ನಟ ದರ್ಶನ್ ಕೋವಿಡ್-19 ನಿಯಮ ಉಲ್ಲಂಘನೆ ವಿಚಾರ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತರಾಟೆ

ಹಿಂದಿನ ವಿಚಾರಣೆ ವೇಳೆ ಸರ್ಕಾರಕ್ಕೆ ಸೂಚನೆ ನೀಡಿದ್ದ ಪೀಠ, ಕೋವಿಡ್-19 ಮಾರ್ಗಸೂಚಿಗಳನ್ನು ಯಾರೇ ಉಲ್ಲಂಘಿಸಿದರೂ ನಿಯಮಾನುಸಾರ ಕ್ರಮ ಜರುಗಿಸಿ, ಪ್ರಭಾವಿಗಳೆಂದು ಕ್ರಮ ಜರುಗಿಸಲು ಹಿಂದೆಟು ಹಾಕಬೇಡಿ ಎಂದು ಸೂಚಿಸಿತ್ತು.  

Last Updated : Jul 27, 2020, 03:12 PM IST
ನಟ ದರ್ಶನ್ ಕೋವಿಡ್-19 ನಿಯಮ ಉಲ್ಲಂಘನೆ ವಿಚಾರ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತರಾಟೆ title=

ಬೆಂಗಳೂರು: ನಟ ದರ್ಶನ್ (Darshan) ಹಾಗೂ ರಾಜಕಾರಣಿಗಳು ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ವೇಳೆ ಕೋವಿಡ್-19 (Covid-19) ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಜನಪ್ರತಿನಿಧಿಗಳು, ನಟರು ಕೊರೊನಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ವಕೀಲೆ ಗೀತಾ ಮಿಶ್ರಾ ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಸೂಕ್ತ ಕ್ರಮ ಜರುಗಿಸದ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಹಿಂದಿನ ವಿಚಾರಣೆ ವೇಳೆ ಸರ್ಕಾರಕ್ಕೆ ಸೂಚನೆ ನೀಡಿದ್ದ ಪೀಠ, ಕೋವಿಡ್-19 ಮಾರ್ಗಸೂಚಿಗಳನ್ನು ಯಾರೇ ಉಲ್ಲಂಘಿಸಿದರೂ ನಿಯಮಾನುಸಾರ ಕ್ರಮ ಜರುಗಿಸಿ, ಪ್ರಭಾವಿಗಳೆಂದು ಕ್ರಮ ಜರುಗಿಸಲು ಹಿಂದೆಟು ಹಾಕಬೇಡಿ ಎಂದು ಸೂಚಿಸಿತ್ತು.

Video: ‘ಒಬ್ಬ ಸೆಲೆಬ್ರಿಟಿಯಿಂದ ಇನ್ನೊಬ್ಬ ಸೆಲೆಬ್ರಿಟಿಗೆ ಓಪನ್ ಚಾಲೆಂಜ್': ದರ್ಶನ್ ಚಾಲೆಂಜ್ ಹಾಕಿದ್ದು ಯಾರಿಗೆ?

ಸೋಮವಾರ ನಡೆದ ವಿಚಾರಣೆ ವೇಳೆ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಕ್ರಮ ಜರುಗಿಸಿರುವ ಕುರಿತು ಮಾಹಿತಿ ನೀಡಲು ಯತ್ನಿಸಿದರು. ಪರಮೇಶ್ವರ್ ನಾಯ್ಕ್ ಮಗನ ಮದುವೆ, ಏರ್ಪೋರ್ಟ್ ನಲ್ಲಿ ಕೆಂಪೇಗೌಡ ಪ್ರತಿಮೆ ಸ್ಥಾಪಿಸುವ ಕಾಮಗಾರಿ ಪೂಜೆ ಸೇರಿದಂತೆ ಹಲವು ಕಾರ್ಯಕ್ರಮದಲ್ಲಿ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಜರುಗಿಸಿರುವ ಕುರಿತು ಪೀಠ ಎತ್ತಿದ ಹಲವು ಪ್ರಶ್ನೆಗಳಿಗೆ ಎಎಜಿ ಬಳಿ ಸಮರ್ಪಕ ವಿವರಣೆ ಇರಲಿಲ್ಲ.

ಇನ್ನು ಮೈಸೂರಿನ (Mysore) ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನಟ ದರ್ಶನ್, ರಾಜಕಾರಣಿಗಳಾದ ಶೋಭಾ ಕರಂದ್ಲಾಜೆ, ಮಾಜಿ ಶಾಸಕ ಸೋಮಶೇಖರ್ ಸರಿಯಾಗಿ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ದೇವಸ್ಥಾನ ಪ್ರವೇಶಿಸಿದ ವಿಚಾರ ಪ್ರಸ್ತಾಪಿಸಲಾಯಿತು. ಈ ವೇಳೆ ಪೀಠ ದೇವಸ್ಥಾನಕ್ಕೆ ಪ್ರವೇಶಿಸಿಲು ಅನುಮತಿ ನೀಡಿದ್ದು ಹೇಗೆ ಎಂದು ಪ್ರಶ್ನಿಸಿತು.

ಇದಕ್ಕೆ ಸರ್ಕಾರದ ಪರ ವಕೀಲರು ಉತ್ತರಿಸಿ ಕೆಲ ಆಯ್ದ ವ್ಯಕ್ತಿಗಳಿಗೆ ದೇವಸ್ಥಾನದಿಂದ ಅವಕಾಶ ಕಲ್ಪಿಸಲಾಗಿದೆ ಎಂದರು. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೀಠ, ದೇವಸ್ಥಾನವೆಂದ ಮೇಲೆ ಎಲ್ಲರೂ ಭಕ್ತರೆ, ಅಂತಹುದರಲ್ಲಿ ಆಯ್ದ ವ್ಯಕ್ತಿಗಳಿಗೆ ಹೇಗೆ ಅವಕಾಶ ನೀಡಲಾಗಿದೆ. ಯಾವ ಕಾನೂನಿನಡಿ ನಟರು, ರಾಜಕಾರಣಿಗಳಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ನಿಯಮ ಉಲ್ಲಂಘಿಸಿರುವ ಇವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರಕ್ಕೆ ತೀವ್ರ ತರಾಟೆಗೆ ತೆಗೆದುಕೊಂಡಿತು.

ಬಳಿಕ ಈ ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ ಸಮಗ್ರ ವಿವರ ಸಲ್ಲಿಸುವಂತೆ ತಾಕೀತು ಮಾಡಿ ವಿಚಾರಣೆಯನ್ನು ಆಗಸ್ಟ್ 11ಕ್ಕೆ ಮುಂದೂಡಿತು.
 

Trending News