ನವದೆಹಲಿ: ದೇಶದ 22 ಭಾಷೆಗಳಲ್ಲಿ ಯಾವ ಭಾಷೆಯಲ್ಲಾದರೂ ರಾಜ್ಯಸಭೆ ಸದಸ್ಯರು ಮಾತನಾಡಬಹುದು ಎಂದು ರಾಜ್ಯಸಭೆ ಸಭಾದ್ಯಕ್ಷ ಎಂ.ವೆಂಕಯ್ಯನಾಯ್ಡು ಹೇಳಿದ್ದಾರೆ.
ಇಂದಿನಿಂದ ಆರಂಭವಾದ ಸಂಸತ್ ಮುಂಗಾರು ಅಧಿವೇಶನದಲ್ಲಿ ಮಾತನಾಡಿದ ಅವರು, ಈ ಮೊದಲು ರಾಜ್ಯಸಭೆಯಲ್ಲಿ ಅಸ್ಸಾಮೀ, ಬೆಂಗಾಲಿ, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒರಿಯಾ, ಪಂಜಾಬಿ, ತಮಿಳು, ತೆಲುಗು, ಉರ್ದು ಸೇರಿದಂತೆ 17 ಭಾಷೆಗಳಲ್ಲಿ ಮಾತನಾಡಲು ಅವಕಾಶವಿತ್ತು. ಇದೀಗ ಹೆಚ್ಚುವರಿಯಾಗಿ 5 ಭಾಷೆಗಳನ್ನು ಸೇರಿಸಲಾಗಿದ್ದು, ಡೊಂಗ್ರಿ, ಕಾಶ್ಮಿರಿ, ಕೊಂಕಣಿ, ಸಂತಾಲಿ, ಮತ್ತು ಸಿಂಧಿಯಲ್ಲೂ ವಿಚಾರ ಮಂಡಿಸಬಹುದು ಎಂದು ವೆಂಕಯ್ಯನಾಯ್ಡು ಹೇಳಿದ್ದಾರೆ.
ರಾಜ್ಯಸಭೆಯ ಎಲ್ಲಾ ಸದಸ್ಯರೂ ಪ್ರಶ್ನೆಗಳನ್ನು ಕೇಳಬೇಕು, ವಿಚಾರ ಮಂಡಿಸಬೇಕು ಎಂಬ ಉದ್ದೇಶದಿಂದ ದೇಶದ 22 ಭಾಷೆಗಳಲ್ಲಿ ಮಾತನಾಡಲು ಅವಕಾಶ ನೀಡಲಾಗಿದೆ. ಆದರೆ, ಸದಸ್ಯರು ತಾವು ಮಾತನಾಡುವ ಭಾಷೆಯ ಬಗ್ಗೆ ಮೊದಲೇ ಸಚಿವಾಲಯಕ್ಕೆ ತಿಳಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.