Weather Update: ಇಂದು ಈ ರಾಜ್ಯಗಳಲ್ಲಿ ಭಾರೀ ಮಳೆಯಾಗಲಿದೆ, IMD ಎಚ್ಚರಿಕೆ!

ದೇಶದ ಬಹುತೇಕ ಭಾಗಗಳಲ್ಲಿ ಭಾರೀ ಮಳೆ ಮುಂದುವರಿದಿದ್ದು, ಇಂದು ಕೂಡ ಹಲವು ರಾಜ್ಯಗಳಲ್ಲಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ.

Written by - Puttaraj K Alur | Last Updated : Aug 3, 2022, 08:55 AM IST
  • ಭಾರೀ ಮಳೆಯಿಂದ ಬೆಂಗಳೂರಿನ ಹಲವು ಪ್ರದೇಶಗಳು ಜಲಾವೃತವಾಗಿದ್ದು, ಜನರು ಪರದಾಡುವಂತಾಗಿದೆ
  • ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಭಾರೀ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ
  • ಕೆಲವು ರಾಜ್ಯಗಳಲ್ಲಿ ರೆಡ್, ಆರೆಂಜ್ ಮತ್ತು ಯಲ್ಲೋ ಅಲರ್ಟ್ ಘೋಷಿಸಿರುವ ಐಎಂಡಿ
Weather Update: ಇಂದು ಈ ರಾಜ್ಯಗಳಲ್ಲಿ ಭಾರೀ ಮಳೆಯಾಗಲಿದೆ, IMD ಎಚ್ಚರಿಕೆ! title=
ಕರ್ನಾಟಕದಲ್ಲಿಯೂ ಮಳೆ ಎಚ್ಚರಿಕೆ

ನವದೆಹಲಿ: ನೈಋತ್ಯ ಮಾನ್ಸೂನ್ ತನ್ನ 2ನೇ ಹಂತದಲ್ಲಿ ದೇಶಾದ್ಯಂತ ವೇಗವನ್ನು ಪಡೆಯುತ್ತಿದ್ದು, ಹೆಚ್ಚಿನ ಭಾಗಗಳಲ್ಲಿ ಭಾರೀ ಮಳೆ ಮುಂದುವರೆದಿದೆ. ಏತನ್ಮಧ್ಯೆ ಹವಾಮಾನ ಇಲಾಖೆ ಇಂದು(ಆಗಸ್ಟ್ 3) ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆಯ ಎಚ್ಚರಿಕೆ ನೀಡಿದೆ. ಕೇರಳದಲ್ಲಿ ಭಾರೀ ಮಳೆಯಿಂದಾಗಿ ಪರಿಸ್ಥಿತಿ ಹದಗೆಟ್ಟಿದ್ದು, ಇಲ್ಲಿಯವರೆಗೆ 6 ಮಂದಿ ಸಾವನ್ನಪ್ಪಿದ್ದಾರೆ. ಬುಧವಾರ ಕೇರಳದಲ್ಲಿ ಭಾರೀ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.

ಕರ್ನಾಟಕದಲ್ಲಿಯೂ ಮಳೆ ಎಚ್ಚರಿಕೆ

ಕಳೆ ಕೆಲವು ದಿನಗಳಿಂದ ಬಿಡುವು ನೀಡಿದ್ದ ವರುಣನ ಆರ್ಭಟ ಮತ್ತೆ ಮುಂದುವರೆದಿದೆ. ಭಾರೀ ಮಳೆಯಿಂದಾಗಿ ಸಿಲಿಕಾನ್ ಸಿಟಿ ಬೆಂಗಳೂರಿನ ಹಲವಾರು ಪ್ರದೇಶಗಳು ಜಲಾವೃತವಾಗಿದ್ದು, ಜನರು ಪರದಾಡುವಂತಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಆಗಸ್ಟ್ 8ರವರೆಗೆ ದೆಹಲಿ-NCRನಲ್ಲಿ ಮಳೆ ಮುನ್ಸೂಚನೆ

ದೆಹಲಿ-NCRನಲ್ಲಿ ಆಗಸ್ಟ್ 8ರವರೆಗೆ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಹವಾಮಾನ ಇಲಾಖೆ ಪ್ರಕಾರ ಆಗಸ್ಟ್ 3 ಮತ್ತು 4ರಂದು ರಾಷ್ಟ್ರ ರಾಜಧಾನಿಯಲ್ಲಿ ಸಾಧಾರಣ ಮಳೆಯಾಗಬಹುದು. ಮತ್ತೊಂದೆಡೆ ಐಎಂಡಿ ಆಗಸ್ಟ್ 5 ಮತ್ತು 6ರಂದು ಲಘು ಮಳೆ ಮತ್ತು ಆಗಸ್ಟ್ 7 ಮತ್ತು 8ರಂದು ಭಾರೀ ಮಳೆಯ ಮುನ್ಸೂಚನೆ ನೀಡಿದೆ.

