ಪುಲ್ವಾಮಾ ದಾಳಿ ಬಗ್ಗೆ ಪಾಕ್ ಪ್ರಧಾನಿ ಮೌನವಾಗಿರುವುದೇಕೆ: ಅಮಿತ್ ಷಾ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕ ಸಂಖ್ಯೆಯ ಭಯೋತ್ಪಾದಕರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಅಮಿತ್ ಷಾ ಹೇಳಿದ್ದಾರೆ.

Updated: Mar 1, 2019 , 02:26 PM IST
ಪುಲ್ವಾಮಾ ದಾಳಿ ಬಗ್ಗೆ ಪಾಕ್ ಪ್ರಧಾನಿ ಮೌನವಾಗಿರುವುದೇಕೆ: ಅಮಿತ್ ಷಾ ಪ್ರಶ್ನೆ

ನವದೆಹಲಿ: ಇತ್ತೀಚೆಗೆ ಜಮ್ಮು-ಕಾಶ್ಮೀರದ ಪುಲ್ವಾಮಾ ಬಳಿ ನಡೆದ ಆತ್ಮಾಹುತಿ ದಾಳಿ ಬಗ್ಗೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮೌನ ವಹಿಸಿರುವುದೇಕೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಪ್ರಶ್ನಿಸಿದ್ದಾರೆ.

ಖಾಸಗಿ ಟಿವಿ ಚಾನೆಲ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅಮಿತ್ ಷಾ, ಪಾಕಿಸ್ತಾನದ ಭಯೋತ್ಪಾದನಾ ಸಂಘಟನೆಗಳ ಶಿಬಿರಗಳ ಮೇಲೆ ಭಾರತ ದಾಳಿ ನಡೆಸುವ ಮೂಲಕ ಭಯೋತ್ಪಾದಕರಲ್ಲಿ ಭಯ ಹುಟ್ಟಿಸಿದೆ. ಸ್ವಾತಂತ್ರ್ಯಾನಂತರ ಭಯೋತ್ಪಾದನೆ ನಿಗ್ರಹಕ್ಕೆ ಸರ್ಕಾರಗಳು ಕೈಗೊಂಡ ಕ್ರಮಗಳ ಬಗ್ಗೆ ಗಮನಹರಿಸಿದಾಗ ನಮ್ಮ ಸರ್ಕಾರದ ಟ್ಯಾಕ್ ರೆಕಾರ್ಡ್ ಬಹಳ ಚೆನ್ನಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕ ಸಂಖ್ಯೆಯ ಭಯೋತ್ಪಾದಕರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ.

ಮುಂದುವರೆದು ಮಾತನಾಡುತ್ತಾ, ಭಾರತದ ಪುಲ್ವಾಮಾ ಮೇಲೆ ಪಾಕ್ ಭಯೋತ್ಪಾದಕ ಸಂಘಟನೆ ನಡೆಸಿದ ದಾಳಿಯನ್ನು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಒಮ್ಮೆಯಾದರೂ ಖಂಡಿಸಬೇಕಿತ್ತು. ಆದರೆ, ಈ ಬಗ್ಗೆ ಏನೂ ಮಾತನಾಡದೆ ಮೌನವಾಗಿರುವುದೇಕೆ? ಇಂಥವರಿಂದ ನಾವು ಏನನ್ನು ಊಹಿಸಬಹುದು ಅಥವಾ ಅವರ ಮೇಲೆ ಭರವಸೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿರುವ ಅಮಿತ್ ಷಾ,  ಬಹುಶಃ ಪರಿಸ್ಥಿತಿ ಅವರ ನಿಯಂತ್ರಣದಲ್ಲಿ ಇರದಿದ್ದರೆ ಒಮ್ಮೆಯಾದರೂ ಘಟನೆಯನ್ನು ಖಂಡಿಸುತ್ತಿದ್ದರು ಎಂದಿದ್ದಾರೆ.