Karnataka Assembly Election 2023: ರಾಜಕಾರಣ ಫುಟ್ಬಾಲ್ ಆಟವಲ್ಲ, ಅದೊಂದು ಚದುರಂಗದಾಟ. ಬಿಜೆಪಿಯವರು ಚದುರಂಗದ ದಾಳಗಳನ್ನು ಉರುಳಿಸುತ್ತಿದ್ದಾರೆ. ಉರುಳಿಸಲಿ ಬಿಡಿ. ಅವರಿಗೆ ಶುಭವಾಗಲಿ. ರಾಜಕಾರಣದಲ್ಲಿ ಪ್ರತಿಸ್ಪರ್ಧೆ ಇರಬೇಕು. ಇಂತಹ ಹೋರಾಟ ನನಗೆ ಹೊಸತಲ್ಲ. ನಾನು 1985ರಲ್ಲಿ ದೇವೇಗೌಡರ ವಿರುದ್ಧ ಹೋರಾಡಿದ್ದೆ. ಕುಮಾರಸ್ವಾಮಿ ಅವರ ವಿರುದ್ಧವೂ ಹೋರಾಡಿದ್ದೆ. ಈಗಲೂ ಹೋರಾಡುತ್ತೇನೆ. ನನ್ನ ಜೀವನ ಹೋರಾಟದಿಂದಲೇ ಕೂಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹೇಳಿದರು.
ಪದ್ಮನಾಭನಗರದಲ್ಲಿ ಅಶೋಕ್ ವಿರುದ್ಧ ದುರ್ಬಲ ಅಭ್ಯರ್ಥಿ ಕಣಕ್ಕಿಳಿಸಿದ್ದು, ಒಪ್ಪಂದ ಮಾಡಿಕೊಳ್ಳಲಾಗಿದೆಯಾ ಎಂಬ ಪ್ರಶ್ನೆಗೆ, 'ನಾನು ಯಾರ ಜತೆಗೂ ಒಪ್ಪಂದ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಕಳೆದ ಬಾರಿ ಚುನಾವಣೆಯಲ್ಲಿ ಜೆಡಿಎಸ್ ನಿಂದ ನಾಯ್ಡು ಸಮುದಾಯದವರನ್ನು ಹಾಕಿದ್ದರು. ನಾವು ಒಕ್ಕಲಿಗ ಸಮುದಾಯದವರನ್ನು ಕಣಕ್ಕಿಳಿಸಿದ್ದೆವು. ಆದರೆ ನಮ್ಮ ತಂತ್ರ ಫಲ ನೀಡಲಿಲ್ಲ. ನಾಯ್ಡು ಸಮುದಾಯದ ಅಭ್ಯರ್ಥಿ ಎರಡನೇ ಸ್ಥಾನ ಪಡೆದು ನಮ್ಮ ಅಭ್ಯರ್ಥಿ ಮೂರನೇ ಸ್ಥಾನ ಪಡೆದಿದ್ದರು. ಬೆಂಗಳೂರಿನಲ್ಲಿ ಅತಿ ಹೆಚ್ಚು ನಾಯ್ಡು ಸಮುದಾಯದ ಜನರು ಇರುವುದು ಪದ್ಮನಾಭನಗರದಲ್ಲಿ. ಪಕ್ಷದ ಅಭ್ಯರ್ಥಿಯಾಗಿರುವವರು ಪಕ್ಷದ ಪ್ರಮುಖ ಕಾರ್ಯಕರ್ತ. ಯಾರೂ ಇಲ್ಲದ ಸಂದರ್ಭದಲ್ಲೂ ಆತ ಕಾಂಗ್ರೆಸ್ ಪಕ್ಷದ ಪರವಾಗಿ ನಿಂತಿದ್ದಾರೆ. ಈ ಕ್ಷೇತ್ರದಲ್ಲಿ ಕನಕಪುರದಿಂದ ಬಂದು ನೆಲೆಸಿರುವ ಮತದಾರರೂ ಇದ್ದಾರೆ. ಅಲ್ಪಸಂಖ್ಯಾತರು ಇದ್ದಾರೆ. ಅಶೋಕ್ ವಿರುದ್ಧ ಅನೇಕ ಅಸಮಾಧಾನಗಳಿವೆ. ಹೀಗಾಗಿ ಪದ್ಮನಾಭನಗರದಲ್ಲಿ ಅಶೋಕ್ ಸೋಲನುಭವಿಸಿ, ನಮ್ಮ ಅಭ್ಯರ್ಥಿ ಗೆಲುವು ದಾಖಲಿಸಲಿದ್ದಾರೆ' ಎಂದು ತಿಳಿಸಿದರು.
