ಏನಿದು ತಭ್ಲಿಘಿ ಜಮಾತ್? ಸಾವಿರಾರು ಮುಸ್ಲಿಮರು ಅಲ್ಲಿ ಜಮಾಯಿಸಿದ್ದೇಕೆ? ಇಲ್ಲಿದೆ ಸಂಪೂರ್ಣ ಡಿಟೇಲ್ಸ್

ಏನಿದು ತಬ್ಲಿಘಿ ಜಮಾತ್? ಅದು ಹೇಗೆ ಕಾರ್ಯನಿರ್ವಹಿಸುತ್ತದೆ. ಕೋಟ್ಯಂತರ ಮುಸ್ಲಿಮರು ಇದರ ಜೊತೆಗೆ ಸಂಪರ್ಕ ಹೊಂದಿದ್ದಾದರು ಏಕೆ? ಇಲ್ಲಿದೆ ನಿಮ್ಮೆಲ್ಲ ಪ್ರಶ್ನೆಗಳಿಗೆ ಉತ್ತರ .

Updated: Apr 1, 2020 , 09:04 PM IST
ಏನಿದು ತಭ್ಲಿಘಿ ಜಮಾತ್? ಸಾವಿರಾರು ಮುಸ್ಲಿಮರು ಅಲ್ಲಿ ಜಮಾಯಿಸಿದ್ದೇಕೆ? ಇಲ್ಲಿದೆ ಸಂಪೂರ್ಣ ಡಿಟೇಲ್ಸ್

ನವದೆಹಲಿ: ಸೋಮವಾರ ದೆಹಲಿಯ ನಿಜಾಮುದ್ದೀನ್ ದರ್ಗಾ ಪ್ರದೇಶ ಆಕಸ್ಮಿಕವಾಗಿ ದೇಶಾದ್ಯಂತ ಸುದ್ದಿ ಚಾನೆಲ್ ಗಳಲ್ಲಿ ಹೆಡ್ಲೈನ್ ಸೃಷ್ಟಿಸಲು ಆರಂಭಿಸಿತು. ಈ ಪ್ರದೇಶದಲ್ಲಿ ಸಾವಿರಾರು ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ ಎಂಬ ಸುದ್ದಿಗಳು ಬರಲಾರಂಭಿಸಿದವು. ತಕ್ಷಣ ಕಾರ್ಯತತ್ಪರದಾದ ಪೊಲೀಸರು ಅಲ್ಲಿದ್ದ ಜನರಿಗೆ ತಪಾಸಣೆಗಾಗಿ ಕಳುಹಿಸಲಾರಂಭಿಸಿದರು. ಈ ನಡುವೆ ನಿಜಾಮುದ್ದೀನ್ ನಲ್ಲಿರುವ ತಬ್ಲಿಘಿ ಜಮಾತ್ ನ ಮರ್ಕಜ್ (ಸೆಂಟರ್)ನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ದೇಶ-ವಿದೇಶಗಳಿಂದ ಸುಮಾರು ಮೂರು ಸಾವಿರಕ್ಕೂ ಅಧಿಕ ಜನರು ಬಂದಿದ್ದಾರೆ ಎಂಬ ಸುದ್ದಿಗಳು ಪ್ರಕಟಗೊಂಡವು. ಮಲೇಶಿಯಾ, ಇಂಡೋನೇಷಿಯಾ ಸೇರಿದಂತ ಇತರೆ ದೇಶಗಳ ಜನರು ಈ ಧಾರ್ಮಿಕ ಸಭೆಯಲ್ಲಿ ಭಾಗವಹಿಸಲು ಬಂದಿದ್ದು, ಕೊರೊನಾ ವೈರಸ್ ನ ಹೆಚ್ಚಾಗುತ್ತಿರುವ ಪ್ರಕೋಪದ ಹಿನ್ನೆಲೆ ಇದೀಗ ಆತಂಕಕ್ಕೆ ಕಾರಣರಾಗಿದ್ದಾರೆ.

ಏತನ್ಮಧ್ಯೆ ತಬ್ಲಿಘಿ ಜಮಾತ್ ಗೆ ಸೇರಿದ ಪದಾದಿಕಾರಿಗಳ ವಿರುದ್ಧ ದೆಹಲಿ ಸರ್ಕಾರ FIR ದಾಖಲಿಸಲು ಆದೇಶ ಕೂಡ ನೀಡಿದೆ. ಹಾಗಾದ್ರೆ ಬನ್ನಿ ಈ ತಬ್ಲಿಘಿ ಜಮಾತ್ ಅಂದರೇನು? ನಿಜಾಮುದ್ದೀನ್ ಮರ್ಕಜ್ ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದಾದರು ಯಾವ ಉದ್ದೇಶದಿಂದ ತಿಳಿಯೋಣ ಬನ್ನಿ.

