ನವದೆಹಲಿ:ವಿಶ್ವಾದ್ಯಂತ ಭೀತಿ ಹುಟ್ಟಿಸಿರುವ ನಾವೆಲ್ ಕರೋನಾ ವೈರಸ್ ಸೋಂಕು ಇದೀಗ ಭಾರತಕ್ಕೂ ಕೂಡ ಪಸರಿಸಿದೆ. ಈ ವೈರಸ್ ನ ಸೋಂಕು ತಗುಲಿದ ಎರಡನೇ ಪ್ರಕರಣ ಇದೀಗ ಕೇರಳದಿಂದ ವರದಿಯಾಗಿದೆ. ಇತ್ತೀಚೆಗಷ್ಟೇ ಈ ವ್ಯಕ್ತಿ ಚೀನಾದಿಂದ ಭಾರತಕ್ಕೆ ಮರಳಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮೊದಲೂ ಕೂಡ ಹಲವು ಬಾರಿ ಈ ವ್ಯಕ್ತಿ ಚೀನಾ ಪ್ರವಾಸ ಕೈಗೊಂಡಿದ್ದರು. ಸದ್ಯ ರೋಗಿಯನ್ನು ಆಸ್ಪತ್ರೆಯ ಪ್ರತ್ಯೇಕ ವಾರ್ಡ್ ನಲ್ಲಿ ಇರಿಸಲಾಗಿದ್ದು, ಆತನ ಪರಿಸ್ಥಿತಿಯ ಕುರಿತು ವೈದ್ಯರು ನಿರಂತರ ನಿಗಾ ವಹಿಸಿದ್ದಾರೆ ಎನ್ನಲಾಗಿದೆ. ಈ ವೈರಸ್ ನ ಸೋಂಕು ತಗುಲಿದ ಮೊದಲ ಅಧಿಕೃತ ಪ್ರಕರಣ ಕೂಡ ಕೇರಳದಿಂದ ವರದಿಯಾಗಿದ್ದು ಇಲ್ಲಿ ಗಮನಾರ್ಹ.
ಇದಕ್ಕೂ ಮೊದಲು ಜನವರಿ 30 ರಂದು ಕೇರಳದ ತ್ರಿಶೂರ್‌ನಲ್ಲಿ ಮೊದಲ ಪ್ರಕರಣ ಬೆಳಕಿಗೆ ಬಂದಿತು. ಸಂತ್ರಸ್ತ ವಿದ್ಯಾರ್ಥಿಯು ಕಳೆದ ವಾರ ವುಹಾನ್ ವಿಶ್ವವಿದ್ಯಾಲಯದಿಂದ ಮರಳಿದ್ದಳು. ಈ ಕುರಿತು ಅಧಿಕೃತ ಮಾಹಿತಿ ನೀಡಿದ್ದ ರಾಜ್ಯ ಆರೋಗ್ಯ ಸಚಿವೆ ಕೆ. ಕೆ. ಶೈಲಜಾ, ಈ ಸೋಂಕು ತಗುಲಿದ ಪ್ರಕರಣಗಳ ಕುರಿತು ಸಮೀಕ್ಷೆ ನಡೆಸಲು ರಾಜ್ಯ ಸರ್ಕಾರ ವೈದ್ಯಕೀಯ ಮಂಡಳಿಯೊಂದನ್ನು ರಚಿಸಿದ್ದೆ ಎಂದು ಮೀಹಿತಿ ನೀಡಿದರು ಅಷ್ಟೇ ಅಲ್ಲ ಅವರು ಈ ಕುರಿತು ರಾಜ್ಯದ ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿರುವುದಾಗಿಯೂ ಕೂಡ ಹೇಳಿದ್ದರು.
ಈ ವೇಳೆ ಮಾತನಾಡಿದ್ದ ಸಚಿವೆ ಶೈಲಜಾ, "ವಿದ್ಯಾರ್ಥಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಚಿಕಿತ್ಸೆಯ ಪರಿಣಾಮ ರೋಗಿಯ ಮೇಲೆ ಕಂಡುಬರುತ್ತಿದೆ. ಈ ಕುರಿತು ನಾವು ವೈದ್ಯಕೀಯ ಮಂಡಳಿಯೊಂದನ್ನು ರಚಿಸಿದ್ದು, ಈ ಮಂಡಳಿ ನಿತ್ಯ ಸಂಜೆ ವೈದ್ಯಕೀಯ ಬುಲೆಟಿನ್ ನೀಡಲಿದೆ" ಎಂದು ಹೇಳಿದ್ದರು.
Second positive case of Novel Coronavirus has been found, in Kerala. The patient has a travel history from China. The patient has been kept in isolation in the hospital; is stable and is being closely monitored. pic.twitter.com/kThna0HiCP
— ANI (@ANI) February 2, 2020
ಈಗಾಗಲೇ 323 ನಾಗರಿಕರನ್ನು ಚೀನಾದಿಂದ ಭಾರತಕ್ಕೆ ಕರತರಲಾಗಿದೆ
ಚೀನಾದ ವುಹಾನ್‌ನಿಂದ 323 ಭಾರತೀಯರನ್ನು ಹೊತ್ತ ಮತ್ತೊಂದು ಏರ್ ಇಂಡಿಯಾ ವಿಮಾನ ಇದೀಗ ದೆಹಲಿ ತಲುಪಿದೆ. 7 ಮಾಲ್ಡೀವ್ಸ್ ನಾಗರಿಕರನ್ನು ಸಹ ಇದೆ ವಿಮಾನದಲ್ಲಿ ಕರೆತರಲಾಗಿದೆ. ಇದಕ್ಕೂ ಮೊದಲು ಶನಿವಾರ 324 ಭಾರತೀಯರನ್ನು ಚೀನಾದಿಂದ ಭಾರತಕ್ಕೆ ಕರೆತರಲಾಗಿತ್ತು.