ಇದನ್ನೂ ಓದಿ- ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ಗೆ ಸೇರುತ್ತಿದ್ದರು ಎಂಬ ವಿಷಯ ಅಪ್ರಸ್ತುತ: ಸಿಎಂ
ಪದ್ಮನಾಭನಗರದಲ್ಲಿ ಬೇರೆ ಅಭ್ಯರ್ಥಿ ಹಾಕುತ್ತೀರಾ, ಸುರೇಶ್ ಅವರನ್ನು ಕಣಕ್ಕಿಳಿಸುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿ. ಕೆ. ಶಿವಕುಮಾರ್, 'ಸುರೇಶ್ ಅವರಿಗೆ ಟಿಕೆಟ್ ನೀಡಬೇಕು ಎಂಬ ಒತ್ತಡ ಇದೆ. ಆದರೆ ಪಕ್ಷ ಈಗಾಗಲೇ ರಘುನಾಥ್ ನಾಯ್ಡು ಅವರಿಗೆ ಟಿಕೆಟ್ ನೀಡಿದ್ದು, ಅವರೇ ಸ್ಪರ್ಧಿಸುತ್ತಾರೆ' ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿ ಹಾಕುತ್ತೀರಾ? ವಿನಯ್ ಕುಲಕರ್ಣಿ ಅವರ ಹೆಸರು ಚರ್ಚೆಯಾಗಿದೆಯಲ್ಲ ಎಂಬ ಮಾಧ್ಯಮ ಮಿತ್ರರ ಪ್ರಶ್ನೆಗೂ ಪ್ರತಿಕ್ರಿಯಿಸಿದ ಡಿಕೆಶಿ, 'ವಿನಯ್ ಕುಲಕರ್ಣಿ ಪ್ರಬಲ ನಾಯಕರು. ಅವರ ಹೆಸರನ್ನು ಧಾರವಾಡ ಕ್ಷೇತ್ರಕ್ಕೆ ಘೋಷಣೆ ಮಾಡಿದ್ದೇವೆ. ಅವರ ಕಾರ್ಯಕರ್ತರ ಜತೆ ಮಾತನಾಡುತ್ತೇವೆ' ಎಂದು ತಿಳಿಸಿದರು.
ಇದನ್ನೂ ಓದಿ- ಟಿಕೆಟ್ ನಿರೀಕ್ಷೆಯಲ್ಲಿದ್ದವರಿಗೆ ಆಘಾತ ! ಮಂಡ್ಯದಲ್ಲಿ ಮೂಲ ಬಿಜೆಪಿಗರಿಂದ ಬಂಡಾಯ ಸಾಧ್ಯತೆ
ಬಿಜೆಪಿ ಹಾಗೂ ನಿಮ್ಮ ಪಟ್ಟಿ ನೋಡಿದರೆ ಅಲೆ ಯಾರ ಪರವಾಗಿದೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರವಾಗಿ, 'ನಮ್ಮ ಪಕ್ಷ ಮುಂದಿನ ಚುನಾವಣೆಯಲ್ಲಿ 141 ಕ್ಷೇತ್ರಗಳನ್ನು ಗೆಲ್ಲುವುದು ಖಚಿತ. ಬಿಜೆಪಿ 65-70 ಕ್ಷೇತ್ರಗಳನ್ನು ಗೆಲ್ಲಲಿದೆ' ಎಂದು ಅವರು ತಿಳಿಸಿದರು.
ಬಿಜೆಪಿ ಅಸಮಾಧಾನಿತರು ನಿಮ್ಮನ್ನು ಸಂಪರ್ಕಿಸಿದ್ದರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, 'ನಾನು ಈಗಲೇ ಯಾರ ವಿಚಾರವನ್ನೂ ಮಾತನಾಡುವುದಿಲ್ಲ. ಬಿಜೆಪಿಯಲ್ಲಿ ಸರಣಿ ರಾಜೀನಾಮೆ ನೀಡಲಾಗುತ್ತಿದೆ. ನಾವು ಯಾರ ಸಂಪರ್ಕದಲ್ಲೂ ಇಲ್ಲ. ನಮ್ಮ ಶಾಸಕರು, ಕಾರ್ಯಕರ್ತರ ಜತೆ ಮಾತುಕತೆ ನಡೆಸಿದ್ದೇವೆ ಎಂದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.