ನವದೆಹಲಿ: ಹೊಸ ವರ್ಷ 2020 ಕ್ಕೆ ನಾವೆಲ್ಲಾ ಕಾಲಿಟ್ಟಿದ್ದೇವೆ. ಜನವರಿ 1ರಿಂದ ಅನೇಕ ನಿಯಮಗಳು ಬದಲಾಗುತ್ತಿವೆ. ಈ ಹೊಸ ನಿಯಮಗಳು ಸಾಮಾನ್ಯ ಜನರ ಜೀವನದ ಮೇಲೆ ನೇರ ಪರಿಣಾಮ ಬೀರುತ್ತವೆ. ಈ ಹೊಸ ನಿಯಮಗಳಿಂದಾಗಿ ಒಂದೆಡೆ ಜನಸಾಮಾನ್ಯರ ಜೇಬಿಗೆ ಕತ್ತರಿ ಬಿದ್ದರೆ, ಇನ್ನೊಂದೆಡೆ ಪರಿಹಾರ ಸಿಗಲಿದೆ.
ಜನವರಿ 1ರಿಂದ ಜಾರಿಗೆ ಬರುತ್ತಿರುವ ಬದಲಾವಣೆಗಳ ಬಗ್ಗೆ ಇಲ್ಲಿದೆ ಮಾಹಿತಿ:
* ಪ್ರಯಾಣಿಕರಿಗೆ 'ಭಾರ'ವಾದ ರೈಲ್ವೆ ದರ ಹೆಚ್ಚಳ:
ಭಾರತೀಯ ರೈಲ್ವೆ ಜನವರಿ 1, 2020 ರಿಂದ ದರ ಹೆಚ್ಚಳವನ್ನು ಘೋಷಿಸಿದೆ. ದರಗಳಲ್ಲಿನ ಈ ಹೆಚ್ಚಳವು ಸಾಧಾರಣವೆಂದು ಹೇಳಲಾಗುತ್ತಿದ್ದರೂ, ಸಾಮಾನ್ಯ ಜನರ ಜೇಬಿನ ಮೇಲೆ ಅದರ ನೇರ ಪರಿಣಾಮವು ಕಂಡುಬರುತ್ತದೆ. ರೈಲ್ವೆ ಈ ಶುಲ್ಕವನ್ನು ಗರಿಷ್ಠ 4 ಪೈಸೆಗಳಿಗೆ ಹೆಚ್ಚಿಸಿದೆ. ಪ್ರತಿ ಕಿ.ಮೀ ಪ್ರಯಾಣಕ್ಕೆ 1 ಪೈಸೆ ಏರಿಕೆಯಾಗಿದೆ. ಮೇಲ್ / ಎಕ್ಸ್‌ಪ್ರೆಸ್ ಎಸಿ ರಹಿತ ರೈಲುಗಳ ದರದಲ್ಲಿ ಎರಡು ಪೈಸೆ / ಕಿಮೀ ಹೆಚ್ಚಳ ಮತ್ತು ಎಸಿ ತರಗತಿಗಳ ದರದಲ್ಲಿ ನಾಲ್ಕು ಪೈಸೆ / ಕಿಮೀ ಹೆಚ್ಚಳವನ್ನೂ ರೈಲ್ವೆ ಘೋಷಿಸಿದೆ.
ಪ್ರೀಮಿಯಂ ರೈಲುಗಳಾದ ಶತಾಬ್ದಿ, ರಾಜಧಾನಿ ಮತ್ತು ಡುರೊಂಟೊ ರೈಲುಗಳನ್ನು ಶುಲ್ಕ ಹೆಚ್ಚಳದಲ್ಲಿ ಸೇರಿಸಲಾಗಿದೆ.1,447 ಕಿ.ಮೀ ದೂರದಲ್ಲಿರುವ ದೆಹಲಿ-ಕೋಲ್ಕತಾ ರಾಜಧಾನಿಯಲ್ಲಿ, ಪ್ರತಿ ಕಿ.ಮೀ.ಗೆ 4 ಪೈಸೆ ದರದಂತೆ 58 ರೂ. ಹೆಚ್ಚಳವಾಗಲಿದೆ.
