ಬಿಜೆಪಿ ಮಾಡಿಟ್ಟ ಪಾಪ ತೊಳೆಯಲು ಕಾವೇರಿ, ಕೃಷ್ಣಾ ನದಿಗಳ ನೀರು ಸಾಲದು: ಸಿದ್ದರಾಮಯ್ಯ

Karnataka Assembly Election 2023: ಮೂರುವರೆ ವರ್ಷಗಳಲ್ಲಿ ಡಬಲ್ ಎಂಜಿನ್ ಸರ್ಕಾರದ ಸಾಧನೆ ಭ್ರಷ್ಟಾಚಾರ, ಬೆಲೆ ಏರಿಕೆ, ನಿರುದ್ಯೋಗ ಮತ್ತು ಕೋಮುದ್ವೇಷವನ್ನಷ್ಟೇ ಡಬಲ್ ಮಾಡಿದೆ. ಬಿಜೆಪಿ ಮಾಡಿಟ್ಟ ಪಾಪವನ್ನು ತೊಳೆಯಲು ಕಾವೇರಿ ಮತ್ತು ಕೃಷ್ಣಾ ನದಿಗಳ ನೀರು ಸಾಲದು ಎಂದು ಸಿದ್ದರಾಮಯ್ಯ ಕುಟುಕಿದ್ದಾರೆ.

Written by - Puttaraj K Alur | Last Updated : May 5, 2023, 09:12 PM IST
  • ರಾಜ್ಯದಲ್ಲಿರುವುದು ಡಬಲ್ ಎಂಜಿನ್ ಸರ್ಕಾರ ಅಲ್ಲ, ಟ್ರಿಪಲ್ ಎಂಜಿನ್ ಸರ್ಕಾರ
  • ಒಂದು ರಾಜ್ಯದಲ್ಲಿ, ಇನ್ನೊಂದು ದೆಹಲಿಯಲ್ಲಿ ಮತ್ತೊಂದು ನಾಗಪುರದಲ್ಲಿ
  • ಪ್ರಧಾನಿಯಿಂದ ಹಿಡಿದು ಸಚಿವರವರೆಗೆ ನಾಗಪುರದ ಗೊಂಬೆಯಾಟದವರ ಕೈಲಿರುವ ಗೊಂಬೆಗಳು
ಬಿಜೆಪಿ ಮಾಡಿಟ್ಟ ಪಾಪ ತೊಳೆಯಲು ಕಾವೇರಿ, ಕೃಷ್ಣಾ ನದಿಗಳ ನೀರು ಸಾಲದು: ಸಿದ್ದರಾಮಯ್ಯ title=
ಪ್ರಧಾನಿ ಮೊದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು: ಕಾಂಗ್ರೆಸ್ ಪಕ್ಷ ಮಾಧ್ಯಮಗಳ ಸುಳ್ಳು ಸಮೀಕ್ಷೆಗಳನ್ನು ಪ್ರಸಾರ ಮಾಡಿ ಬೆಂಬಲ ಗಳಿಸಲು ಹೊರಟಿದೆ ಎಂದು ಪ್ರಧಾನಿ ಮೋದಿಯವರು ಹೊಟ್ಟೆ ಉರ್ಕೊಳ್ಳುತ್ತಿರುವುದು ನೋಡಿದಾಗ ಕನಿಕರ ಹುಟ್ಟುತ್ತಿದೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ‘ಏನಿದರ ಅರ್ಥ ಮೋದಿಯವರೇ, ನಿಮ್ಮನ್ನು ಹಾಡಿ ಹೊಗಳುತ್ತಿರುವ ಮಾಧ್ಯಮಗಳ ವಿಶ್ವಾಸಾರ್ಹತೆಯನ್ನು ನೀವೇ ಸಂಶಯಿಸುತ್ತಿದ್ದೀರಾ?  ಮನುಷ್ಯ ಇಷ್ಟೊಂದು ಕೃತಘ್ನರಾಗಬಾರದು’ ಎಂದು ಟೀಕಿಸಿದ್ದಾರೆ.