ತಬ್ಲಿಘಿ ಜಮಾತ್ ಅಂದರೇನು?
ತಬ್ಲಿಘಿ ಜಮಾತ್ ಸ್ಥಾಪನೆಯ ಕುರಿತು ಒಂದು ಇತಿಹಾಸವಿದೆ. 1926-27ರಲ್ಲಿ ಇದರ ಸ್ಥಾಪನೆಯಾಗಿದೆ. ಮೊಘಲರ ಕಾಲದಲ್ಲಿ ಹಲವರು ಇಸ್ಲಾಂ ಮತವನ್ನು ಸ್ವೀಕರಿಸಿದ್ದರು. ಮೊಘಲರ ಬಳಿಕ ಬ್ರಿಟಿಷ್ ಸಾಮ್ರಾಜ್ಯದ ಕಾರ್ಯಕಾಲ ದೇಶದಲ್ಲಿ ಆರಂಭವಾದ ಬಳಿಕ ಆರ್ಯ ಸಮಾಜ ಮತ್ತೆ ಮತಾಂತರಗೊಂಡ ಹಿಂದುಗಳ ಶುದ್ಧೀಕರಣ ನಡೆಸಿ ಹಿಂದೂ ಧರ್ಮಕ್ಕೆ ಹಿಂದಿರುಗುವ ಪ್ರಯತ್ನಗಳು ಆರಂಭಗೊಂಡವು. ಇನ್ನೊಂದೆಡೆ ಮೌಲಾನಾ ಇಲಿಯಾಸ್ ಕಾಂಧವಲಿ ಮುಸ್ಲಿಮರ ಮಧ್ಯೆ ಇಸ್ಲಾಂ ಶಿಕ್ಷಣ ನೀಡಲು ತಬ್ಲಿಘಿ ಜಮಾತ್ ಅನ್ನು ಸ್ಥಾಪಿಸಿದರು ಎನ್ನಲಾಗಿದೆ. ದೆಹಲಿಯ ನಿಜಾಮುದ್ದೀನ್ ನಲ್ಲಿರುವ ಒಂದು ಮಸೀದಿಯಲ್ಲಿ ಕೆಲ ಜನರ ಜೊತೆಗೆ ಸೇರಿ ತಬ್ಲಿಘಿ ಜಮಾತ್ ಅನ್ನು ಸ್ಥಾಪಿಸಿದರು, ಮುಸ್ಲಿಮರಿಗೆ ತಮ್ಮ ಧರ್ಮದಲ್ಲಿ ಕಟ್ಟಿಹಾಕಲು ಹಾಗೂ ತಮ್ಮ ಧರ್ಮದ ಪ್ರಚಾರ-ಪ್ರಸಾರ ಮತ್ತು ಅದರ ಮಾಹಿತಿ ನೀಡಲು ಇದು ವೇದಿಕೆಯಾಗಿ ಮಾರ್ಪಟ್ಟಿತು.

ಅಧಿಕೃತ ಸ್ಥಾಪನೆ
1940-41ನೇ ಇಸವಿಯಲ್ಲಿ ತಬ್ಲಿಘಿ ಜಮಾದ್ ಅಧಿಕೃತವಾಗಿ ಸ್ಥಾಪನೆಗೊಂಡಿತು. ದೆಹಲಿಗೆ ಹೊಂದಿಕೊಂಡಂತೆ ಇರುವ ಮೆವಾತ್ ನಲ್ಲಿ ಸಂಸ್ಥಾಪಕ ಮೌಲಾನಾ ಇಲಿಯಾಸ್ ಕೆಲ ಜನರ ಜೊತೆಗೆ ಸೇರಿ ಇದನ್ನು ಅಧಿಕೃತವಾಗಿ ಘೋಷಣೆ ಮಾಡಿದರು.

ತಬ್ಲಿಘಿ ಶಬ್ದದ ಅರ್ಥವೇನು?
'ತಬ್ಲಿಘಿ' ಶಬ್ದದ ಅರ್ಥ 'ಅಲ್ಲಾಹ್ ಹೇಳಿರುವ ಬೋಧನೆಗಳ ಪ್ರಚಾರ ಮಾಡುವವ' ಎಂಬರ್ಥ. 'ಜಮಾತ್' ಶಬ್ದದ ಅರ್ಥ 'ಸಮೂಹ' ಒಟ್ಟಾರೆ ಹೇಳುವುದಾದರೆ 'ತಬ್ಲಿಘಿ ಜಮಾತ್' ಎಂದರೆ 'ಅಲ್ಲಾಹ್ ಹೇಳಿರುವ ಬೋಧನೆಗಳನ್ನು ಪ್ರಚಾರ ಮತ್ತು ಪ್ರಸಾರ ಮಾಡುವವರ ಸಮೂಹ' ಎಂದರ್ಥ.

'ಮರ್ಕಜ್ ಅಂದರೇನು?
'ಮರ್ಕಜ್' ಇದರ ಶಾಬ್ದಿಕ ಅರ್ಥ 'ಸಭೆ ನಡೆಸುವ ಜಾಗ'. ತಬ್ಲಿಘಿ ಜಮಾತ್ ಗೆ  ಸೇರಿರುವ ಜನರು ಸಾಂಪ್ರದಾಯಿಕವಾಗಿ ಇಸ್ಲಾಂ ಧರ್ಮವನ್ನು ಅನುಸರಿಸುತ್ತಾರೆ ಹಾಗೂ ಇಸ್ಲಾಂ ಧರ್ಮದ ಪ್ರಚಾರ ಹಾಗೂ ಪ್ರಸಾರವನ್ನು ಮಾಡುತ್ತಾರೆ. ದೆಹಲಿಯ ನಿಜಾಮುದ್ದೀನ್ ನಲ್ಲಿರುವ ಮಸೀದಿ ಬಂಗಲೆಯಲ್ಲಿ ಇದರ ಮುಖ್ಯ ಕಚೇರಿ ಇದೆ.

