ಸಲಿಂಗಕಾಮ ಅಪರಾಧವೋ? ಇಲ್ಲವೋ? ಸೆಕ್ಷನ್ 377 ಕುರಿತು ಸುಪ್ರೀಂ ಕೋರ್ಟ್​ನಿಂದ ಇಂದು ತೀರ್ಪು ಪ್ರಕಟ

ಸುಪ್ರೀಂ ಕೋರ್ಟಿನ ಸಾಂವಿಧಾನಿಕ ಪೀಠದಿಂದ‌ ತೀರ್ಪು ಪ್ರಕಟ

Last Updated : Sep 6, 2018, 09:14 AM IST
ಸಲಿಂಗಕಾಮ ಅಪರಾಧವೋ? ಇಲ್ಲವೋ? ಸೆಕ್ಷನ್ 377 ಕುರಿತು ಸುಪ್ರೀಂ ಕೋರ್ಟ್​ನಿಂದ ಇಂದು ತೀರ್ಪು ಪ್ರಕಟ title=

ನವದೆಹಲಿ: ಸಲಿಂಗಕಾಮವನ್ನು ಅಪರಾಧೀಕರಿಸುವ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್​ 377ರ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯ ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್​ ಇಂದು ಪ್ರಕಟಿಸಲಿದೆ. 

ಸೆಕ್ಷನ್​ 377ರ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ಸಂಬಂಧ ಸುದೀರ್ಘ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿಗಳಾದ ದೀಪಕ್​ ಮಿಶ್ರಾ, ನ್ಯಾಯಮೂರ್ತಿಗಳಾದ ರೋಹಿಂಟನ್​ ನಾರಿಮನ್​, ಎ. ಎಂ. ಖಾನ್ವಿಲ್ಕರ್​, ಡಿ.ವೈ. ಚಂದ್ರಛೂಡ ಮತ್ತು ಇಂದು ಮೆಲ್ಹೋತ್ರಾ ಅವರನ್ನೊಳಗೊಂಡ ಸಾಂವಿಧಾನಿಕ ಪೀಠ ಕಳೆದ ಜುಲೈನಲ್ಲಿ ತೀರ್ಪನ್ನು ಕಾಯ್ದಿರಿಸಿತ್ತು.

ಐಪಿಸಿ ಸೆಕ್ಷನ್​ 377ರ ಬಗ್ಗೆ ಮೊದಲು ಪ್ರತಿಕ್ರಿಯೆ ನೀಡಲು ಸಮಯಾವಕಾಶ ಕೇಳಿದ್ದ ಕೇಂದ್ರ ಸರ್ಕಾರ, ಬಳಿಕ ನ್ಯಾಯಾಲಯದ ವಿವೇಚನೆಗೆ ಬಿಟ್ಟಿತ್ತು. ಆದರೆ, ಸಲಿಂಗ ವಿವಾಹ ಮತ್ತು ಕೆಲವು ಹಕ್ಕುಗಳ ವಿಚಾರದಲ್ಲಿ ಗೊಂದಲ ಉಂಟಾಗಬಹುದು ಎಂಬ ಕಳವಳವನ್ನು ಸರ್ಕಾರ ವ್ಯಕ್ತಪಡಿಸಿತ್ತು.

ಸೆಕ್ಷನ್ 377 ಅಡಿಯಲ್ಲಿ ಸಲಿಂಗಕಾಮ ಅಪರಾಧವಲ್ಲ ಎಂದು 2009ರಲ್ಲಿ ದೆಹಲಿ ಹೈಕೋರ್ಟ್ ತೀರ್ಪು ನೀಡಿತ್ತು. ಅಲ್ಲದೆ, 377 ಕಾಯಿದೆ ಸಂವಿಧಾನ ವಿಧಿ 21, 14 ಮತ್ತು 15ರ ಉಲ್ಲಂಘನೆ ಎಂದು ಹೇಳಿತ್ತು. ಆದರೆ, ಈ ತೀರ್ಪನ್ನು 2013ರಲ್ಲಿ ಸುಪ್ರೀಂಕೋರ್ಟ್ ವಜಾಗೊಳಿಸಿತ್ತು. ಈ ತೀರ್ಪನ್ನು ಮರುಪರಿಶೀಲನೆ ಮಾಡುವಂತೆ ಕೋರಿ ವಿವಿಧ ಸಂಘಟನೆಗಳು ಮತ್ತು ವ್ಯಕ್ತಿಗಳು ಅರ್ಜಿ ಸಲ್ಲಿಸಿದ್ದರು.

ಐಪಿಸಿ ಸೆಕ್ಷನ್‌ 377 ಹೇಳುವುದೇನು?
ಐಪಿಸಿ ಸೆಕ್ಷನ್ 377ರ ಪ್ರಕಾರ ನಿಸರ್ಗದ ನಿಯಮಕ್ಕೆ ವಿರುದ್ಧವಾಗಿರುವ ಕಾರಣ ಒಂದೇ ಲಿಂಗದ ವ್ಯಕ್ತಿಗಳ ನಡುವೆ ಒಪ್ಪಿತ ಲೈಂಗಿಕ ಸಂಬಂಧವನ್ನು ಅಸ್ವಾಭಾವಿಕ ಅಪರಾಧ ಎಂದು ಪರಿಗಣಿಸಲಾಗಿದೆ. ಇದರ ಅನ್ವಯ ಅಪರಾಧಿಗಳಿಗೆ ಜೀವಾವಧಿ ಜೈಲು ಶಿಕ್ಷೆ ಅಥವಾ ಹತ್ತು ವರ್ಷಗಳವರೆಗೆ ಸೆರೆವಾಸ ಹಾಗೂ ದಂಡ ವಿಧಿಸಲು ಅವಕಾಶವಿದೆ.

Trending News