ಪ್ರಧಾನಿ ಮೋದಿಯವರು ರಾಜ್ಯ ಬಿಜೆಪಿಯ ಪ್ರಣಾಳಿಕೆಯನ್ನು ಸಂಕಲ್ಪಪತ್ರ ಎಂದು ಬಣ್ಣಿಸಿದ್ದಾರೆ. 2018ರ ತನ್ನ ಪ್ರಣಾಳಿಕೆಯ ಶೇ.90ರಷ್ಟು ಭರವಸೆಗಳನ್ನು ಬಿಜೆಪಿ ಸರ್ಕಾರ ಈಡೇರಿಸಿಲ್ಲ. 2013ರ ಕಾಂಗ್ರೆಸ್ ಪ್ರಣಾಳಿಕೆಯ 165 ಭರವಸೆಗಳಲ್ಲಿ 158 ಭರವಸೆಗಳನ್ನು ನಮ್ಮ ಸರ್ಕಾರ ಈಡೇರಿಸಿದೆ. ನಿಮ್ಮ ಸಂಕಲ್ಪ ಪ್ರಾಮಾಣಿಕವಾದುದಾಗಿದ್ದರೆ 2013ರ ನಮ್ಮ ಪ್ರಣಾಳಿಕೆ ಮತ್ತು 2018ರ ನಿಮ್ಮ ಪ್ರಣಾಳಿಕೆಯನ್ನು ಮುಂದಿಟ್ಟು ಈಡೇರಿಸಿದ ಭರವಸೆಗಳ ಬಗ್ಗೆ ನನ್ನೊಡನೆ ಬಹಿರಂಗ ಚರ್ಚೆಗೆ ಬನ್ನಿ, ಸಿದ್ಧ ಇದ್ದೀರಾ? ನಿಮ್ಮದೇ ಸ್ಥಳ, ನಿಮ್ಮದೇ ಸಮಯ, ಉತ್ತರಕ್ಕಾಗಿ ಕಾಯುತ್ತಿರುವೆ ಪ್ರಧಾನಿ ಮೋದಿಯವರೇ?’ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: "ನಾನು ಮಾತನಾಡುವಾಗ ಅವರು ಯಾರಿಗೂ ಎದ್ದುನಿಂತು ಮಾತನಾಡುವ ತಾಕತ್ತು ಅವರಿಗಿರಲಿಲ್ಲ"

‘ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ಮೂರುವರೆ ವರ್ಷಗಳ ಅಧಿಕಾರವಧಿಯಲ್ಲಿ ಹಿಂದಿನ ಸರ್ಕಾರದ ತಪ್ಪುಗಳನ್ನು ಸರಿಪಡಿಸವುದರಲ್ಲಿಯೇ ಕಳೆದುಹೋಯಿತು ಎಂದು ಪ್ರಧಾನಿ ಮೋದಿಯವರು ನೊಂದುಕೊಂಡಿದ್ದಾರೆ. ಮೂರುವರೆ ವರ್ಷಗಳಲ್ಲಿ ಡಬಲ್ ಎಂಜಿನ್ ಸರ್ಕಾರದ ಸಾಧನೆ ಭ್ರಷ್ಟಾಚಾರ, ಬೆಲೆ ಏರಿಕೆ, ನಿರುದ್ಯೋಗ ಮತ್ತು ಕೋಮುದ್ವೇಷವನ್ನಷ್ಟೇ ಡಬಲ್ ಮಾಡಿದೆ. ಬಿಜೆಪಿ ಮಾಡಿಟ್ಟ ಪಾಪವನ್ನು ತೊಳೆಯಲು ಕಾವೇರಿ ಮತ್ತು ಕೃಷ್ಣಾ ನದಿಗಳ ನೀರು ಸಾಲದು’ ಎಂದು ಸಿದ್ದರಾಮಯ್ಯ ಕುಟುಕಿದ್ದಾರೆ.

‘ರಾಜ್ಯದಲ್ಲಿರುವುದು ಡಬಲ್ ಎಂಜಿನ್ ಸರ್ಕಾರ ಅಲ್ಲ, ಟ್ರಿಪಲ್ ಎಂಜಿನ್ ಸರ್ಕಾರ. ಒಂದು ರಾಜ್ಯದಲ್ಲಿ, ಇನ್ನೊಂದು ದೆಹಲಿಯಲ್ಲಿ ಮತ್ತೊಂದು ನಾಗಪುರದಲ್ಲಿ. ಪ್ರಧಾನಿಯಿಂದ ಹಿಡಿದು ಮುಖ್ಯಮಂತ್ರಿ ಮತ್ತು ಸಚಿವರವರೆಗೆ ಎಲ್ಲರೂ ನಾಗಪುರದ ಗೊಂಬೆಯಾಟದವರ ಕೈಯಲ್ಲಿರುವ ಗೊಂಬೆಗಳು ಅಷ್ಟೆ. ಝಂಡಾ ಮಾತ್ರ ಪಕ್ಷದ್ದು, ಅಜೆಂಡಾ RSSನದ್ದು. ಡಬಲ್ ಎಂಜಿನ ಸರ್ಕಾರ ಇದ್ದರೂ ಅರ್ಧ ಕರ್ನಾಟಕ ನೆರೆನೀರಿನಲ್ಲಿ ಮುಳುಗಿರುವಾಗ ನೆರವು ಹರಿದುಬರಲಿಲ್ಲ. ಕೇಂದ್ರಕ್ಕೆ ಕೊಟ್ಟ 1 ರೂ.ನಲ್ಲಿ ವಾಪಸ್ ರಾಜ್ಯಕ್ಕೆ ಬಂದದ್ದು ಕೇವಲ 16 ಪೈಸೆ. ಮಹಾರಾಷ್ಟ್ರ ಸರ್ಕಾರ ಬೆಳಗಾವಿ ಗಡಿಪ್ರದೇಶಕ್ಕೆ ಅತಿಕ್ರಮಣ ಮಾಡಿದರೂ ಮಧ್ಯೆ ಪ್ರವೇಶ ಮಾಡಲಿಲ್ಲ. ಇಂಥ ಡಬ್ಬಲ್ ಇಂಜಿನ್ ಸರ್ಕಾರ ಯಾರಿಗೆ ಬೇಕಿದೆ ಪ್ರಧಾನಿ ಮೋದಿಯವರೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Karnataka Election 2023: ಮತದಾನಕ್ಕೆ ಸಜ್ಜಾದ ಯುವಕರು