'ತಬ್ಲಿಘಿ ಜಮಾತ್ ಸ್ಥಾಪನೆಯ ಉದ್ದೇಶವೇನು?
ತಬ್ಲಿಘಿ ಜಮಾತ್ ಮುಖ್ಯವಾಗಿ ಆರು ಉದ್ದೇಶಗಳನ್ನು ಹೊಂದಿದೆ. ಅವುಗಳಲ್ಲಿ ಕಾಲಿಮಾ(ಅಲ್ಲಾಹ್ ಒಬ್ಬನೇ ಎಂದು ಭಾವಿಸುವುದು), ಸಲಾತ್ (ನಮಾಜ್), ಇಲ್ಮ್ (ಶಿಕ್ಷಣ), ಇಕ್ರಾಮ್-ಎ-ಮುಸ್ಲಿಂ, ಇಖ್ಲಾಸ್-ಎ-ನಿಯ್ಯತ್, ದಾವತ್-ಓ-ತಬ್ಲಿಘ ಶಾಮೀಲಾಗಿವೆ. ಈ ಉದ್ದೇಶಗಳ ಪ್ರಚಾರ-ಪ್ರಸಾರವನ್ನೇ ಈ ಜನರು ಕೈಗೊಳ್ಳುತ್ತಾರೆ.

ಇದು ಹೇಗೆ ಕಾರ್ಯನಿರ್ವಹಿಸುತ್ತದೆ?
'ಇಜ್ಜೆಮಾ ತಬ್ಲಿಘಿ' ಜಮಾತ್ ನ ಒಂದು ವಿಶೇಷ ಉಪಕ್ರಮವಾಗಿದ್ದು, ಇದು ಮುಸ್ಲಿಮರಿಗೆ ತಮ್ಮ ಮೂಲ ಶಿಕ್ಷಣದ ಕಡೆಗೆ ಹಿಂದಿರುಗಲು ಆಹ್ವಾನ ನೀಡುತ್ತದೆ. 'ಇಜ್ಜೆಮಾ' ಒಟ್ಟು ಮೂರು ದಿನಗಳ ಸಮ್ಮೇಳನವಾಗಿದ್ದು, ಇದರಲ್ಲಿ ಭಾರಿ ಸಂಖ್ಯೆಯಲ್ಲಿ ಮುಸ್ಲಿಮರು ಪಾಲ್ಗೊಳ್ಳುತ್ತಾರೆ. ಸಾಮಾನ್ಯ ಮುಸ್ಲಿಮರಿಂದ ಹಿಡಿದು, ಮುಸ್ಲಿಂ ಸ್ಕಾಲರ್, ಆಲೀಮ್ ಹಾಗೂ ಇತರರು ಈ ಸಮ್ಮೇಳನದಲ್ಲಿ ಭಾಗವಹಿಸುತ್ತಾರೆ. ಜಗತ್ತನ್ನು ಬದಲಾಯಿಸುವುದಕ್ಕಿಂತ ಮೊದಲು ನಿಮ್ಮನ್ನು ನೀವು ಬದಲಾಯಿಸಿ ಎಂದು ಇಲ್ಲಿ ಹೇಳಿಕೊಡಲಾಗುತ್ತದೆ. ಮೊದಲು ನಿಮ್ಮನ್ನು ನೀವು ಉತ್ತಮಗೊಳಿಸಿ, ಜಗತ್ತು ತನ್ನಷ್ಟಕ್ಕೆ ತಾನೇ ಉತ್ತಮಗೊಳ್ಳುತ್ತದೆ ಎಂದು ಇಲ್ಲಿ ಹೇಳಲಾಗಿತ್ತದೆ. ಭಾರತದ ಅತಿ ದೊಡ್ಡ 'ಇಜ್ಜೆಮಾ' ಪ್ರತಿವರ್ಷ ಭೋಪಾಲ್ ನಲ್ಲಿ ನಡೆಯುತ್ತದೆ. ಇದರಲ್ಲಿ ಸುಮಾರು 10 ಲಕ್ಷ ಜನರು ಪಾಲ್ಗೊಳ್ಳುತ್ತಾರೆ. ವಿಶ್ವದ ಅತಿ ದೊಡ್ಡ 'ಇಜ್ಜೆಮಾ' ಬಾಂಗ್ಲಾದೇಶದ ಢಾಕಾದಲ್ಲಿ ನಡೆಯುತ್ತಿದ್ದು, ಇದರಲ್ಲಿ ಸುಮಾರು 5 ಲಕ್ಷ ಜನರು ಪಾಲ್ಗೊಳ್ಳುತ್ತಾರೆ.