ನವದೆಹಲಿ: ನವಂಬರ್ 29 ಹಾಗೂ 30 ರಂದು ದೇಶದ ರೈತರು ಸರ್ಕಾರದ ಗಮನ ಸೆಳೆಯಲು ಕಿಸಾನ್ ಮುಕ್ತಿ ಮೋರ್ಚಾದ ಭಾಗವಾಗಿ ದಿಲ್ಲಿ ಚಲೋ ಘೋಷಣೆಯನ್ನು ರಾಷ್ಟ್ರದ ರಾಜಧಾನಿಯಲ್ಲಿ ಮೊಳಗಿಸಲಿದ್ದಾರೆ.
ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇದೆ.ಈ ಹಿನ್ನಲೆಯಲ್ಲಿ ಅಖಿಲ ಭಾರತ ಕಿಸಾನ್ ಸಂಘರ್ಷ ಸಹಕಾರ ಸಮಿತಿ ನೇತೃತ್ವದಲ್ಲಿ ದೇಶದ ಇನ್ನೂರಕ್ಕೂ ಅಧಿಕ ಸಂಘಟನೆಗಳು ಈ ಚಲೋದಲ್ಲಿ ಭಾಗವಹಿಸಲಿವೆ.ಈ ಹೋರಾಟದಲ್ಲಿ ಪ್ರಮುಖವಾಗಿ ರೈತರು ಸಾಲದಿಂದ ಮುಕ್ತಿ ಹಾಗೂ ಕನಿಷ್ಠ ಬೆಂಬಲ ಬೆಲೆ ನೀಡುವ ವಿಚಾರವಾಗಿ ಸೂಕ್ತ ಕಾನೂನು ಹೋರಾಟದ ಮೂಲಕ ಅದನ್ನು ಜಾರಿಗೆ ತರಬೇಕು ಎಂದು ಎಲ್ಲ ರೈತ ಸಂಘಟನೆಗಳು ಆಗ್ರಹಿಸಲಿವೆ.
"ಮುಂದಿನ ಚುನಾವಣೆಯೂ ಕೃಷಿ ಬಿಕ್ಕಟ್ಟಿನ ಆಧಾರದ ಮೇಲೆ ನಡೆಯಲಿದೆ .ಕಳೆದ ನಾಲ್ಕೂವರೆ ವರ್ಷದಲ್ಲಿ ಲಕ್ಷಕ್ಕೂ ಅಧಿಕ ರೈತರು ಆತ್ಮಹತ್ಯೆಯಾಗಿದ್ದಾರೆ,ಮತ್ತು 79 ಜಾನುವಾರು ಮಾರಾಟಗಾರರನ್ನು ಕೊಲ್ಲಲಾಗಿದೆ ಎಂದು ಅಖಿಲ ಭಾರತ ಕಿಸಾನ್ ಸಭಾ ಪ್ರಧಾನ ಕಾರ್ಯದರ್ಶಿ ಹನ್ನಾನ್ ಮೊಲ್ಲಾ ತಿಳಿಸಿದ್ದಾರೆ.
ಇನ್ನೊಂದೆಡೆಗೆ ಸ್ವರಾಜ್ ಇಂಡಿಯಾದ ಅಧ್ಯಕ್ಷರಾಗಿರುವ ಯೋಗೇಂದ್ರ ಯಾದವ್ " ಪ್ರಸಕ್ತ ಸರ್ಕಾರವು ದೇಶದ ಇತಿಹಾಸದಲ್ಲಿ ರೈತರ ವಿರೋಧಿ ಸರಕಾರವಾಗಿದೆ, ನೋಟು ನಿಷೇಧ ಕಾಯ್ದೆ ಮತ್ತು ಬರವನ್ನು ಈ ಸರ್ಕಾರ ನಿರ್ವಹಣೆ ಮಾಡಿರುವ ರೀತಿಯನ್ನು ನೋಡಿದರೆ ಮೋದಿ ಸರ್ಕಾರ ತನ್ನ ದುರುದ್ದೇಶವನ್ನು ತೋರಿಸುತ್ತಿದೆ" ಎಂದು ತಿಳಿಸಿದ್ದಾರೆ.
ಇನ್ನೊಂದೆಡೆಗೆ ಪತ್ರಕರ್ತ ಪಿ ಸಾಯಿನಾಥ್ "ಈ ಹೋರಾಟವು ಪ್ರಮುಖವಾಗಿ ಮಧ್ಯಮವರ್ಗ ಮತ್ತು ಶ್ರಮಿಕ ವರ್ಗವನ್ನು ಒಗ್ಗೂಡಿಸುವ ಕೆಲಸವನ್ನು ಮಾಡುತ್ತಿದೆ.ಈ ಹಿಂದೆ ಸಾಮಾಜಿಕ ಮತ್ತು ರಾಜಕೀಯ ಹೋರಾಟಗಳಲ್ಲಿ ಇವರ್ಯಾರು ಕೂಡ ಒಗ್ಗೂಡಿರಲಿಲ್ಲ" ಎಂದು ಅವರು ತಿಳಿಸಿದ್ದಾರೆ