ನವದೆಹಲಿ: ರಿಸರ್ವ್ ಬ್ಯಾಂಕ್ (RBI) ಆರ್ಥಿಕತೆಗೆ ಉತ್ತೇಜನ ನೀಡಲು ಪ್ರಮುಖ ಕ್ರಮಗಳನ್ನು ಕೈಗೊಂಡಿದೆ. ಹೊಸ ಕ್ಷೇತ್ರಗಳಿಗೆ ಅವಕಾಶ ನೀಡುವ ಉದ್ದೇಶದಿಂದ ಬ್ಯಾಂಕಿಂಗ್ ನಿಯಂತ್ರಕವು ಆದ್ಯತೆಯ ವಲಯ(ಪ್ರಯಾರಿಟಿ ಸೆಕ್ಟರ್) ಸಾಲಕ್ಕೆ ಸಂಬಂಧಿಸಿದ ಪರಿಷ್ಕೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಅಂದರೆ ಪ್ರಾಥಮಿಕ ವಲಯಗಳಿಗೆ ಸಾಲ. ಈ ಮಾರ್ಗಸೂಚಿಗಳಲ್ಲಿ, ಹೊಸ ವಲಯಗಳು ಮತ್ತು ರೈತರಿಗೆ ಸುಲಭ ಸಾಲ ನೀಡಲು ಒತ್ತು ನೀಡಲಾಗಿದೆ. ಆರ್ಥಿಕ ವಾತಾವರಣವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಬಹುದಾದ ಈ ಕ್ಷೇತ್ರಗಳ ಜೊತೆಗೆ ಇತರೆ ಕೆಲವು ಕ್ಷೇತ್ರಗಳಿಗೆ ವಿಶೇಷ ಒತ್ತು ನೀಡಲಾಗಿದೆ.
ಹೊಸ ಮಾರ್ಗಸೂಚಿಗಳ ಪ್ರಕಾರ, ಬ್ಯಾಂಕ್ ನಿಂದ ಸ್ಟಾರ್ಟ್ ಅಪ್ ಗಳಿಗೆ ನೀಡಲಾಗುವ ಸುಮಾರು 50 ಕೋಟಿ ರೂ.ವರೆಗಿನ ಸಾಲಗಳು ಆದ್ಯತೆಯ ವಲಯಕ್ಕೆ ನೀಡಲಾಗುವ ಸಾಲಗಳ ವ್ಯಾಪ್ತಿಗೆ ಬರಲಿದೆ. ಗ್ರಿಡ್ ಸಂಪರ್ಕಿತ ಸೌರ ಪಂಪ್ಗಳನ್ನು ಅಳವಡಿಸಲು ರೈತರಿಗೆ ನೀಡಲಾಗುವ ಸಾಲವೂ ಕೂಡ ಇದರ ಅಡಿಯಲ್ಲಿ ಬರಲಿದೆ.
ಕಂಪ್ರೆಸ್ಸ್ಡ್ ಬಯೋ ಗ್ಯಾಸ್ ಸ್ಥಾವರವನ್ನು ಸ್ಥಾಪಿಸಲು ರೈತರು ಸಾಲವನ್ನು ತೆಗೆದುಕೊಂಡರೆ, ಅದು ಬ್ಯಾಂಕುಗಳ ಆದ್ಯತೆಯ ವರ್ಗದ ಸಾಲಗಳ ಅಡಿ ಬರಲಿದೆ. ರೈತ ಉತ್ಪಾದಕ ಸಂಸ್ಥೆ ಮತ್ತು ರೈತ ಉತ್ಪಾದಕ ಕಂಪನಿಗಳಿಗೆ 5 ಕೋಟಿ ರೂ.ವರೆಗಿನ ಸಾಲಗಳು ಆದ್ಯತೆಯ ವಲಯದ ಸಾಲಕ್ಕೆ ಒಳಪಡುತ್ತವೆ. ಬೆಳೆ ಸಾಲ, ಯಂತ್ರೋಪಕರಣಗಳಿಗೆ ಸಾಲ, ಸಿಂಪಡನೆ, ಕೊಯ್ಲು ಮತ್ತು ಗ್ರೇಡಿಂಗ್ ನಂತಹ ಚಟುವಟಿಕೆಗಳಿಗೆ ಪ್ರತಿ ಸಂಸ್ಥೆಗೆ 2 ಕೋಟಿ ರೂ.ಗಳ ಸಾಲವನ್ನು ಈ ವರ್ಗದಲ್ಲಿ ಪರಿಗಣಿಸಲಾಗುವುದು.