ಕೇರಳದ 10 ಜಿಲ್ಲೆಗಳಲ್ಲಿ ಮಳೆಯ ಬಗ್ಗೆ ರೆಡ್ ಅಲರ್ಟ್

ಕೇರಳದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯ ನಂತರ ಪರಿಸ್ಥಿತಿ ಹದಗೆಟ್ಟಿದ್ದು, ಇದುವರೆಗೆ 6 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹವಾಮಾನ ಇಲಾಖೆ ಕೇರಳದ 10 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದ್ದು, ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ ಮತ್ತು ಕಾಸರಗೋಡು ಹೊರತುಪಡಿಸಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದ್ದು, ಆಗಸ್ಟ್ 5ರವರೆಗೆ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ.

ಇದನ್ನೂ ಓದಿ: ಅಕ್ಕಿ, ಗೋಧಿ, ಸಕ್ಕರೆ ನಷ್ಟ ಪರಿಹಾರಕ್ಕೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ಸಹೋದರ ಧರಣಿ ಸತ್ಯಾಗ್ರಹ

IMD ಪ್ರಕಾರ ಎಷ್ಟು ಮಳೆಯಾಗುತ್ತದೆ?

ಹವಾಮಾನ ಇಲಾಖೆಯ ರೆಡ್ ಅಲರ್ಟ್ ಪ್ರಕಾರ 24 ಗಂಟೆಗಳಲ್ಲಿ 20 ಸೆಂ.ಮೀ ಗಿಂತ ಹೆಚ್ಚಿನ ಮಳೆಯನ್ನು ಸೂಚಿಸುತ್ತದೆ. ಆರೆಂಜ್ ಅಲರ್ಟ್ ಎಂದರೆ 6 ಸೆಂ.ಮೀ ನಿಂದ 20 ಸೆಂ.ಮೀ. ಮತ್ತು ಯಲ್ಲೋ ಅಲರ್ಟ್ ಪ್ರಕಾರ 6ರಿಂದ 11 ಸೆಂ.ಮೀ ನಡುವೆ ಭಾರೀ ಮಳೆ ಸೂಚಿಸುತ್ತದೆ.

ರಾಜಸ್ಥಾನದಲ್ಲಿ ಮತ್ತೆ ಭಾರೀ ಮಳೆ

ರಾಜಸ್ಥಾನದಲ್ಲಿ ಕಳೆದ 24 ಗಂಟೆಗಳಲ್ಲಿ ಟೋಂಕ್‌ನಲ್ಲಿ ಅತಿ ಹೆಚ್ಚು 9 ಸೆಂ.ಮೀ ಮಳೆ ದಾಖಲಾಗಿದೆ. ಐಎಂಡಿ ಬುಧವಾರವೂ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ಇಂದಿನಿಂದ ರಾಜಸ್ಥಾನದ ಹಲವು ಪ್ರದೇಶಗಳಲ್ಲಿ 2ನೇ ಸುತ್ತಿನ ಭಾರೀ ಮಳೆ ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇದರ ಪ್ರಕಾರ ಆಗಸ್ಟ್ 4ರಂದು ಪೂರ್ವ ರಾಜಸ್ಥಾನದ ಕೋಟಾ ವಿಭಾಗ ಮತ್ತು ಪಕ್ಕದ ಜಿಲ್ಲೆಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಉತ್ತರ ಪ್ರದೇಶದಲ್ಲಿ ಮಳೆ ಬಗ್ಗೆ ಎಚ್ಚರಿಕೆ  

ಉತ್ತರ ಪ್ರದೇಶದ 18 ಜಿಲ್ಲೆಗಳಲ್ಲಿ ಬುಧವಾರ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದು ಮುಂದಿನ 2-3 ದಿನಗಳವರೆಗೆ ಮುಂದುವರಿಯಬಹುದು. IMD ಪ್ರಕಾರ ಲಖಿಂಪುರ ಖೇರಿ, ಡಿಯೋರಿಯಾ, ವಾರಣಾಸಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜೋರು ಗಾಳಿ ಮತ್ತು ಗುಡುಗು ಸಹಿತ ಮಳೆಯಾಗಲಿದೆ. ಸೀತಾಪುರ್, ಬಹ್ರೈಚ್, ಶ್ರಾವಸ್ತಿ, ಗೊಂಡಾ, ಬಲ್ರಾಮ್‌ಪುರ್, ಸಿದ್ಧಾರ್ಥನಗರ, ಮಹಾರಾಜ್‌ಗಂಜ್, ಕುಶಿನಗರ, ಅಜಮ್‌ಗಢ, ಜಾನ್‌ಪುರ್, ವಾರಣಾಸಿ, ಭದೋಹಿ, ಜಾನ್‌ಪುರ್, ಮೈನ್‌ಪುರಿ, ಕಾಸ್‌ಗಂಜ್, ರಾಂಪುರ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.  

