ಮಾನ್ಯ ನರೇಂದ್ರ ಮೋದಿ ಅವರೇ ಈಗಲಾದರೂ ‘‘ಜನ್ ಕಿ ಬಾತ್” ಕೇಳುತ್ತಿರಾ? : ಸಿದ್ದರಾಮಯ್ಯ

ಇಂದು ಪ್ರಧಾನಿ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮ ನೂರು ಸಂಚಿಕೆಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ, ಇನ್ನಾದರೂ ಜನಸಾಮಾನ್ಯರ ಮನದ ಮಾತುಗಳಿಗೆ ಉತ್ತರಿಸುತ್ತೀರಾ? ಎಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಪ್ರಧಾನಿಗಳನ್ನು ಪ್ರಶ್ನಿಸಿದ್ದಾರೆ.

Written by - Zee Kannada News Desk | Last Updated : Apr 30, 2023, 04:21 PM IST
  • ಕೇಂದ್ರ ಸರ್ಕಾರವು ತೆರಿಗೆ ಹಂಚಿಕೆ ರೂಪದಲ್ಲಿ ರೂ.50,257 ಕೋಟಿ ಮಾತ್ರ ಕರ್ನಾಟಕ ರಾಜ್ಯಕ್ಕೆ ನೀಡುತ್ತಿರುವುದು ಯಾಕೆ?
  • ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಸಿಗಬೇಕಾಗಿರುವ ತೆರಿಗೆ ಹಂಚಿಕೆಯ ಪಾಲು ಶೇಕಡಾ 4.72ರಿಂದ ಶೇಕಡಾ 3.64ಕ್ಕೆ ಇಳಿದದ್ದು ಯಾಕೆ?
ಮಾನ್ಯ ನರೇಂದ್ರ ಮೋದಿ ಅವರೇ ಈಗಲಾದರೂ ‘‘ಜನ್ ಕಿ ಬಾತ್” ಕೇಳುತ್ತಿರಾ? : ಸಿದ್ದರಾಮಯ್ಯ title=

ಬೆಂಗಳೂರು: ಇಂದು ಪ್ರಧಾನಿ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮ ನೂರು ಸಂಚಿಕೆಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ, ಇನ್ನಾದರೂ ಜನಸಾಮಾನ್ಯರ ಮನದ ಮಾತುಗಳಿಗೆ ಉತ್ತರಿಸುತ್ತೀರಾ? ಎಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಪ್ರಧಾನಿಗಳನ್ನು ಪ್ರಶ್ನಿಸಿದ್ದಾರೆ.

ಈ ಸಂಬಂಧ ಅವರು ಬಿಡುಗಡೆಗೊಳಿಸಿರುವ ಪತ್ರಿಕಾ ಹೇಳಿಕೆ:

ಅಂತಾರಾಷ್ಟ್ರೀಯ  ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಬ್ಯಾರಲ್ ಗೆ 125 ಡಾಲರ್ ಇದ್ದಾಗ ದೇಶದಲ್ಲಿ ಪೆಟ್ರೋಲ್ ಬೆಲೆ ರೂ. 57 ಇತ್ತು, ಈಗ ಕಚ್ಚಾ ತೈಲದ ಬೆಲೆ ಬ್ಯಾರಲ್ ಗೆ 54.77 ಡಾಲರ್ ಇರುವಾಗ ಪೆಟ್ರೋಲ್ ಬೆಲೆ ರೂ. 102 ರೂಪಾಯಿ ಆಗಿರುವುದು ಯಾಕೆ? ಎಂದು ಪ್ರಶ್ನಿಸಿದರು.

'ನಾ ಖಾವುಂಗಾ, ನಾ ಖಾನೆದೂಂಗಾ' ಎಂದು ನೀವು ಹೇಳಿದರೂ, ನಿಮ್ಮ ಪಕ್ಷದ ಸಚಿವರೇ ಕಮಿಷನ್ ಹಣ ತಿಂದು ಜೈಲಿಗೆ ಹೋಗುತ್ತಿರುವುದೇಕೆ?ರಾಜ್ಯದ ಸಚಿವರು ಸರ್ಕಾರಿ ಗುತ್ತಿಗೆಗಳಲ್ಲಿ 40% ಕಮಿಷನ್ ಕೇಳುತ್ತಿದ್ದಾರೆ ಎಂದು ಆರೋಪಿಸಿ ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ನಿಮಗೆ ಪತ್ರ ಬರೆದಿದ್ದರೂ ಅದಕ್ಕೆ ಉತ್ತರಿಸುವ ಧೈರ್ಯ ತೋರಿಲ್ಲ ಯಾಕೆ? ಸರ್ಕಾರವನ್ನು ಕೇಳಿದರು.

