮಧ್ಯಪ್ರದೇಶದ ರಾಜಧಾನಿ ಭೋಪಾಲ್ನ ಲಾಲ್ ಪರೇಡ್ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 58 ವರ್ಷದ ಮೋಹನ್ ಯಾದವ್ ಅವರಿಗೆ ರಾಜ್ಯಪಾಲ ಮಂಗುಭಾಯ್ ಪಟೇಲ್ ಅವರು ಪ್ರಮಾಣ ವಚನವನ್ನು ಬೋಧಿಸಿದರು.
ಇದೇ ವೇಳೆ ರೇವಾ ವಿಧಾನಸಭಾ ಕ್ಷೇತ್ರದ ಶಾಸಕ ರಾಜೇಂದ್ರ ಶುಕ್ಲಾ ಮತ್ತು ಮಲ್ಹಾರಗಢ ವಿಧಾನಸಭಾ ಕ್ಷೇತ್ರದ ಶಾಸಕ ಜಗದೀಶ್ ದೇವದಾ ಅವರು ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ, ಉತ್ತರಖಂಡ ಸಿಎಂ ಪುಷ್ಕರ ಸಿಂಗ್ ಧಾಮಿ, ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಇದನ್ನೂ ಓದಿ: ಭಜನ್ಲಾಲ್ ಶರ್ಮಾಗೆ ರಾಜಸ್ಥಾನದ ಸಿಎಂ ಪಟ್ಟ
ಬಿಜೆಪಿಗೆ ಭಾರೀ ಬಹುಮತ!
ಇತ್ತೀಚೆಗಷ್ಟೇ ನಡೆದ ಮಧ್ಯಪ್ರದೇಶದ 230 ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ 163 ಸ್ಥಾನಗಳನ್ನು ಗಳಿಸುವ ಬಿಜೆಪಿ ಮೂಲಕ ಭಾರೀ ಬಹುಮತದೊಂದಿಗೆ ಅಧಿಕಾರ ಉಳಿಸಿಕೊಂಡಿತು. ಕಾಂಗ್ರೆಸ್ ಕೇವಲ 66 ಸ್ಥಾನಗಳಲ್ಲಿ ಅಷ್ಟೇ ಗೆಲುವು ಸಾಧಿಸಿದೆ. ಡಿಸೆಂಬರ್ 11ರಂದು ಕೇಂದ್ರ ವೀಕ್ಷಕರಾದ ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್, ಒಬಿಸಿ ಮೋರ್ಚಾ ಮುಖ್ಯಸ್ಥ ಕೆ.ಲಕ್ಷ್ಮಣ್ ಮತ್ತು ಕಾರ್ಯದರ್ಶಿ ಆಶಾ ಲಾಕ್ರಾರ ಉಪಸ್ಥಿತಿಯಲ್ಲಿ ಭೋಪಾಲ್ನಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಮೋಹನ್ ಯಾದವ್ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಯಿತು.
ಯಾರು ಈ ಮೋಹನ್ ಯಾದವ್..?
#WATCH | Former Madhya Pradesh CM Shivraj Singh Chouhan and Union Minister Jyotiraditya Scindia arrive at the venue of the swearing-in ceremony of Madhya Pradesh CM-designate Mohan Yadav, in Bhopal. pic.twitter.com/Nqf57A5UQJ
— ANI (@ANI) December 13, 2023
ಮೋಹನ್ ಯಾದವ್ ಅವರು 2013ರಲ್ಲಿ ಮೊದಲ ಬಾರಿಗೆ ಉಜ್ಜೈನಿ ದಕ್ಷಿಣ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು. 2018 ಮತ್ತು 2023ರಲ್ಲಿಯೂ ಅವರು ವಿಧಾನಸಭೆ ಪ್ರವೇಶಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಈ ಬಾರಿ 95,699 ಮತಗಳನ್ನು ಪಡೆದ ಯಾದವ್ ಅವರು 12,941 ಮತಗಳ ಅಂತರದಿಂದ ಕಾಂಗ್ರೆಸ್ನ ಚೇತನ್ ಪ್ರೇಮನಾರಾಯಣ ಯಾದವ್ ಅವರನ್ನು ಸೋಲಿಸಿದರು.
ಇನ್ನು ಜಗದೀಶ್ ದೇವದಾ ಅವರು ಮಲ್ಹಾರ್ಗಢ ಕ್ಷೇತ್ರದಲ್ಲಿ 59,024 ಮತಗಳಿಂದ ಗೆದ್ದರು. ಅವರು ಸ್ವತಂತ್ರ ಅಭ್ಯರ್ಥಿ ಶ್ಯಾಮಲಾಲ್ ಜೋಕ್ಚಂದ್ ಅವರನ್ನು ಸೋಲಿಸಿದರು. 2023ರ ಚುನಾವಣೆಗೂ ಮೊದಲು, ದೇವದಾ ಅವರು 2008, 2013 ಮತ್ತು 2018ರಲ್ಲಿಯೂ ಮಲ್ಹಾರ್ಗಢ ಕ್ಷೇತ್ರದಿಂದ ಸತತ 3 ಚುನಾವಣೆಗಳನ್ನು ಗೆದ್ದಿದ್ದರು. ದೇವದಾ 1990, 1993 ಮತ್ತು 2003ರಲ್ಲಿ ಮಧ್ಯಪ್ರದೇಶದ ಸುವಾಸರಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.
ಇದನ್ನೂ ಓದಿ: ರಾಜಭವನಕ್ಕೆ ಫೇಕ್ ಬಾಂಬ್ ಕಾಲ್ : ಬೆಳಿಗ್ಗೆಯಿಂದ ಏನಾಯ್ತು..? ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ
ಅದರಂತೆ ರಾಜೇಂದ್ರ ಶುಕ್ಲಾ ಅವರು 1998ರಲ್ಲಿ ಮೊದಲ ಬಾರಿಗೆ ರೇವಾ ಕ್ಷೇತ್ರದಿಂದ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಪುಷ್ಪರಾಜ್ ಸಿಂಗ್ ಎದುರು ಕೇವಲ 1,394 ಮತಗಳ ಅಂತರದಿಂದ ಸೋಲು ಕಂಡಿದ್ದರು. ಬಳಿಕ 2003ರಲ್ಲಿ ಅದೇ ಪುಷ್ಪರಾಜ್ ಸಿಂಗ್ ವಿರುದ್ಧ ಚೊಚ್ಚಲ ಗೆಲುವು ಸಾಧಿಸಿದರು. ಬಳಿಕ 2008, 2013, 2018ರ ಚುನಾವಣೆಯಲ್ಲಿಯೂ ಭರ್ಜರಿ ಗೆಲುವು ಸಾಧಿಸಿದರು. 2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಾಜೇಂದ್ರ ಶುಕ್ಲಾ ಸತತ 5ನೇ ಗೆಲುವು ದಾಖಲಿಸುವ ಮೂಲಕ ರೇವಾ ಕ್ಷೇತ್ರದಿಂದ ಹೊಸ ದಾಖಲೆ ನಿರ್ಮಿಸಿದ್ದಾರೆ. ಒಟ್ಟು 77,680 ಮತಗಳನ್ನು ಪಡೆದ ಅವರು ಕಾಂಗ್ರೆಸ್ನ ರಾಜೇಂದ್ರ ಶರ್ಮಾರನ್ನು 21,339 ಮತಗಳ ಅಂತರದಿಂದ ಸೋಲಿಸಿದ್ದಾರೆ.