ನವದೆಹಲಿ: ದೀಪಾವಳಿ ಸಂದರ್ಭದಲ್ಲಿ ದಿಂದ ಯಾವ ಎರಡು ಗಂಟೆಗಳು ಪಟಾಕಿ ಸಿಡಿಸಲು ಸೂಕ್ತ ಎಂಬುದನ್ನು ರಾಜ್ಯಸರ್ಕಾರಗಳೇ ನಿರ್ಧರಿಸಲು ಸುಪ್ರೀಂ ಕೋರ್ಟ್ ಅವಕಾಶ ನೀಡಿದೆ.
ದೀಪಾವಳಿ ಸೇರಿದಂತೆ ಇತರ ಹಬ್ಬಗಳಂದು ಇಡೀ ದಿನ ಪಟಾಕಿ ಸಿಡಿಸುವ ಸ್ವಾತಂತ್ರ್ಯಕ್ಕೆ ಈ ಹಿಂದೆ ಸುಪ್ರೀಂಕೋರ್ಟ್ ಕಡಿವಾಣ ಹಾಕಿತ್ತು. ಪಟಾಕಿ ಸಿಡಿತದಿಂದ ಭಾರೀ ಪರಿಸರ ಮಾಲಿನ್ಯ ಆಗುತ್ತಿರುವುದನ್ನು ಪರಿಗಣಿಸಿ, ಪಟಾಕಿ ನಿರ್ಬಂಧಿಸಿ ಕಡಿಮೆ ಮಾಲಿನ್ಯಕಾರಕ ಹಸಿರು ಪಟಾಕಿ ಮಾರಾಟಕ್ಕೆ ಅನುಮತಿ ನೀಡಿತ್ತು. ಇತರ ಹಬ್ಬಗಳಂದು ರಾತ್ರಿ 8ರಿಂದ 10 ಗಂಟೆವರೆಗೆ ಮಾತ್ರ ಪಟಾಕಿ ಸಿಡಿಸಬೇಕೆಂಬ ನಿಬಂಧನೆಯನ್ನೂ ಸುಪ್ರೀಂ ಕೋರ್ಟ್ ವಿಧಿಸಿತ್ತು. ಈ ಆದೇಶ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿದ್ದ ತಮಿಳುನಾಡು ಸರ್ಕಾರ ಪಟಾಕಿ ಸಿಡಿಸುವ ಸಮಯವನ್ನು ವಿಸ್ತರಣೆ ಮಾಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿತ್ತು.
ಈ ಹಿನ್ನೆಲೆಯಲ್ಲಿ ಅರ್ಜಿಯನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟ್ ಈ ಹಿಂದೆ ನಿಗದಿಪಡಿಸಿದ್ದ ಸಮಯಕ್ಕೆ ಬದಲಾಗಿ, ರಾಜ್ಯ ಸರ್ಕಾರಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಪಟಾಕಿ ಸಿಡಿಸಲು ಯಾವ 2 ಗಂಟೆಗಳು ಸೂಕ್ತ ಎಂಬುದನ್ನು ಗಮನಿಸಿ ನಿಗದಿ ಪಡಿಸಬಹುದು ಎಂದು ಮಂಗಳವಾರ ಹೇಳಿದೆ.
ಅಷ್ಟೇ ಅಲ್ಲದೆ, ಹಬ್ಬಗಳಲ್ಲಿ ಬೆಳಿಗ್ಗೆ ಹಾಗೂ ಸಂಜೆ ಎರಡೂ ವೇಳೆಯಲ್ಲಿ ಪಟಾಕಿ ಸಿಡಿಸುವುದು ಸಂಪ್ರದಾಯವಾಗಿದ್ದರೆ ಬೆಳಿಗ್ಗೆ ಒಂದು ಗಂಟೆ ಮತ್ತು ಸಂಜೆ ಒಂದು ಗಂಟೆ ಸಮಯ ನಿಗದಿಪಡಿಸಬಹುದು. ಜೊತೆಗೆ, ದೆಹಲಿ-ಎನ್ಸಿಆರ್ ಪ್ರದೇಶದಲ್ಲಿ ಮಾತ್ರ ಹಸಿರು ಪಟಾಕಿ ಸಿಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.