ಉತ್ತರಾಖಂಡದಲ್ಲಿ ಭಾರೀ ಮಳೆಯ ಎಚ್ಚರಿಕೆ

ಉತ್ತರಾಖಂಡದ ಡೆಹ್ರಾಡೂನ್, ನೈನಿತಾಲ್, ಪೌರಿ, ಹರಿದ್ವಾರ, ಚಂಪಾವತ್ ಮತ್ತು ಉಧಮ್ ಸಿಂಗ್ ನಗರದಲ್ಲಿ ಭಾರೀ ಮಳೆಯಾಗುವ ಬಗ್ಗೆ IMD ಎಚ್ಚರಿಕೆ ನೀಡಿದೆ. ಇತರ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಹವಾಮಾನ ಇಲಾಖೆಯ ಎಚ್ಚರಿಕೆಯ ಪ್ರಕಾರ, ನೈನಿತಾಲ್, ಉಧಮ್ ಸಿಂಗ್ ನಗರ ಮತ್ತು ಚಂಪಾವತ್ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಬಹುದು.

ಬಿಹಾರದ ಈ ಜಿಲ್ಲೆಗಳಲ್ಲಿ ಭಾರೀ ಮಳೆ

ರಾಜಧಾನಿ ಪಾಟ್ನಾ ಸೇರಿದಂತೆ ಬಿಹಾರದ 20 ಜಿಲ್ಲೆಗಳಲ್ಲಿ ಲಘು ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಇತರ 10 ಜಿಲ್ಲೆಗಳಲ್ಲಿ ಮಳೆಯಾಗುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಅರಾರಿಯಾ, ಕಿಶನ್‌ಗಂಜ್, ಮಾಧೆಪುರ, ಪೂರ್ಣಿಯಾ, ಕತಿಹಾರ್, ಬೇಗುಸರೈ, ಖಗಾಡಿಯಾ, ಭಾಗಲ್‌ಪುರ, ಮುಂಗೇರ್ ಮತ್ತು ಬಂಕಾ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಬಹುದು.

ಇದನ್ನೂ ಓದಿ: ಬಸ್ ಪ್ರಯಾಣಿಕರಿಗೆ ಸಿಹಿ ಸುದ್ದಿ: ಶೇ.30ರಷ್ಟು ಕಡಿಮೆಯಾಗಲಿದೆ ಟಿಕೆಟ್ ದರ!

ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಬಿಹಾರದ ನದಿಗಳು

ನೇಪಾಳದ ಜಲಾನಯನ ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ, ಉತ್ತರ ಬಿಹಾರ ಮತ್ತು ರಾಜ್ಯದ ಸೀಮಾಂಚಲ್ ಪ್ರದೇಶದಲ್ಲಿನ ಅನೇಕ ನದಿಗಳು ಅಪಾಯದ ಮಟ್ಟಕ್ಕಿಂತ ಹೆಚ್ಚಾಗಿ ಹರಿಯುತ್ತಿವೆ. ಇದರಿಂದಾಗಿ ಗಡಿ ಪ್ರದೇಶಗಳ ಅನೇಕ ಜಿಲ್ಲೆಗಳು ಪ್ರವಾಹದ ಭೀತಿಯಲ್ಲಿವೆ. ಇದಾದ ನಂತರ ಆಡಳಿತವು ಅಲರ್ಟ್ ಆಗಿದ್ದು, ಜಲಸಂಪನ್ಮೂಲ ಇಲಾಖೆ ಹೊರಡಿಸಿರುವ ಹೇಳಿಕೆ ಪ್ರಕಾರ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕೋಸಿ, ಬಾಗ್ಮತಿ ಮತ್ತು ಕಮಲಾ ಬಾಲನ್ ನದಿಗಳು ಸೋಮವಾರ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಕಳೆದ 2 ದಿನಗಳಿಂದ ನೇಪಾಳದಲ್ಲಿ ಭಾರೀ ಮಳೆಯಾಗುತ್ತಿದ್ದು, ವಿವಿಧ ಬ್ಯಾರೇಜ್‌ಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ.

ಈ ರಾಜ್ಯಗಳಲ್ಲೂ ಮಳೆಯಾಗಬಹುದು

ಹವಾಮಾನ ಇಲಾಖೆ ಪ್ರಕಾರ ಮುಂದಿನ 2-3 ದಿನಗಳ ಕಾಲ ದೇಶದ ಬಯಲು ಸೀಮೆಯಲ್ಲಿ ಮಳೆಯಾಗಬಹುದು. ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಜಾರ್ಖಂಡ್, ಪಂಜಾಬ್, ಹರಿಯಾಣ, ಪಶ್ಚಿಮ ಬಂಗಾಳ, ಸಿಕ್ಕಿಂನ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News