ಬೆಂಗಳೂರು: ಮೀಸಲಾತಿ ಹೆಚ್ಚಳದ ವಿಚಾರವಾಗಿ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ಗೆ ರಾಜ್ಯ ಬಿಜೆಪಿ ಸರ್ಕಾರ ತನ್ನ ಅಫಿಡವಿಟ್ ಸಲ್ಲಿಸಲು ವಿಫಲವಾಗಿದೆ. ಈ ಅಫಿಡವಿಟ್ ಸಲ್ಲಿಸುವವರೆಗೂ ಸರ್ಕಾರದ ಆದೇಶ ಜಾರಿಗೆ ಬರಲು ಸಾಧ್ಯವೇ ಇಲ್ಲ.ಆಮೂಲಕ ಬಿಜೆಪಿ ಸರ್ಕಾರ ಮೀಸಲಾತಿ ಹೆಸರಿನಲ್ಲಿ ಲಿಂಗಾಯತರು, ಒಕ್ಕಲಿಗರು, ಪರಿಶಿಷ್ಟ ಜಾತಿ ಹಾಗೂ ಪಂಗಡ, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರಿಗೆ ಮಾಡಿದ ಮೋಸ ಮತ್ತೊಮ್ಮೆ ಇಂದು ಸುಪ್ರೀಂ ಕೋರ್ಟ್ ನಲ್ಲಿ ಬಯಲಾಗಿದೆ ಎಂದು ಎಐಸಿಸಿ ವಕ್ತಾರ ಗೌರವ್ ವಲ್ಲಭ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: Soundarya Death Anniversary: ಅಗಲಿ 19 ವರ್ಷವಾದರೂ ಮಾಸದ ʻಸೌಂದರ್ಯʼ ನೆನಪು.. ಇಂದಿಗೂ ಜನಮಾನಸದಲ್ಲಿ ಅಜಾರಮರ!
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 'ಬೊಮ್ಮಾಯಿ ಅವರ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಈ ನೂತನ ಮೀಸಲಾತಿ ಆಧಾರದ ಮೇಲೆ ಯಾವುದೇ ನೇಮಕಾತಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದೆ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ಯಾವುದೇ ತಯಾರಿ, ಯೋಜನೆ ಇಲ್ಲದೆ ಕೇವಲ ರಾಜ್ಯದ 6.50 ಕೋಟಿ ಕನ್ನಡಿಗರಿಗೆ ದ್ರೋಹ ಬಗೆಯಲು ಬಿಜೆಪಿ ಸರ್ಕಾರ ಮೀಸಲಾತಿ ಹೆಚ್ಚಳ ಆದೇಶ ನೀಡಿತ್ತು ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದರು.
ನಾವು ಆರಂಭದಿಂದಲೂ ಹೇಳುತ್ತಿದ್ದಂತೆ, ಬೊಮ್ಮಾಯಿ ಅವರ ಸರ್ಕಾರದ ಮೀಸಲಾತಿ ಹೆಚ್ಚಳದ ವಿಚಾರವು ಎಲ್ಲ ಸಮುದಾಯಗಳಿಗೆ ನಂಬಿಕೆ ದ್ರೋಹ ಬಗೆಯುವ ಷಡ್ಯಂತ್ರವಾಗಿತ್ತು. ಮೀಸಲಾತಿ ಹೆಚ್ಚಳದ ಆದೇಶ ಹೊರಡಿಸಿರುವ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಈ ಆದೇಶಕ್ಕೆ ಸಂಬಂಧಿಸಿದಂತೆ ಅಫಿಡವಿಟ್ ಸಲ್ಲಿಕೆ ಮಾಡಲು ಸಾಧ್ಯವಾಗಿಲ್ಲ. ಇದೆಲ್ಲದರ ಪರಿಣಾಮ ಸರ್ಕಾರದ ಪಿತೂರಿ ಸುಪ್ರೀಂ ಕೋರ್ಟ್ ನಲ್ಲಿ ಬಹಿರಂಗವಾಗಿದೆ.
ಕಳೆದ 90 ದಿನಗಳಲ್ಲಿ ಈ ಸರ್ಕಾರ ಮೀಸಲಾತಿ ವರ್ಗೀಕರಣವನ್ನು 3 ಬಾರಿ ಬದಲಿಸಿತ್ತು. ಇದು ಸರ್ಕಾರದ ಅಪ್ರಮಾಣಿಕತೆಗೆ ಸಾಕ್ಷಿಯಾಗಿದೆ. ಸಮಾಜಗಳನ್ನು ಒಡೆದು, ಅವರಲ್ಲಿ ದ್ವೇಷ ಬಿತ್ತುವ ಬೊಮ್ಮಾಯಿ ಸರ್ಕಾರದ ಷಡ್ಯಂತ್ರ ಸ್ಪಷ್ಟವಾಗಿದೆ.