‘ಪ್ರಧಾನಿ ಮೋದಿಯವರು ಕನ್ನಡದ ಕೆಲವು ಶಬ್ದಗಳನ್ನು ತಪ್ಪುತಪ್ಪಾಗಿಯಾದರೂ ಆಡುತ್ತಿರುವುದು ಸ್ವಾಗತಾರ್ಹ. ಆದರೆ ಈ ನಾಟಕದ ಮಾತುಗಳಿಂದ ಕೇಂದ್ರ ಬಿಜೆಪಿ ಸರ್ಕಾರ ಕನ್ನಡಿಗರಿಗೆ ಮಾಡಿರುವ ಅನ್ಯಾಯವನ್ನು ಮುಚ್ಚಿಡಲಾಗದು. ನಿಜವಾದ ಕನ್ನಡಿಗನಾಗುವುದೆಂದರೆ ನಾಡಭಾಷೆ, ನಾಡಗೀತೆ ಮತ್ತು ನಾಡಧ್ವಜವನ್ನು ಒಪ್ಪಿಕೊಳ್ಳುವುದು. ಕರ್ನಾಟಕದ ನಾಡಧ್ವಜಕ್ಕೆ ಅಂಗೀಕಾರ ನೀಡಿ ನೀವು ನಿಜವಾದ ಕನ್ನಡಿಗರಾಗುವಿರಾ ಮೋದಿಯವರೇ? ಭಯೋತ್ಪಾದನೆ ತಡೆಯಲು ಕಾಂಗ್ರೆಸ್ ಸರ್ಕಾರ ಸೋತಿತ್ತು ಎಂದು ಹೇಳಿರುವ ಪ್ರಧಾನಿ ಮೋದಿಯವರೇ, ಭಯೋತ್ಪಾದನೆಯನ್ನು ದಿಟ್ಟತನದಿಂದ ಎದುರಿಸಿ ಹುತಾತ್ಮರಾದ ಇಬ್ಬರು ಪ್ರಧಾನಿಗಳು ಯಾವ ಪಕ್ಷದವರು ಎನ್ನುವುದನ್ನು ನಿಮ್ಮ ಆತ್ಮಸಾಕ್ಷಿಯನ್ನೊಮ್ಮೆ ಕೇಳಿ ನೋಡಿ, ಉತ್ತರ ಸಿಗಬಹುದು’ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

‘ಕಳೆದ ಕೆಲವು ದಿನಗಳಿಂದ ಇಡೀ ಮಣಿಪುರ ಹೊತ್ತಿ ಉರಿಯುತ್ತಿದೆ. ದೇಶದ ಪ್ರಧಾನಮಂತ್ರಿ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರು ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ಮಾಡುತ್ತಾ ಆರಾಮಾಗಿದ್ದಾರೆ. "ರೋಮ್ ಹೊತ್ತಿ ಉರಿಯುವಾಗ ದೊರೆ ನೀರೊ ಪಿಟೀಲು ಬಾರಿಸುತ್ತಿದ್ದನಂತೆ", ಹಾಗಾಯಿತು ನಿಮ್ಮ ಕತೆ. ಚೀನಾದ ಗಡಿ ಅತಿಕ್ರಮಣವನ್ನು ಹಿಮ್ಮೆಟ್ಟಿಸಲಾಗಲಿಲ್ಲ, ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ನಿಯಂತ್ರಿಸಿ ಶಾಂತಿ ಸ್ಥಾಪಿಸಲಾಗಲಿಲ್ಲ. ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುವ ಯಾವ ನೈತಿಕತೆ ನಿಮಗಿದೆ ನರೇಂದ್ರ ಮೋದಿಯವರೇ?’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News