ಈ ಗ್ರಾಮದಲ್ಲಿ ವಿವಾದಗಳ ಇತ್ಯರ್ಥಕ್ಕೆ ಆ ಶಿವನೇ ಜಡ್ಜ್, ಶಿವ ಮಂದಿರವೇ ನ್ಯಾಯಾಲಯ!

ಬಿಹಾರದ ಈ ಗ್ರಾಮದ ಗ್ರಾಮಸ್ಥರು ಪೊಲೀಸ್ ಠಾಣೆಯ ಮೆಟ್ಟಿಲೇರದೇ ತಮ್ಮ ವಿವಾದಗಳನ್ನು ಇತ್ಯರ್ಥ ಮಾಡಿಕೊಳ್ಳುತ್ತಾರೆ. ಇಲ್ಲಿನ ವಿವಾದಗಳ ಇತ್ಯರ್ಥಕ್ಕೆ ಶಿವ ದೇವನೇ ಜಡ್ಜ್, ಶಿವ ದೇವಾಲಯವೇ ನ್ಯಾಯಾಲಯ!

Last Updated : Aug 17, 2019, 03:32 PM IST
ಈ ಗ್ರಾಮದಲ್ಲಿ ವಿವಾದಗಳ ಇತ್ಯರ್ಥಕ್ಕೆ ಆ ಶಿವನೇ ಜಡ್ಜ್, ಶಿವ ಮಂದಿರವೇ ನ್ಯಾಯಾಲಯ! title=

ಕೈಮೂರ್: ಇತ್ತೀಚೆಗಂತೂ ಸಣ್ಣ, ಪುಟ್ಟ ವಿಚಾರಗಳಿಗೂ ಜನ ಪೊಲೀಸ್ ಸ್ಟೇಷನ್ ಮೆಟ್ಟಿಲೇರುವುದು ಸಾಮಾನ್ಯವಾಗಿ ಹೋಗಿದೆ. ಆದರೆ ಬಿಹಾರದ ಈ ಗ್ರಾಮದಲ್ಲಿ ಸ್ವಾತಂತ್ರ್ಯದ ಬಳಿಕ ಪೊಲೀಸ್ ಠಾಣೆ ಸ್ಥಾಪನೆಯಾದರೂ ಸಹ ಇದುವರೆಗೂ ಒಂದೇ ಒಂದು ಪ್ರಕರಣವೂ ದಾಖಲಾಗಿಲ್ಲ. ಅಚ್ಚರಿಯಾಗುತ್ತಿದೆಯಲ್ಲವೇ? ಆದರೂ ಇದು ಸತ್ಯ!

ಬಿಹಾರದ ಕೈಮೂರ್ ಜಿಲ್ಲೆಯ ಸರೇಯಾ ಎಂಬ ಗ್ರಾಮದಲ್ಲಿ ಇದುವರೆಗೂ ಒಂದೇ ಒಂದು ಪ್ರಕರಣವೂ ಸಹ ಪೊಲೀಸ್ ಠಾಣೆಯಲ್ಲಿ ದಾಖಲಾಗಿಲ್ಲ. ನ್ಯಾಯಾಲಯದಲ್ಲಿ ವಿಚಾರಣೆಯೂ ನಡೆದಿಲ್ಲ. ಹಾಗೆಂದ ಮಾತ್ರಕ್ಕೆ ಈ ಗ್ರಾಮದಲ್ಲಿ ವಿವಾದಗಳೇ ಇಲ್ಲ ಎಂದಲ್ಲ. ಆದರೆ ಇಲ್ಲಿನ ಗ್ರಾಮಸ್ಥರು ಪೊಲೀಸ್ ಠಾಣೆಯ ಮೆಟ್ಟಿಲೇರದೇ ತಮ್ಮ ವಿವಾದಗಳನ್ನು ಇತ್ಯರ್ಥ ಮಾಡಿಕೊಳ್ಳುತ್ತಾರೆ. ಇಲ್ಲಿನ ವಿವಾದಗಳ ಇತ್ಯರ್ಥಕ್ಕೆ ಶಿವ ದೇವನೇ ಜಡ್ಜ್, ಶಿವ ದೇವಾಲಯವೇ ನ್ಯಾಯಾಲಯ!