ನವೀಕರಿಸಬಹುದಾದ ಇಂಧನಕ್ಕೂ, ಇದುವರೆಗೆ ನೀಡಲಾಗುತ್ತಿದ್ದ 15 ಕೋಟಿ ರೂ.ಗಳ ಸಾಲವನ್ನು 30 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಆರೋಗ್ಯ ಸೇವೆಗಳಿಗೆ ಸಂಬಂಧಿಸಿದ ಮೂಲಸೌಕರ್ಯಗಳನ್ನು ಅಭಿವೃದ್ಧಿಗೆ ಯಾರಾದರೂ ಬ್ಯಾಂಕುಗಳಿಂದ ಸಾಲವನ್ನು ಪಡೆದುಕೊಂಡರೆ ಅವರಿಗೆ 5 ಕೋಟಿ ರೂ.ಗೆ ಬದಲಾಗಿ 10 ಕೋಟಿ ರೂಪಾಯಿಗಳವರೆಗೆ ನೀಡಲಾಗುವ ಸಾಲವನ್ನು ಆದ್ಯತೆಯ ಸಾಲ ವಿಭಾಗದ ಅಡಿಯಲ್ಲಿ ಪರಿಗಣಿಸಲಾಗುವುದು.
ಇದುವರೆಗೆ ಬ್ಯಾಂಕ್ ಗಳು ಯಾವ ಜಿಲ್ಲೆಗಳಲ್ಲಿ ಆದ್ಯತೆ ಶ್ರೇಣಿಯ ಸಾಲವನ್ನು ಕಡಿಮೆ ಹಂಚಿಕೆ ಮಾಡುತ್ತಿದ್ದವೋ, ಇದೀಗ ಆ ಜಿಲ್ಲೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.
ಆದ್ಯತಾ ವಲಯ ಸಾಲ (ಪಿಎಸ್ಎಲ್) ಮಾರ್ಗಸೂಚಿಗಳ ವ್ಯಾಪಕ ಪರಿಶೀಲನೆಯ ನಂತರ ಈ ಪರಿಷ್ಕರಣೆಯನ್ನು ಕೈಗೊಳ್ಳಲಾಗಿದೆ ಎಂದು ಬ್ಯಾಂಕ್ ಹೇಳಿದೆ.
ಪರಿಷ್ಕೃತ ಪಿಎಸ್ಎಲ್ ಮಾರ್ಗಸೂಚಿಗಳ ಮೂಲಕ, ಸಾಲದ ಕೊರತೆಯಿರುವ ಸ್ಥಳಗಳಲ್ಲಿ ಸಾಲ ಸೌಲಭ್ಯವನ್ನು ಒದಗಿಸುವುದು ಸುಲಭವಾಗಲಿದೆ. ಹೊಸ ಮಾರ್ಗಸೂಚಿಗಳ ಪ್ರಕಾರ, ಸಣ್ಣ, ಮಧ್ಯಮ ಮತ್ತು ದುರ್ಬಲ ವರ್ಗದವರಿಗೆ ಮಾತ್ರವಲ್ಲದೆ ಸುಲಭವಾಗಿ ಸಾಲ ಸಿಗುವುದರ ಜೊತೆಗೆ ನವೀಕರಿಸಬಹುದಾದ ಇಂಧನ ಮತ್ತು ಆರೋಗ್ಯ ಮೂಲಸೌಕರ್ಯಗಳನ್ನು ಉತ್ತೇಜಿಸಲಾಗುತ್ತದೆ.