ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಉಳಿಯುವುದೋ? ಉರುಳುವುದೋ? ಇಂದು ನಿರ್ಧಾರ

ಉಪ ಮುಖ್ಯಮಂತ್ರಿ ಸಚಿನ್ ಪೈಲೆಟ್ ಬಂಡೆದ್ದು ತಮ್ಮ ಆಪ್ತ ಶಾಸಕರೊಂದಿಗೆ ದೆಹಲಿ ತಲುಪುತ್ತಿದ್ದಂತೆ ವಿಚಲಿತರಾಗಿರುವ‌ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನಿನ್ನೆ ರಾತ್ರಿಯೇ ಔಪಚಾರಿಕವಾಗಿ ಶಾಸಕರ ಸಭೆ ನಡೆಸಿದರು. 

Yashaswini V Yashaswini V | Updated: Jul 13, 2020 , 07:47 AM IST
ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಉಳಿಯುವುದೋ? ಉರುಳುವುದೋ? ಇಂದು ನಿರ್ಧಾರ

ನವದೆಹಲಿ: ಬಹುತೇಕ ರಾಜಸ್ಥಾನದ ಕಾಂಗ್ರೆಸ್ ಸರ್ಕಾರದ ಭವಿಷ್ಯ ಇಂದು‌ ನಿರ್ಧಾರವಾಗಲಿದೆ. ಇಂದು ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಎಷ್ಟು ಮಂದಿ ಶಾಸಕರು ಪಾಲ್ಗೊಳ್ಳುತ್ತಾರೆ ಎನ್ನುವುದರ ಮೇಲೆ ಸರ್ಕಾರ ಉಳಿಯುವುದೋ? ಉರುಳುವುದೋ? ಎಂಬುದು ನಿರ್ಧಾರವಾಗಲಿದೆ.

ಉಪ ಮುಖ್ಯಮಂತ್ರಿ ಸಚಿನ್ ಪೈಲೆಟ್ (Sachin Pilot) ಬಂಡೆದ್ದು ತಮ್ಮ ಆಪ್ತ ಶಾಸಕರೊಂದಿಗೆ ದೆಹಲಿ ತಲುಪುತ್ತಿದ್ದಂತೆ ವಿಚಲಿತರಾಗಿರುವ‌ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ನಿನ್ನೆ ರಾತ್ರಿಯೇ ಔಪಚಾರಿಕವಾಗಿ ಶಾಸಕರ ಸಭೆ ನಡೆಸಿದರು. ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ಜೊತೆ ದೂರವಾಣಿಯಲ್ಲಿ ಮಾತನಾಡಿದ ಬಳಿಕ ಸಚಿನ್ ಪೈಲಟ್ ಜೈಪುರಕ್ಕೆ ವಾಪಸ್ಸಾಗುತ್ತಾರೆ. ಅಶೋಕ್ ಗೆಹ್ಲೋಟ್ ಕರೆದಿರುವ ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಸಚಿನ್ ಪೈಲಟ್ ದೆಹಲಿಯಲ್ಲೇ ಬೀಡುಬಿಟ್ಟಿದ್ದರಿಂದ ರಾಜ್ಯ ರಾಜಕಾರಣ ಬಿಗಡಾಯಿಸಿದೆ.

ಈ‌ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ 10.30ಕ್ಕೆ ಮಹತ್ವದ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕರೆದಿರುವ ಸಭೆಯಲ್ಲಿ ಬಂಡಾಯ ನಾಯಕ ಸಚಿನ್ ಪೈಲಟ್ ಪಾಲ್ಗೊಳ್ಳುವುದು ಅನುಮಾನಸ್ಪದವಾಗಿದೆ‌. ಏಕೆಂದರೆ ಸಚಿನ್ ಪೈಲಟ್ ಈ ಕ್ಷಣದವರೆಗೂ ದೆಹಲಿಯಲ್ಲೇ ತಂಗಿದ್ದು ಇಂದು ಬಿಜೆಪಿ ನಾಯಕರನ್ನು ಭೇಟಿಯಾಗುವ ಸಾಧ್ಯತೆ ಇದೇ ಎಂದು ಹೇಳಲಾಗುತ್ತಿದೆ.

ಶಾಸಕಾಂಗ ಪಕ್ಷದ ಸಭೆಯಲ್ಲಿ ಸಚಿನ್ ಪೈಲಟ್ ಭಾಗಿಯಾಗದಿದ್ದರೂ ಅವರ ಬಣದಲ್ಲಿ‌ ಗುರುತಿಸಿಕೊಂಡಿರುವವರ ಪೈಕಿ ಎಷ್ಟು ಮಂದಿ ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂಬುದು ಕೂಡ ಕುತೂಹಲಕಾರಿ ವಿಷಯವೇ ಆಗಿದೆ.

ನಿನ್ನೆ ರಾತ್ರಿಯ ಶಾಸಕರ ಸಭೆಯ ಬಳಿಕ ಮಾತನಾಡಿದ್ದ ರಾಜಸ್ಥಾನ ಕಾಂಗ್ರೆಸ್ ಉಸ್ತುವಾರಿ ಪ್ರಧಾನ‌ ಕಾರ್ಯದರ್ಶಿ ಅವಿನಾಶ್ ಪಾಂಡೆ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಪರವಗಿ 109 ಶಾಸಕರು ಸಹಿ ಹಾಕಿದ್ದಾರೆ. ಇನ್ನೂ ಕೆಲವರು‌ ಫೋನ್ ಮೂಲಕ ಬೆಂಬಲ ಸೂಚಿಸಿದ್ದಾರೆ. ಕೆಲ ಬಿಜೆಪಿ ಶಾಸಕರು‌ ಕೂಡ ಕಾಂಗ್ರೆಸ್ ಸೇರಲು ಸಿದ್ದರಿದ್ದಾರೆ. ಸರ್ಕಾರಕ್ಕೆ ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದಿದ್ದರು.

ಸರ್ಕಾರ ಉಳಿಸಿಕೊಳ್ಳಲು ಎಲ್ಲಾ ರೀತಿಯ ಕಸರತ್ತು ನಡೆಸಿರುವ ಕಾಂಗ್ರೆಸ್ ಹೈಕಮಾಂಡ್ ನಿನ್ನೆಯೇ ‌ಅಜಯ್ ಮಾಖನ್ ಮತ್ತು ರಣದೀಪ್ ಸುರ್ಜೇವಾಲಾ ಅವರನ್ನು ‌ಜೈಪುರಕ್ಕೆ ಕಳುಹಿಸಿದೆ. ಇಂದು ಕಾಂಗ್ರೆಸ್ ಪಕ್ಷದ ಸಂಘಟನಾ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಕೂಡ ಜೈಪುರಕ್ಕೆ ತೆರಳಲಿದ್ದಾರೆ. ಇಂದು ನಡೆಯುವ ಶಾಸಕಾಂಗ ಪಕ್ಷದ ಸಭೆಯಲ್ಲಿ ತಪ್ಪದೇ ಭಾಗಿಯಾಗುವಂತೆ ಎಲ್ಲಾ ಶಾಸಕರಿಗೆ ವಿಪ್ ಕೂಡ ಜಾರಿ ಮಾಡಲಾಗಿದೆ.