ಇದನ್ನೂ ಓದಿ-"ರಾಜ್ಯದ ಲಿಂಗಾಯತ ನಾಯಕರನ್ನು ಬಳಸಿ ಬಿಸಾಡುವ ನಿಮ್ಮ ಕುತಂತ್ರಿ ಬುದ್ದಿಯನ್ನು ಅರ್ಥಮಾಡಿಕೊಂಡಿದ್ದಾರೆ"

ರಾಷ್ಟ್ರೀಕೃತ ಬ್ಯಾಂಕುಗಳು ಸೇರಿದಂತೆ ಒಂದು ಲಕ್ಷದ ವರೆಗಿನ ರೈತರ ಸಾಲವನ್ನು ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟದಲ್ಲಿಯೇ ಮನ್ನಾ ಮಾಡುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದರೂ ಮನ್ನಾ ಮಾಡದೆ ಇರುವುದು ಯಾಕೆ?
ರೈತರ ಸಾಲ ಮನ್ನಾ ಮಾಡಲು ನಿರಾಕರಿಸುತ್ತಿರುವ ನಿಮ್ಮ ಸರ್ಕಾರ  ಉದ್ಯಮಿಗಳ ಸಾಲ ಮನ್ನಾ ಮಾಡುತ್ತಿರುವುದೇಕೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ತೆರಿಗೆ ಮತ್ತು ಸುಂಕಗಳ ರೂಪದಲ್ಲಿ 4 ಲಕ್ಷದ 75 ಸಾವಿರ ಕೋಟಿ ರೂಪಾಯಿ ನೀಡಿದರೂ, ಕೇಂದ್ರ ಸರ್ಕಾರವು ತೆರಿಗೆ ಹಂಚಿಕೆ ರೂಪದಲ್ಲಿ  ರೂ.50,257 ಕೋಟಿ ಮಾತ್ರ ಕರ್ನಾಟಕ ರಾಜ್ಯಕ್ಕೆ ನೀಡುತ್ತಿರುವುದು ಯಾಕೆ?
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಸಿಗಬೇಕಾಗಿರುವ ತೆರಿಗೆ ಹಂಚಿಕೆಯ ಪಾಲು ಶೇಕಡಾ 4.72ರಿಂದ ಶೇಕಡಾ 3.64ಕ್ಕೆ ಇಳಿದದ್ದು ಯಾಕೆ? ಎಂದು ಪ್ರಶ್ನಿಸಿದರು. 

ಕೇಂದ್ರ ಹಣಕಾಸು ಆಯೋಗ ಕರ್ನಾಟಕಕ್ಕೆ ಪರಿಹಾರ ರೂಪದಲ್ಲಿ  ರೂ.5,495 ಕೋಟಿ ವಿಶೇಷ ಅನುದಾನ ನೀಡಬೇಕೆಂದು ಶಿಫಾರಸು ಮಾಡಿದ್ದರೂ ಕೇಂದ್ರ ಹಣಕಾಸು ಸಚಿವರು ನಿರಾಕರಿಸಿದ್ದು ಯಾಕೆ?  2013ರಲ್ಲಿ ಕೇಂದ್ರ ಅನುದಾನಿತ ಯೋಜನೆಗಳಲ್ಲಿ ಶೇಕಡಾ 25ರಷ್ಟು ಮಾತ್ರ ಇದ್ದ ರಾಜ್ಯದ ಪಾಲು 2021-22ರಲ್ಲಿ ಶೇಕಡಾ 55ಕ್ಕೆ ಹೆಚ್ಚಿದ್ದು ಯಾಕೆ? ಎಂದು ಟೀಕಾ ಪ್ರಹಾರ ನಡೆಸಿದರು.