* ಕೇವಲ 1 ಸಹಾಯವಾಣಿ ಸಂಖ್ಯೆ:
ಜನವರಿ 1, 2020 ರಿಂದ ಭಾರತೀಯ ರೈಲ್ವೆಯ ಅನೇಕ ಸಹಾಯವಾಣಿ ಸಂಖ್ಯೆಗಳ ಬದಲಿಗೆ ಕೇವಲ 139 ಸಂಖ್ಯೆಗಳನ್ನು ಮಾತ್ರ ಬಳಸಬಹುದಾಗಿದೆ. ವಾಸ್ತವವಾಗಿ, ಭಾರತೀಯ ರೈಲ್ವೆ ಈಗ 139 ಸೇವಾ ಸಂಖ್ಯೆಯನ್ನು ಸಮಗ್ರ ರೈಲ್ವೆ ಸಹಾಯವಾಣಿಯಾಗಿ ಪರಿವರ್ತಿಸಿದೆ. ಈಗ ಪ್ರಯಾಣಿಕರು ವಿಭಿನ್ನ ಸಂಖ್ಯೆಗಳನ್ನು ನೆನಪಿಡುವ ಅಗತ್ಯವಿಲ್ಲ. ರೈಲ್ವೆಗೆ ಸಂಬಂಧಿಸಿದ ಪ್ರತಿಯೊಂದು ಸಮಸ್ಯೆಯನ್ನು ನೀವು ಕೇವಲ 139 ಸಂಖ್ಯೆಯನ್ನು ಬಳಸಿ ಪರಿಹರಿಸಬಹುದು.
* ಏಕ ಬಳಕೆ ಪ್ಲಾಸ್ಟಿಕ್ ಬ್ಯಾನ್:
ಹೊಸ ವರ್ಷದ ಮೊದಲ ದಿನದಿಂದ ಕೇರಳದಲ್ಲಿ ದೊಡ್ಡ ಬದಲಾವಣೆಯಾಗಲಿದೆ. ಕೇರಳದಲ್ಲಿ ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಳಕೆಗೆ ನಿಷೇಧವಿರುತ್ತದೆ. ಪ್ಲಾಸ್ಟಿಕ್‌ನಿಂದ ಪರಿಸರಕ್ಕೆ ಆಗಿರುವ ಹಾನಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
* NEFT ವಹಿವಾಟಿನ ಮೇಲೆ ಯಾವುದೇ ಶುಲ್ಕವಿಲ್ಲ:
ಹೊಸ ವರ್ಷದಲ್ಲಿ, ಗ್ರಾಹಕರು ಬ್ಯಾಂಕುಗಳಿಂದ ಹೊಸ ಉಡುಗೊರೆಯನ್ನು ಸ್ವೀಕರಿಸಿದ್ದಾರೆ. ರಾಷ್ಟ್ರೀಯ ಎಲೆಕ್ಟ್ರಾನಿಕ್ ನಿಧಿಗಳ ವರ್ಗಾವಣೆ - ನೆಫ್ಟ್ ವಹಿವಾಟುಗಳಿಗೆ ಶುಲ್ಕ ವಿಧಿಸಲಾಗುವುದಿಲ್ಲ. ಜನವರಿ 1, 2020 ರಿಂದ ಗ್ರಾಹಕರು ಬ್ಯಾಂಕುಗಳಿಂದ ನೆಫ್ಟ್ ಮೂಲಕ ನಡೆಸುವ ವಹಿವಾಟುಗಳಿಗೆ ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ.
* MDR ಶುಲ್ಕ ವಿಧಿಸುವುದಿಲ್ಲ:
ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸಲು, ಸರ್ಕಾರವು ದೊಡ್ಡ ಘೋಷಣೆ ಮಾಡಿದೆ. ಇಂದಿನಿಂದ, ರುಪೇ ಕಾರ್ಡ್(RuPay Card) ಮತ್ತು ಯುಪಿಐನಿಂದ ವಹಿವಾಟಿನ ಮೇಲೆ ಯಾವುದೇ ವ್ಯಾಪಾರಿ ರಿಯಾಯಿತಿ ದರ (ಎಂಡಿಆರ್) ಶುಲ್ಕಗಳು ಇರುವುದಿಲ್ಲ.
* ಬಡ್ಡಿದರಗಳನ್ನು ಕಡಿಮೆ ಮಾಡಿದ ಎಸ್‌ಬಿಐ:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ರೆಪೊ ದರ ಸಂಬಂಧಿತ ಸಾಲಗಳ ಬಡ್ಡಿಯನ್ನು ಶೇಕಡಾ 0.25 ರಷ್ಟು ಕಡಿಮೆ ಮಾಡಿದೆ. ಹಳೆಯ ಗ್ರಾಹಕರು ಇಂದಿನಿಂದ ಹೊಸ ದರಗಳಿಂದ ಪ್ರಯೋಜನ ಪಡೆಯುತ್ತಾರೆ. ಇದರಿಂದಾಗಿ ಮನೆ ಮತ್ತು ವಾಹನ ಸಾಲಗಳ ಕಂತುಗಳನ್ನು ಕಡಿಮೆ ಮಾಡುತ್ತದೆ.