ಹೌದು, ಈ ಗ್ರಾಮದಲ್ಲಿ ಉದ್ಭವವಾಗುವ ಯಾವುದೇ ವಿವಾದಗಳಿರಲಿ, ಅದು ಶಿವನ ದೇವಾಲಯದಲ್ಲಿ ಶಿವನ ವಿಗ್ರಹದ ಮುಂದೆ ಇತ್ಯರ್ಥವಾಗುತ್ತದೆ. ಗ್ರಾಮದ ಜನತೆ ಶಿವನನ್ನೇ ನ್ಯಾಯಧಿಶರೆಂದು ಭಾವಿಸಿ, ಗ್ರಾಮದ ಹಿಯ ವ್ಯಕ್ತಿಯ ಸಮ್ಮುಖದಲ್ಲಿ ವಿವಾದಗಳನ್ನು ಬಗೆಹರಿಸಿಕೊಳ್ಳುತ್ತಾರೆ. ಈ ದೇವಾಲಯದಲ್ಲಿ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವನ್ನೂ ಗ್ರಾಮದ ಜನತೆ ಗೌರವಿಸುತ್ತಾರೆ, ಅದಕ್ಕೆ ತಲೆಬಾಗುತ್ತಾರೆ.

ಸುಮಾರು 700 ಜನಸಂಖ್ಯೆ ಇರುವ ಈ ಗ್ರಾಮವು ಮೋಹಾನಿಯಾ ಉಪವಿಭಾಗದಿಂದ ಸುಮಾರು 7 ರಿಂದ 8 ಕಿ.ಮೀ. ದೂರದಲ್ಲಿದೆ. 2014 ರಲ್ಲಿ ಅಂದಿನ ಡಿಎಂ ಅರವಿಂದ್ ಕುಮಾರ್ ಸಿಂಗ್ ಅವರು ಈ ಗ್ರಾಮವನ್ನು ಆದರ್ಶ ಗ್ರಾಮವೆಂದು ಘೋಷಿಸಿದ್ದರೂ ಸಹ ಈ ಗ್ರಾಮದ ಅಭಿವೃದ್ಧಿ ಮಾತ್ರ ಆಗಿಲ್ಲ. ಒಂದೆಡೆ ಶಸ್ತ್ರಾಸ್ತ್ರ ಖರೀದಿಸಲು ಜನರು ನಾಮುಂದು, ತಾಮುಂದು ಎನ್ನುವ ಬಿಹಾರದಲ್ಲಿ, ಇಂದಿಗೂ ಪರವಾನಗಿ ಪಡೆದ ಗನ್ ಅಥವಾ ರೈಫಲ್ ಹೊಂದಿಲ್ಲದ ಗ್ರಾಮ ಎಂದರೆ ಸರೇಯಾ!

"ಇಂದಿಗೂ ಕೂಡ ಸರೇಯಾದಂತಹ ಗ್ರಾಮಗಳಿರುವುದು ನಿಜಕ್ಕೂ ಅಪರೂಪ. ಇದೊಂದು ವಿಶೇಷವಾದ ಗ್ರಾಮವಾಗಿದ್ದು, ಇದುವರೆಗೂ ಒಂದೇ ಒಂದು ಪ್ರಕರಣ ಸಹ ಪೊಲೀಸ್ ಠಾಣೆಯಲ್ಲಿ ದಾಖಲಾಗಿಲ್ಲ. ಬಿಹಾರದ ಇತರ ಹಳ್ಳಿಗಳೂ ಸಹ ಸರೇಯಾವನ್ನು ಅನುಸರಿಸಿದರೆ, ರಾಜ್ಯದಲ್ಲಿ ಅಪರಾಧದ ಪ್ರಮಾಣ ಕಡಿಮೆಯಾಗುತ್ತದೆ" ಎಂದು ಕೈಮೂರ್ ಪೊಲೀಸ್ ಅಧೀಕ್ಷಕ ದಿಲನವಾಜ್ ಅಹಮದ್ ಹೇಳಿದ್ದಾರೆ.
 

Trending News