ಇನ್ಮುಂದೆ ರೈಲಿನಲ್ಲೂ ಸಿಗಲಿದೆ ವಿಮಾನಯಾನ ಸೇವೆಯ ಅನುಭವ: ಐಆರ್‌ಸಿಟಿಸಿ ಉದ್ಯೋಗಿಗಳಿಗೆ ತರಬೇತಿ!

ಸ್ಕಿಲ್ ಇಂಡಿಯಾ ಅಡಿಯಲ್ಲಿ ತನ್ನ ಸಿಬ್ಬಂದಿಗೆ ತರಬೇತಿ ನೀಡಲಾಗುವುದು ಎಂದು ಐಆರ್‌ಸಿಟಿಸಿ ತಿಳಿಸಿದೆ.

Last Updated : Jul 22, 2019, 03:18 PM IST
ಇನ್ಮುಂದೆ ರೈಲಿನಲ್ಲೂ ಸಿಗಲಿದೆ ವಿಮಾನಯಾನ ಸೇವೆಯ ಅನುಭವ:  ಐಆರ್‌ಸಿಟಿಸಿ ಉದ್ಯೋಗಿಗಳಿಗೆ ತರಬೇತಿ! title=

ನವದೆಹಲಿ: ಪ್ರಯಾಣಿಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲು ರೈಲ್ವೆ ಮುಂದಾಗಿದೆ. ಇದಕ್ಕಾಗಿ ರೈಲ್ವೆ ತಮ್ಮ ಉದ್ಯೋಗಿಗಳಿಗೆ ತರಬೇತಿ ನೀಡಲಿದೆ. ರೈಲ್ವೆ ಸಿಬ್ಬಂದಿಯ ಆತಿಥ್ಯ, ಅದರಲ್ಲೂ ವಿಶೇಷವಾಗಿ ಐಆರ್‌ಸಿಟಿಸಿಯ ಕ್ಯಾಟರಿಂಗ್ ಸಿಬ್ಬಂದಿ ಸರಿಯಾದ ಸೇವೆ ಒದಗಿಸುತ್ತಿಲ್ಲ ಎಂದು ಹಲವು ಬಾರಿ ರೈಲು ಪ್ರಯಾಣಿಕರು ದೂರು ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಐಆರ್‌ಸಿಟಿಸಿ ತನ್ನ ಅಡುಗೆ ಸಿಬ್ಬಂದಿಗೆ ತರಬೇತಿ ನೀಡಲು ನಿರ್ಧರಿಸಿದೆ.

ಮೊದಲನೇ ಹಂತದಲ್ಲಿ - ರಾಜಧಾನಿ ಎಕ್ಸ್‌ಪ್ರೆಸ್, ಶತಾಬ್ದಿ ಎಕ್ಸ್‌ಪ್ರೆಸ್, ಡುರೊಂಟೊ ಎಕ್ಸ್‌ಪ್ರೆಸ್‌ನ ಅಡುಗೆ ಮತ್ತು ಪ್ಯಾಂಟ್ರಿ ಸಿಬ್ಬಂದಿಗಳಿಗೆ ತರಬೇತಿ ನೀಡಲು ರೈಲ್ವೆ ಇಲಾಖೆ ಮುಂದಾಗಿದೆ. 'ಸ್ಕಿಲ್ ಇಂಡಿಯಾ' ಅಡಿಯಲ್ಲಿ 'ಶಕ್ತಗೊಂಡ' ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ. ಈ ಸಿಬ್ಬಂದಿಗೆ ವೃತ್ತಿಪರ ತರಬೇತಿ ನೀಡುವುದು ಈ ಯೋಜನೆಯ ಉದ್ದೇಶ ಎಂದು ಐಆರ್‌ಸಿಟಿಸಿ ತಿಳಿಸಿದೆ.

ಮಾಹಿತಿಯ ಪ್ರಕಾರ, ಮೊದಲ ಹಂತದಲ್ಲಿ 2000 ಅಡುಗೆ ಸಿಬ್ಬಂದಿಗೆ ತರಬೇತಿ ನೀಡಲು ಐಆರ್‌ಸಿಟಿಸಿ ನಿರ್ಧರಿಸಿದೆ. ಇದರಲ್ಲಿ ಮುಖ್ಯವಾಗಿ ಪ್ಯಾಂಟ್ರಿ ಮತ್ತು ಅಡುಗೆ ವಿಭಾಗದ ಸಿಬ್ಬಂದಿಗೆ ತರಬೇತಿ ನೀಡಲಾಗುವುದು. ಕಾರಣ ಅವರು ನೇರವಾಗಿ ಪ್ರಯಾಣಿಕರೊಂದಿಗೆ ಸಂಪರ್ಕ ಹೊಂದಿದ್ದಾರೆ. ತರಬೇತಿಯ ಸಮಯದಲ್ಲಿ ಪ್ರಯಾಣಿಕರೊಂದಿಗೆ ಹೇಗೆ ಮಾತನಾಡಬೇಕು ಮತ್ತು ಇತರ ಯಾವ ನಿಯಮಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಅವರಿಗೆ ಕಲಿಸಲಾಗುತ್ತದೆ ಎಂದು ಹೇಳಲಾಗಿದೆ.

ಈ ಸಿಬ್ಬಂದಿಗೆ ಯಾವಾಗಲೂ ಸಮವಸ್ತ್ರ ಧರಿಸಬೇಕು, ಅದರಲ್ಲಿ ಇಲಾಖೆಯ ಹೆಸರಿರಬೇಕು ಎಂದು ರೈಲ್ವೆ ಅಧಿಕಾರಿಗಳು ಹೇಳುತ್ತಾರೆ. ಕೈಯಲ್ಲಿ ಗ್ಲೌಸ್ ಇರಬೇಕು. ಆರ್ಡರ್ ತೆಗೆದುಕೊಳ್ಳುವಾಗ ಮತ್ತು ಪ್ರಯಾಣಿಕರಿಗೆ ಸೇವೆ ಒದಗಿಸುವಾಗ ಸಿಬ್ಬಂದಿಗಳು ಪ್ರಯಾನಿಕರೊಂದಿಗೆ ಹೇಗೆ ಮಾತನಾಡಬೇಕು ಎಂಬ ಕೌಶಲ್ಯಗಳನ್ನು ತರಬೇತಿ ವೇಳೆ ಕಲಿಸಲಾಗುವುದು. ಇದಲ್ಲದೆ ಪ್ರಯಾಣಿಕರಿಗೆ ಕೋಪ ಬಂದರೆ ಪ್ರಕರಣವನ್ನು ಹೇಗೆ ಬಗೆಹರಿಸುವುದು ಎಂಬ ಬಗ್ಗೆಯೂ ಸಿಬ್ಬಂದಿಗೆ ತರಬೇತಿ ಸಿಗಲಿದೆ ಎಂದು ಹೇಳಲಾಗಿದೆ. ರೈಲ್ವೆ ಇಲಾಖೆಯ ಈ ನಿರ್ಧಾರದಿಂದಾಗಿ, ಪ್ರಯಾಣಿಕರಿಗೆ ರೈಲುಗಳಲ್ಲಿಯೂ ವಾಯುಯಾನ ಸೇವೆಯ ಅನುಭವ ಸಿಗುತ್ತದೆ ಎಂದು ನಿರೀಕ್ಷಿಸಲಾಗಿದೆ.

Trending News