ಪರಿಶಿಷ್ಟ ಜಾತಿಯ ಮೀಸಲಾತಿ ಪ್ರಮಾಣವನ್ನು ಶೇ.15ರಿಂದ ಶೇ.17ಕ್ಕೆ. ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣವನ್ನು ಶೇ.3ರಿಂದ ಶೇ.4ಕ್ಕೆ ಏರಿಕೆ ಮಾಡಿದ ಪರಿಣಾಮ ಮೀಸಲಾತಿ ಪ್ರಮಾಣ ಶೇ.50ರ ಮಿತಿಯನ್ನು ದಾಟಿದೆ. ಈ ವಿಚಾರವನ್ನು ನಾವು ಆರಂಭದಿಂದಲೂ ಹೇಳುತ್ತಿದ್ದು, ಈ ಸಮುದಾಯಗಳಿಗೆ ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ನೀಡಬೇಕು ಎಂದು ರಾಹುಲ್ ಗಾಂಧಿ ಅವರು ಕೋಲಾರದ ಜೈ ಭಾರತ ಸಮಾವೇಶದಲ್ಲಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಪಕ್ಷದಲ್ಲಿ ಕಡೆಗಣಿಸುತ್ತಿರುವುದಕ್ಕೆ ಮಾರ್ಮಿಕ ಒಗಟಿನ ಪೋಸ್ಟ್ ಮಾಡಿದ ತೇಜಸ್ವಿನಿ ಅನಂತ್ ಕುಮಾರ್!
ಕಳೆದ 10 ವರ್ಷಗಳಿಂದ ಜನಗಣತಿ ನಡೆಸಲಾಗಿಲ್ಲ. ಮೋದಿ ಹಾಗೂ ಬೊಮ್ಮಾಯಿ ಅವರ ಸರ್ಕಾರ ಜಾತಿ ಗಣತಿ ಅಂಕಿ ಅಂಶಗಳನ್ನು ಬಹಿರಂಗಪಡಿಸುತ್ತಿಲ್ಲ. ಅವರು ಮಾತೆತ್ತಿದರೆ ಡಬಲ್ ಇಂಡಿನ ಸರ್ಕಾರ ಎನ್ನುತ್ತಾರೆ. ಈ ಇಂಜಿನಗಳು ರಾಜ್ಯದ ಜನರಿಗೆ ಮೋಸ ಮಾಡುತ್ತಿದ್ದು, ಇವು ಟ್ರಬಲ್ ಇಂಜಿನ್ ಸರ್ಕಾರವಾಗಿವೆ. ಮೀಸಲಾತಿ ವಿಚಾರದಲ್ಲಿ ಒಂದು ಅಫಿಡವಿಟ್ ಸಲ್ಲಿಸಲಾಗದ ಸರ್ಕಾರಕ್ಕೆ ನಾಚಿಕೆಯಾಗಬೇಕು. ಈ ಸರ್ಕಾರ 40% ಕಮಿಷನ್ ಲೂಟಿ ಮಾಡುವುದನ್ನು ಬಿಟ್ಟು ಇನ್ನೇನೂ ಮಾಡಿಲ್ಲ.
ಲಿಂಗಾಯತ ಸಮುದಾಯ ಶೇ.15ರಷ್ಟು ಮೀಸಲಾತಿ ಹೆಚ್ಚಳಕ್ಕೆ, ಒಕ್ಕಲಿಗ ಸಮುದಾಯ ಶೇ.12ರಷ್ಟು ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿದರೆ ಬೊಮ್ಮಾಯಿ ಅವರ ಸರ್ಕಾರ ಕೇವಲ ತಲಾ ಶೇ.2ರಷ್ಟು ಮಾತ್ರ ಹೆಚ್ಚಳ ಮಾಡಿದೆ. ಎಲ್ಲ ಲಿಂಗಾಯತ ಸ್ವಾಮೀಜಿಗಳು ಹಾಗೂ ನಾಯಕರು ಈ ತೀರ್ಮಾನಕ್ಕೆ ಬೇಸರವಾಗಿದ್ದಾರೆ. ಈ ಕುತಂತ್ರದಿಂದ ಬಿಜೆಪಿ ಸರ್ಕಾರ ಸಮಾಜದ ಸ್ವಾಸ್ಥ್ಯ ನಾಶ ಮಾಡುತ್ತಿದೆ.
ಸಾಮಾಜಿಕ ನ್ಯಾಯ, ಶೋಷಿತ ಸಮುದಾಯಗಳನ್ನು ಮೇಲೆತ್ತುವ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಅಗತ್ಯ ಕ್ರಮ ಕೈಗೊಳ್ಳಲಿದೆ. ಕಾಂಗ್ರೆಸ್ ಪಕ್ಷ ಈ ವಿಚಾರದಲ್ಲಿ ಜನರಿಗೆ ಮೋಸ ಮಾಡುವುದಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕಿಂಚಿತ್ತಾದರೂ ನಾಚಿಕೆ ಇದ್ದರೆ ಈ ವಿಚಾರದಲ್ಲಿ ಆಲೋಚನೆ ನಡೆಸಬೇಕು.
ಮೀಸಲಾತಿ ವಿಚಾರದಲ್ಲಿ ಬಿಜೆಪಿ ಸರ್ಕಾರ ರಾಜ್ಯದ ಜನರಿಗೆ ಲಾಲಿಪಾಪ್ ನೀಡಿದ್ದು, ಅದರಲ್ಲಿ ಕೇವಲ ಕಡ್ಡಿ ಇದೆಯೇ ಹೊರತು ಬೇರೇನೂ ಇಲ್ಲವಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.