ಮಳೆ ಹಾನಿಗಾಗಿ ರಾಜ್ಯ ಸರ್ಕಾರ ರೂ.35,000 ಕೋಟಿ ಪರಿಹಾರ ಕೇಳಿದ್ದರೂ ಡಬಲ್ ಎಂಜಿನ್ ಸರ್ಕಾರ ಕೇವಲ ರೂ.1,895 ಕೋಟಿ ನೀಡಿದ್ದು ಯಾಕೆ? ರೈತರ ಬೆಳೆಗಳ ಬೆಲೆ ಕುಸಿತ ತಡೆಯಲು ಬೆಂಬಲ ಬೆಲೆಯ ಮೂಲಕ ಮಾರುಕಟ್ಟೆ ಮಧ್ಯಪ್ರವೇಶಕ್ಕೆ ನೀಡಲಾಗುತ್ತಿದ್ದ ಅನುದಾನವನ್ನು ರೂ.1,500 ಕೋಟಿ ಗಳಿಂದ ಒಂದು ಲಕ್ಷ ರೂಪಾಯಿಗಳಿಗೆ ಇಳಿಸಿದ್ದು ಯಾಕೆ? ಎಂದು ಕಿಡಿ ಕಾರಿದರು  

ಪಿಎಸ್ಐ ನೇಮಕದಲ್ಲಿ ಅಂದಾಜು ರೂ.300 ಕೋಟಿಗೂ ಮೀರಿ ಲಂಚದ ಅವ್ಯವಹಾರ ನಡೆದು ಉದ್ಯೋಗದ ಅವಕಾಶ ಕಳೆದುಕೊಂಡಿರುವ ಸುಮಾರು 54 ಸಾವಿರ ಯುವಜನರ ಮನದ ಮಾತಿಗೆ ನೀವು ಪ್ರತಿಕ್ರಿಯಿಸದೆ ಮೌನವಾಗಿರುವುದು ಯಾಕೆ? ಎಂದು ಪ್ರಶ್ನಿಸಿದರು

ಇದನ್ನೂ ಓದಿ-ಅತಿಹೆಚ್ಚು ರೈತರ ಆತ್ಮಹತ್ಯೆ ಆಗಿದ್ದು ಸಿದ್ರಾಮಣ್ಣನ ಕಾಲದಲ್ಲಿ : ಸಿಎಂ ಬೊಮ್ಮಾಯಿ  

ಪ್ರಧಾನಿ ಅವರೇ ನೀವು ರೋಡ್ ಶೋ ನಡೆಸಿರುವ ಬೆಂಗಳೂರು ರಸ್ತೆಗಳಲ್ಲಿರುವ 25,000 ಗುಂಡಿಗಳನ್ನು ಮುಚ್ಚಲು  ರೂ.7,200 ಕೋಟಿ, ಅಂದರೆ ಒಂದು ಗುಂಡಿಗೆ ತಲಾ ರೂ.9.20 ಲಕ್ಷ ಖರ್ಚು ಮಾಡಿದರೂ ಗುಂಡಿಗಳು ಹಾಗೆಯೇ ಉಳಿದುಕೊಂಡಿರುವುದು ಯಾಕೆ?  ಗ್ರಾಮೀಣ ಭಾಗಗಳಲ್ಲಿ ಉದ್ಯೋಗ ಸಂಜೀವಿನಿಯಾಗಿರುವ ಯುಪಿಎ ಸರ್ಕಾರದ ಹೆಮ್ಮೆಯ ಕಾರ್ಯಕ್ರಮವಾಗಿರುವ ನರೇಗಾ ಯೋಜನೆಗೆ ಈ ಸಾಲಿನ ಬಜೆಟ್ ನಲ್ಲಿ ಶೇಕಡಾ 21.66ರಷ್ಟು ಅಂದರೆ ರೂ.60,000 ಕೋಟಿಯಷ್ಟು ಅನುದಾನವನ್ನು ಡಬಲ್ ಎಂಜಿನ್ ಸರ್ಕಾರ ಕಡಿತಗೊಳಿಸಿದ್ದು ಯಾಕೆ?  ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ನಮ್ಮ ಸರ್ಕಾರದ ಐದು ವರ್ಷಗಳ ಆಡಳಿತದಲ್ಲಿ ಮಾಡಿದ್ದ ಒಟ್ಟು ಸಾಲ ರೂ.1,16,512 ಕೋಟಿ, ಕಳೆದ ನಾಲ್ಕು ವರ್ಷಗಳಲ್ಲಿ ಬಿಜೆಪಿ ಸರ್ಕಾರ ಮಾಡಿರುವ ಒಟ್ಟು ಸಾಲ ರೂ.3,22,000 ಕೋಟಿ. ಡಬಲ್ ಎಂಜಿನ್ ಸರ್ಕಾರ ಕರ್ನಾಟಕ ರಾಜ್ಯವನ್ನು ಸಾಲಗಾರ ರಾಜ್ಯ ಮಾಡಿದ್ದು ಯಾಕೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News